“ಬಾಂಗ್ಲಾದೇಶವು ಮುಸ್ಲಿಮರು, ಹಿಂದೂಗಳು, ಕ್ರೈಸ್ತರು…ಎಲ್ಲರಿಗಾಗಿ”: ಏಕತೆಗೆ ಮನವಿ ಮಾಡಿದ 17 ವರ್ಷಗಳ ಬಳಿಕ ದೇಶಕ್ಕೆ ಮರಳಿದ ತಾರಿಖ್ ರೆಹಮಾನ್

ಢಾಕಾ : ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಕಾರ್ಯಾಧ್ಯಕ್ಷ ತಾರಿಖ್ ರೆಹಮಾನ್ ಅವರು 17 ವರ್ಷಗಳ ಸುದೀರ್ಘ ಅವಧಿಯ ನಂತರ ಇಂದು ಢಾಕಾ ತಲುಪಿದ್ದು, ಸಂಕಷ್ಟದಲ್ಲಿರುವ ತಮ್ಮ ರಾಷ್ಟ್ರದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ತರಲು ಒಗ್ಗೂಡಿ ಕೆಲಸ ಮಾಡುವಂತೆ ಜನತೆಗೆ ಕರೆ ನೀಡಿದ್ದಾರೆ.
ಯುವ ನಾಯಕ ಶರೀಫ್ ಉಸ್ಮಾನ್ ಹಾದಿ ಅವರ ಹತ್ಯೆಯ ನಂತರ ಬಾಂಗ್ಲಾದೇಶದಲ್ಲಿ ಉಂಟಾದ ತೀವ್ರ ಅಶಾಂತಿ ಮತ್ತು ರಾಜಕೀಯ ಅಸ್ಥಿರತೆಯ ಹಿನ್ನೆಲೆಯಲ್ಲಿ ರೆಹಮಾನ್ ಅವರ ಈ ಮನವಿ ಮಹತ್ವ ಪಡೆದುಕೊಂಡಿದೆ.
ವಿಮಾನ ನಿಲ್ದಾಣದಿಂದ ನೇರವಾಗಿ ಬೃಹತ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರೆಹಮಾನ್, “ನಾವು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಾಗಿರಲಿ, ಯಾವುದೇ ಧರ್ಮವನ್ನು ನಂಬುವವರಾಗಿರಲಿ ಅಥವಾ ಯಾವುದೇ ಪಕ್ಷಪಾತವಿಲ್ಲದ ವ್ಯಕ್ತಿಗಳಾಗಿರಲಿ – ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ನಾವೆಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಮಾಜಿ ಪ್ರಧಾನಿ ಖಲೀದಾ ಜಿಯಾ ಪುತ್ರರಾಗಿರುವ 60 ವರ್ಷದ ರೆಹಮಾನ್, ಮುಂಬರುವ ಬಾಂಗ್ಲಾದೇಶ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗುವ ಸಾಧ್ಯತೆ ದಟ್ಟವಾಗಿದೆ. ಅಮೆರಿಕದ ನಾಗರಿಕ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಅವರ ಮಾತನ್ನು ಉಲ್ಲೇಖಿಸಿದ ಅವರು, “ನನ್ನ ದೇಶ ಮತ್ತು ನನ್ನ ದೇಶದ ಜನರಿಗಾಗಿ ನನ್ನ ಬಳಿ ಒಂದು ಯೋಜನೆಯಿದೆ ಎಂದರು.
ಸುರಕ್ಷಿತ ಬಾಂಗ್ಲಾದೇಶ ನನ್ನ ಗುರಿ
“ಈ ಯೋಜನೆಯು ಜನರ ಹಿತಾಸಕ್ತಿಗಾಗಿ, ದೇಶದ ಅಭಿವೃದ್ಧಿಗಾಗಿ ಮತ್ತು ದೇಶದ ಹಣೆಬರಹವನ್ನು ಬದಲಾಯಿಸಲು ರೂಪಿಸಲಾಗಿದೆ. ಇದನ್ನು ಜಾರಿಗೆ ತರಲು ನನಗೆ ಜನರ ಬೆಂಬಲ ಬೇಕು. ನೀವು ನಮ್ಮೊಂದಿಗೆ ನಿಂತರೆ, ದೇವರ ಇಚ್ಛೆಯಂತೆ ನಾವು ಈ ಯೋಜನೆಯನ್ನು ಕಾರ್ಯಗತಗೊಳಿಸಲು ಸಾಧ್ಯವಾಗುತ್ತದೆ,” ಎಂದು ಅವರು ಆಶಯ ವ್ಯಕ್ತಪಡಿಸಿದರು. ಜಾತಿ, ಮತ, ಪಂಥಗಳ ಭೇದವಿಲ್ಲದೆ ಪ್ರತಿಯೊಬ್ಬರೂ ಶಾಂತಿಯುತವಾಗಿ ಬದುಕುವ ಸುರಕ್ಷಿತ ಬಾಂಗ್ಲಾದೇಶವನ್ನು ನಿರ್ಮಿಸುವುದು ನನ್ನ ಗುರಿ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಪಾಕಿಸ್ತಾನದಲ್ಲಿ 100 ವರ್ಷಗಳಿಗೂ ಹಳೆಯ ಹಿಂದೂ ದೇವಾಲಯ ಧ್ವಂಸ : ವರದಿ

ಬದಲಾದ ರಾಜಕೀಯ ಚಿತ್ರಣ
ಅಂತರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ಕಾಯ್ದೆಯಡಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಧ್ಯಂತರ ಸರ್ಕಾರ ತಡೆ ಹಿಡಿದಿದೆ. ಈ ಹಿನ್ನೆಲೆಯಲ್ಲಿ, ಬಿಎನ್‌ಪಿಯ ಹಳೆಯ ಮಿತ್ರ ಪಕ್ಷವಾದ ಜಮಾತ್-ಎ-ಇಸ್ಲಾಮಿ ಈಗ ಮುಂಬರುವ ಚುನಾವಣೆಯಲ್ಲಿ ಬಿಎನ್‌ಪಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿದೆ.
ರ್ಯಾಲಿಯ ನಂತರ ರೆಹಮಾನ್ ಅವರು ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ತಾಯಿ ಮತ್ತು ಬಿಎನ್‌ಪಿ ಅಧ್ಯಕ್ಷೆ ಖಲೀದಾ ಜಿಯಾ ಅವರನ್ನು ಭೇಟಿ ಮಾಡಿದರು ಮತ್ತು ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುವಂತೆ ಜನರಲ್ಲಿ ಮನವಿ ಮಾಡಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement