ಮಹೋಬ (ಉತ್ತರ ಪ್ರದೇಶ): ಮನೆಯಲ್ಲಿ ಕೆಲಸಕ್ಕಿದ್ದವರೇ ಮನೆಯ ಯಜಮಾನ ಹಾಗೂ ಅವರ ಮಗಳನ್ನು ಐದು ವರ್ಷಗಳ ಕಾಲ ಕೋಣೆಯಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿದ ದಾರುಣ ಘಟನೆಯೊಂದು ಉತ್ತರ ಪ್ರದೇಶದ ಮಹೋಬ ಜಿಲ್ಲೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ…! ಆರೋಪಿಗಳ ಕ್ರೌರ್ಯಕ್ಕೆ ವೃದ್ಧ ತಂದೆ ಸಾವಿಗೀಡಾಗಿದ್ದು, ಮಾನಸಿಕ ಅಸ್ವಸ್ಥ ಮಗಳು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಮೃತ ವ್ಯಕ್ತಿಯನ್ನು ನಿವೃತ್ತ ರೈಲ್ವೆ ಉದ್ಯೋಗಿ ಓಂಪ್ರಕಾಶ ಸಿಂಗ್ ರಾಥೋಡ್ (70) ಎಂದು ಗುರುತಿಸಲಾಗಿದೆ. 2016 ರಲ್ಲಿ ಪತ್ನಿ ನಿಧನರಾದ ನಂತರ, ಓಂಪ್ರಕಾಶ ಅವರು ತಮ್ಮ 27 ವರ್ಷದ ಮಾನಸಿಕ ಅಸ್ವಸ್ಥ ಮಗಳು ರಶ್ಮಿ ಅವರೊಂದಿಗೆ ಪ್ರತ್ಯೇಕ ಮನೆಯಲ್ಲಿ ವಾಸವಿದ್ದರು. ಓಂಪ್ರಕಾಶಅವರ ಸಹೋದರ ಅಮರ್ ಸಿಂಗ್ ಅವರ ಪ್ರಕಾರ, ಮನೆಯ ಕೆಲಸಗಳನ್ನು ನಿರ್ವಹಿಸಲು ಹಾಗೂ ಆರೈಕೆಗಾಗಿ ಇವರು ರಾಮಪ್ರಕಾಶ ಕುಶ್ವಾಹ ಮತ್ತು ಅವರ ಪತ್ನಿ ರಾಮದೇವಿ ಎಂಬವರನ್ನು ಓಂಪ್ರಕಾಶ ನೇಮಿಸಿಕೊಂಡಿದ್ದರು.
ಐದು ವರ್ಷಗಳ ಕಾಲ ನರಕಯಾತನೆ:
ಎನ್ಡಿಟಿವಿ ಉಲ್ಲೇಖಿಸಿದ ಓಂಪ್ರಕಾಶ ಅವರ ಸಹೋದರ ಅಮರ ಸಿಂಗ್ ಹೇಳಿಕೆ ಪ್ರಕಾರ, ಕೆಲಸಗಾರ ದಂಪತಿ ಇಡೀ ಮನೆಯನ್ನು ತಮ್ಮ ಹತೋಟಿಗೆ ತೆಗೆದುಕೊಂಡಿದ್ದರು. ಓಂಪ್ರಕಾಶ ಮತ್ತು ಅವರ ಮಗಳನ್ನು ಕೆಳಮಹಡಿಯ ಕೋಣೆಗಳಲ್ಲಿ ಕೂಡಿಹಾಕಿ, ಆರೋಪಿಗಳು ಮೇಲ್ಮಹಡಿಯಲ್ಲಿ ವಾಸವಿದ್ದರು. ಕಳೆದ ಐದು ವರ್ಷಗಳಿಂದ ಇವರಿಗೆ ಸರಿಯಾದ ಆಹಾರ, ಚಿಕಿತ್ಸೆ ನೀಡದೆ ಅತ್ಯಂತ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ. “ಯಾವುದೇ ಸಂಬಂಧಿಕರು ಭೇಟಿ ನೀಡಲು ಬಂದಾಗ, ಓಂಪ್ರಕಾಶ ಯಾರನ್ನೂ ಭೇಟಿಯಾಗಲು ಇಷ್ಟಪಡುವುದಿಲ್ಲ ಎಂದು ಸುಳ್ಳು ಹೇಳಿ ದಂಪತಿ ಅವರನ್ನು ವಾಪಸ್ ಕಳುಹಿಸುತ್ತಿದ್ದರು” ಎಂದು ಅಮರ ಸಿಂಗ್ ತಿಳಿಸಿದ್ದಾರೆ.
ಬೆಳಕಿಗೆ ಬಂದ ಭೀಕರತೆ:
ಸೋಮವಾರ ಓಂಪ್ರಕಾಶ ಅವರ ಸಾವಿನ ಸುದ್ದಿ ತಿಳಿದ ನಂತರ ಸಂಬಂಧಿಕರು ಮನೆಗೆ ಧಾವಿಸಿದಾಗ ಈ ಭೀಕರ ಕೃತ್ಯ ಬಯಲಾಗಿದೆ. ವೃದ್ಧನ ದೇಹವು ಪೌಷ್ಟಿಕಾಂಶದ ಕೊರತೆಯಿಂದ ಕೃಶವಾಗಿತ್ತು. ಇನ್ನು ಅವರ ಮಗಳು ರಶ್ಮಿ ಕತ್ತಲೆ ಕೋಣೆಯಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದು, ಹಸಿವಿನಿಂದಾಗಿ ಆಕೆಯ ದೇಹ ಕೇವಲ ಅಸ್ಥಿಪಂಜರದಂತಾಗಿತ್ತು ಎಂದು ಸಂಬಂಧಿಕರು ಕಣ್ಣೀರಿಟ್ಟಿದ್ದಾರೆ. ಯುವತಿ ಅಸ್ಥಿಪಂಜರದ ಸ್ಥಿತಿಗೆ ತಲುಪಿದ್ದಾಳೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. “ಆಕೆಯ ದೇಹದಲ್ಲಿ ಯಾವುದೇ ಮಾಂಸ ಉಳಿದಿರಲಿಲ್ಲ; ಕೇವಲ ಒಂದು ಅಸ್ಥಿಪಂಜರದ ಚೌಕಟ್ಟು ಮಾತ್ರ ಉಳಿದಿತ್ತು ಎಂದು ಸಂಬಂಧಿಕರು ಹೇಳಿದ್ದಾರೆ.
ಪೊಲೀಸ್ ತನಿಖೆ:
ಓಂಪ್ರಕಾಶ ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ಅವರು ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ. ಅತ್ತ ಮಗಳು ರಶ್ಮಿ ಸದ್ಯ ಸಂಬಂಧಿಕರ ಆರೈಕೆಯಲ್ಲಿದ್ದಾರೆ.ಒಬ್ಬ ಗೌರವಾನ್ವಿತ ನಿವೃತ್ತ ಅಧಿಕಾರಿಗೆ ಹಾಗೂ ಅವರ ಮಗಳಿಗೆ ಎದುರಾದ ಈ ದುಸ್ಥಿತಿ ಕಂಡು ಸ್ಥಳೀಯರು ಆಘಾತ ವ್ಯಕ್ತಪಡಿಸಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
ತನಿಖೆ ನಡೆಯುತ್ತಿದೆ ಮತ್ತು ವೈದ್ಯಕೀಯ ಮತ್ತು ವಿಧಿವಿಜ್ಞಾನ ವರದಿಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ