ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ; ಸ್ವಾಮೀಜಿಗೆ 35 ವರ್ಷ ಜೈಲು ಶಿಕ್ಷೆ

ಬೆಳಗಾವಿ: ಮಠಕ್ಕೆ ಬಂದಿದ್ದ ಅಪ್ರಾಪ್ತ ಭಕ್ತೆಯನ್ನು ತನ್ನ ಕಾರಿನಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿದ್ದ ಪ್ರಕರಣ ಸಾಬೀತಾಗಿದ್ದು, ಆರೋಪಿ ಸ್ವಾಮೀಜಿಗೆ 35 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿ ಬೆಳಗಾವಿ ಪೋಕ್ಸೊ ನ್ಯಾಯಾಲಯ ಆದೇಶ ನೀಡಿದೆ.
ರಾಯಬಾಗ (Raybag) ತಾಲೂಕಿನ ಮೇಖಳಿ ಗ್ರಾಮದ ರಾಮಮಂದಿರ ಮಠದ ಹಠಯೋಗಿ ಲೋಕೇಶ್ವರ ಸ್ವಾಮೀಜಿ ಮೇ 13 ರಂದು ಮಠಕ್ಕೆ ಬಂದಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ತನ್ನ ಕಾರಿನಲ್ಲಿ ಕರೆದೊಯ್ದಿದ್ದ.
ನಂತರ ರಾಯಚೂರು, ಬಾಗಲಕೋಟೆ ಸೇರಿದಂತೆ ಅನೇಕ ಸ್ಥಳಗಳಲ್ಲಿ ಸುತ್ತಾಡಿಸಿ ಅತ್ಯಾಚಾರ ಎಸಗಿ ಕೊನೆಗೆ ಮಹಾಲಿಂಗಪುರ ಬಸ್‌ ನಿಲ್ದಾಣದಲ್ಲಿ ಬಿಟ್ಟು ತಲೆ ಮರೆಸಿಕೊಂಡಿದ್ದ.

ಅತ್ಯಾಚಾರದ ಕುರಿತು ಬಾಲಕಿ ಕುಟುಂಬದವರು ಬಾಗಲಕೋಟೆ ಮಹಿಳಾ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ತದನಂತರ ಬೆಳಗಾವಿ ಜಿಲ್ಲೆಯ ಮೂಡಲಗಿ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಿ ಮೇ 24 ರಂದು ಅತ್ಯಾಚಾರ ಆರೋಪಿ ಸ್ವಾಮಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶೆ ಸಿ.ಎಂ. ಪುಷ್ಪಲತಾ ಶನಿವಾರ ತೀರ್ಪು ಪ್ರಕಟ ಮಾಡಿದ್ದಾರೆ. ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ರೂ. 4 ಲಕ್ಷ ಪರಿಹಾರ ಧನ ಪಡೆಯಲು ನ್ಯಾಯಾಲಯ ಆದೇಶಿಸಿದೆ. ಪರಿಹಾರ ಹಣವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಐದು ವರ್ಷಗಳ ವರೆಗೆ ಮುದ್ದತ್ತ ಠೇವಣಿಯಾಗಿ ಇಡಲು ನ್ಯಾಯಾಲಯ ತಿಳಿಸಿದೆ. ವಿಶೇಷ ಸರಕಾರಿ ಅಭಿಯೋಜಕ ಎಲ್. ವಿ. ಪಾಟೀಲ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ಪ್ರಮುಖ ಸುದ್ದಿ :-   ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ; ಸಿಎಂ ಡಿಕೆ ಶಿವಕುಮಾರ ಘೋಷಣೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement