ಪೂರ್ವ ಮೇದಿನಿಪುರ: ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ಭಗವಾನಪುರದಲ್ಲಿ ಖಾಸಗಿ ಶಾಲೆಯ ಕಾರ್ಯಕ್ರಮವೊಂದರಲ್ಲಿ ಭಕ್ತಿಗೀತೆ ಹಾಡಿದ್ದಕ್ಕಾಗಿ ಕೋಲ್ಕತ್ತಾ ಮೂಲದ ಖ್ಯಾತ ಗಾಯಕಿ ಲಗ್ನಜಿತಾ ಚಕ್ರವರ್ತಿ ಅವರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಶಾಲೆಯ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರ ಭಗವಾನಪುರದ ‘ಸೌತ್ ಪಾಯಿಂಟ್ ಪಬ್ಲಿಕ್ ಸ್ಕೂಲ್’ನ ವಾರ್ಷಿಕೋತ್ಸವದಲ್ಲಿ ಲಗ್ನಜಿತಾ ಅವರು ‘ದೇವಿ ಚೌಧುರಾನಿ’ ಚಿತ್ರದ ‘ಜಾಗೋ ಮಾ’ ಎಂಬ ಬಂಗಾಳಿ ಭಕ್ತಿಗೀತೆಯನ್ನು ಹಾಡುತ್ತಿದ್ದರು. ಈ ವೇಳೆ ವೇದಿಕೆಗೆ ಬಂದ ಶಾಲೆಯ ಸಹ ಮಾಲೀಕ ಮೆಹಬೂಬ್ ಮಲ್ಲಿಕ್, ಗಾಯಕಿಯನ್ನು ನಿಂದಿಸಿ ದೈಹಿಕವಾಗಿ ಹಲ್ಲೆ ನಡೆಸಲು ಯತ್ನಿಸಿದ ಎನ್ನಲಾಗಿದೆ.
“ಸಾಕಷ್ಟು ‘ಜಾಗೋ ಮಾ’ ಹಾಡಿದ್ದು ಆಯಿತು, ಈಗ ಯಾವುದಾದರೂ ಸೆಕ್ಯುಲರ್ (ಜಾತ್ಯತೀತ) ಹಾಡು ಹಾಡು” ಎಂದು ಮಲ್ಲಿಕ್ ಗದರಿಸಿದ್ದಾಗಿ ಲಗ್ನಜಿತಾ ದೂರಿದ್ದಾರೆ.
ಗಾಯಕಿಯ ದೂರಿನ ಮೇರೆಗೆ ಮೆಹಬೂಬ್ ಮಲ್ಲಿಕ್‌ನನ್ನು ಬಂಧಿಸಲಾಗಿದ್ದು, ಸೋಮವಾರ ಕಾಂಟಾಯ್ ಉಪ-ವಿಭಾಗೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
ದೂರು ನೀಡಲು ಹೋದಾಗ ಗಾಯಕಿಯನ್ನು ಗಂಟೆಗಟ್ಟಲೆ ಕಾಯಿಸಿ, ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ ಭಗವಾನಪುರ ಪೊಲೀಸ್ ಠಾಣೆಯ ಓಸಿ (OC) ಶೆಹನ್ ಶಾ ಹಕ್ ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ.
ಆರೋಪಿಯ ಸಹೋದರ ಮಸೂದ್ ಮಲ್ಲಿಕ್ ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಗಾಯಕಿ ಹೆಚ್ಚಿನ ಹಣದ ಬೇಡಿಕೆ ಇಟ್ಟಿದ್ದರು ಮತ್ತು ಅದು ಈಡೇರದಿದ್ದಕ್ಕೆ ಸುಳ್ಳು ದೂರು ನೀಡಿದ್ದಾರೆ ಎಂದು ಅವರು ವಾದಿಸಿದ್ದಾರೆ.
ಗಾಯಕಿ ಪೌಶಾಲಿ ಬ್ಯಾನರ್ಜಿ ಅವರು ಲಗ್ನಜಿತಾ ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಲಾವಿದರ ಮೇಲೆ ಇಂತಹ ದೌರ್ಜನ್ಯಗಳು ಹೆಚ್ಚುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ಬೆನ್ನಲ್ಲೇ ಬಿಜೆಪಿ ನಾಯಕ ಶಂಕುದೇವ ಪಾಂಡಾ ಪ್ರತಿಕ್ರಿಯಿಸಿ, “ತೃಣಮೂಲ ಕಾಂಗ್ರೆಸ್‌ನ ಬೆಂಬಲ ಇರುವುದರಿಂದಲೇ ಈ ತರಹದ ವ್ಯಕ್ತಿಗಳು ಇಂತಹ ಕೃತ್ಯ ಎಸಗುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ