ಬದೌನ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ಸಿರ್ಸೌಲಿ ಗ್ರಾಮದಲ್ಲಿ ಕಾಡುಹಂದಿಯೊಂದನ್ನು ಹಿಡಿಯಲು ಹೋದ ಅರಣ್ಯ ಇಲಾಖೆಯ ತಂಡದ ಮೇಲೆ ಹಂದಿ ದಿಢೀರ್ ದಾಳಿ ನಡೆಸಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬದೌನ್ ಜಿಲ್ಲೆಯ ಉಝಾನಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿರ್ಸೌಲಿ ಗ್ರಾಮದ ಕೃಷಿ ಜಮೀನುಗಳಲ್ಲಿ ಕಳೆದ ಕೆಲವು ದಿನಗಳಿಂದ ಕಾಡುಹಂದಿಯೊಂದು ಸುತ್ತಾಡುತ್ತಿದ್ದು, ಗ್ರಾಮಸ್ಥರಲ್ಲಿ ಭೀತಿ ಸೃಷ್ಟಿಸಿತ್ತು. ಗ್ರಾಮಸ್ಥರ ದೂರಿನ ಮೇರೆಗೆ ಗುರುವಾರ ಮಧ್ಯಾಹ್ನ ಅರಣ್ಯ ಇಲಾಖೆ ಅಧಿಕಾರಿ ಶಿವಂ ಪ್ರತಾಪ ಸಿಂಗ್ ನೇತೃತ್ವದ ತಂಡ ಹಂದಿಯನ್ನು ಸೆರೆಹಿಡಿಯಲು ಗ್ರಾಮಕ್ಕೆ ಆಗಮಿಸಿತ್ತು.
ಹಂದಿಯು ಗ್ರಾಮದ ಸಮೀಪವಿರುವ ಸಣ್ಣ ಕಾಲುವೆಯೊಂದರಲ್ಲಿ ಅಡಗಿದೆ ಎಂಬ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ತಂಡ ಕಾಲುವೆಯ ಸುತ್ತ ಬಲೆ ಬೀಸಿತ್ತು. ಕಾಲುವೆಯಲ್ಲಿ ನೀರಿಲ್ಲದ ಕಾರಣ ಪರಿಸ್ಥಿತಿಯನ್ನು ಪರಿಶೀಲಿಸಲು ಶಿವಂ ಪ್ರತಾಪ ಸಿಂಗ್ ಕೆಳಗಿಳಿದಿದ್ದಾರೆ. ಈ ವೇಳೆ ಪೊದೆಯಲ್ಲಿದ್ದ ಹಂದಿ ಏಕಾಏಕಿ ನುಗ್ಗಿ ತಂಡದ ಮೇಲೆ ದಾಳಿ ಮಾಡಿದೆ. ಇತರ ಸಿಬ್ಬಂದಿ ತಪ್ಪಿಸಿಕೊಂಡರಾದರೂ, ಓಡುವ ಭರದಲ್ಲಿ ಶಿವಂ ಅವರು ಕೆಳಗೆ ಬಿದ್ದಿದ್ದಾರೆ.
ತಕ್ಷಣವೇ ಹಂದಿಯು ಅವರ ಸೊಂಟದ ಕೆಳಭಾಗವನ್ನು ತನ್ನ ದವಡೆಗಳಿಂದ ಬಲವಾಗಿ ಕಚ್ಚಿ ಹಿಡಿದಿದೆ. ಶಿವಂ ಎಷ್ಟೇ ಪ್ರಯತ್ನಿಸಿದರೂ ಹಂದಿಯ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.
50 ಬಾರಿ ಬಡಿಗೆ ಏಟು ಬಿದ್ದ ನಂತರ ಬಿಟ್ಟ ಹಂದಿ:
ತನ್ನ ಸಹೋದ್ಯೋಗಿ ಹಂದಿಯ ಬಾಯಿಗೆ ಸಿಲುಕಿರುವುದನ್ನು ಕಂಡ ಇತರ ಸಿಬ್ಬಂದಿ ಮತ್ತು ಗ್ರಾಮಸ್ಥರು ಬಡಿಗೆಗಳಿಂದ ಹಂದಿಗೆ ಸತತವಾಗಿ ಹೊಡೆಯಲು ಆರಂಭಿಸಿದರು. ಸುಮಾರು 2 ರಿಂದ 3 ನಿಮಿಷಗಳ ಕಾಲ ಹಂದಿಯು ಅಧಿಕಾರಿಯನ್ನು ಬಿಡದೆ ಕಚ್ಚಿ ಹಿಡಿದಿತ್ತು. ಸರಿಸುಮಾರು 50 ಬಾರಿ ಬಡಿಗೆಯಿಂದ ಹೊಡೆದ ನಂತರ ಹಂದಿಯು ಶಿವಂ ಅವರನ್ನು ಬಿಟ್ಟು ಅಲ್ಲಿಂದ ಕಾಲ್ಕಿತ್ತಿದೆ. ನಂತರ ರಕ್ಷಣೆಗೆ ಬಂದವರ ಮೇಲೂ ದಾಳಿಗೆ ಮುಂದಾದ ಹಂದಿ ಹತ್ತಿರದ ಪೊದೆಗಳ ಒಳಗೆ ಓಡಿಹೋಗಿದೆ.
ಅಧಿಕಾರಿಯ ಸ್ಥಿತಿ ಗಂಭೀರ:
ಈ ಭೀಕರ ದಾಳಿಯಲ್ಲಿ ಶಿವಂ ಪ್ರತಾಪ ಸಿಂಗ್ ಅವರ ದೇಹದ ಏಳು ಕಡೆಗಳಲ್ಲಿ ಆಳವಾದ ಗಾಯಗಳಾಗಿವೆ. ಮೊದಲು ಬದೌನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದ ಅವರನ್ನು, ಹೆಚ್ಚಿನ ಚಿಕಿತ್ಸೆಗಾಗಿ ಬರೇಲಿಯ ಸುಸಜ್ಜಿತ ಆಸ್ಪತ್ರೆಗೆ ದಾಖಲಿಸಲಾಗಿದೆ.
“ಗಾಯಗೊಂಡ ಅಧಿಕಾರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಂದಿಯನ್ನು ಸೆರೆಹಿಡಿಯಲು ಮತ್ತೊಂದು ತಂಡವನ್ನು ನಿಯೋಜಿಸಲಾಗುವುದು. ಈ ಹಂದಿ ಅತ್ಯಂತ ಆಕ್ರಮಣಕಾರಿಯಾಗಿದೆ,” ಎಂದು ಫಾರೆಸ್ಟ್ ರೇಂಜರ್ ವಿಕಾಸ ವರುಣ ತಿಳಿಸಿದ್ದಾರೆ.
ಹಂದಿ ಇನ್ನು ಸೆರೆಯಾಗದ ಕಾರಣ ಸಿರ್ಸೌಲಿ ಗ್ರಾಮದ ರೈತರು ಹೊಲಗಳಿಗೆ ಹೋಗಲು ಹೆದರುತ್ತಿದ್ದಾರೆ. ಹಂದಿ ಸೆರೆಯಾಗುವವರೆಗೆ ಜಾಗರೂಕರಾಗಿರುವಂತೆ ಅರಣ್ಯ ಇಲಾಖೆ ಗ್ರಾಮಸ್ಥರಿಗೆ ಸೂಚನೆ ನೀಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ