ಶ್ರೀನಗರ: ಕಾಶ್ಮೀರದ ಪ್ರಮುಖ ಧಾರ್ಮಿಕ ನಾಯಕ ಮತ್ತು ಪ್ರತ್ಯೇಕತಾವಾದಿ ಮುಖಂಡ ಮಿರ್ವೈಜ್ ಉಮರ್ ಫಾರೂಕ್ ಅವರು ತಮ್ಮ ‘ಎಕ್ಸ್’ (X) ಖಾತೆಯಲ್ಲಿದ್ದ ‘ಹುರಿಯತ್ ಅಧ್ಯಕ್ಷ’ ಎಂಬ ಶೀರ್ಷಿಕೆಯನ್ನು ತೆಗೆದುಹಾಕಿದ್ದಾರೆ. ಸರ್ಕಾರದ “ಅಧಿಕೃತ ಎಚ್ಚರಿಕೆ”ಯ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದು, ಜಮ್ಮು-ಕಾಶ್ಮೀರದಲ್ಲಿ ಇದು ತೀವ್ರ ಚರ್ಚೆಗೆ ಕಾರಣವಾಗಿದೆ.
ತಮ್ಮ ನಿರ್ಧಾರದ ಕುರಿತು ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಮಿರ್ವೈಜ್, “ಕಳೆದ ಕೆಲವು ಸಮಯದಿಂದ ನನ್ನ ಖಾತೆಯ ಶೀರ್ಷಿಕೆಯಲ್ಲಿರುವ ‘ಹುರಿಯತ್ ಅಧ್ಯಕ್ಷ’ ಎಂಬ ಪದವನ್ನು ತೆಗೆದುಹಾಕುವಂತೆ ಅಧಿಕಾರಿಗಳು ಒತ್ತಡ ಹೇರುತ್ತಿದ್ದರು. ನಾನು ಮುಖ್ಯಸ್ಥನಾಗಿರುವ ಅವಾಮಿ ಆಕ್ಷನ್ ಕಮಿಟಿ ಸೇರಿದಂತೆ ಹುರಿಯತ್ ಕಾನ್ಫರೆನ್ಸ್‌ನ ಎಲ್ಲಾ ಅಂಗಸಂಸ್ಥೆಗಳನ್ನು UAPA ಅಡಿ ನಿಷೇಧಿಸಲಾಗಿದೆ. ಒಂದು ವೇಳೆ ನಾನು ಈ ಬದಲಾವಣೆ ಮಾಡದಿದ್ದರೆ, ನನ್ನ ಖಾತೆಯನ್ನೇ ಮುಚ್ಚುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದರು ಎಂದು ತಿಳಿಸಿದ್ದಾರೆ.
ಈ ಪರಿಸ್ಥಿತಿಯನ್ನು ಅವರು ‘ಹಬ್ಸನ್ಸ್ ಚಾಯ್ಸ್’ (ಬೇರೆ ಆಯ್ಕೆಯಿಲ್ಲದ ಅನಿವಾರ್ಯ ಸ್ಥಿತಿ) ಎಂದು ಬಣ್ಣಿಸಿದ್ದಾರೆ. “ಸಂವಹನದ ಎಲ್ಲಾ ಮಾರ್ಗಗಳು ನಿರ್ಬಂಧಿಸಲ್ಪಟ್ಟಿರುವ ಈ ಸಮಯದಲ್ಲಿ, ಜನರೊಂದಿಗೆ ಸಂಪರ್ಕ ಸಾಧಿಸಲು ಮತ್ತು ನಮ್ಮ ಸಮಸ್ಯೆಗಳನ್ನು ವಿಶ್ವದ ಮುಂದೆ ಇಡಲು ಈ ಸಾಮಾಜಿಕ ಮಾಧ್ಯಮವೇ ಏಕೈಕ ದಾರಿ. ಹೀಗಾಗಿ ಇದನ್ನು ಉಳಿಸಿಕೊಳ್ಳಲು ಈ ನಿರ್ಧಾರ ಅನಿವಾರ್ಯವಾಯಿತು,” ಎಂದು ಫಾರೂಕ್ ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ