ಫಿರೋಜಪುರ: ಸೋಫಾದಿಂದ ಎದ್ದೇಳುವಾಗ ಸೊಂಟದ ಪಟ್ಟಿಯಲ್ಲಿದ್ದ ಲೋಡ್ ಆಗಿದ್ದ ಪಿಸ್ತೂಲ್ ಆಕಸ್ಮಿಕವಾಗಿ ಸಿಡಿದ ಪರಿಣಾಮ ಅನಿವಾಸಿ ಭಾರತೀಯರೊಬ್ಬರು (NRI) ಮೃತಪಟ್ಟ ದಾರುಣ ಘಟನೆ ಪಂಜಾಬಿನ ಫಿರೋಜ್‌ಪುರ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.
ಮೃತರನ್ನು ಧನಿ ಸುಚಾ ಸಿಂಗ್ ಗ್ರಾಮದ ನಿವಾಸಿ ಹರ್ಪಿಂದರ ಸಿಂಗ್ ಅಲಿಯಾಸ್ ಸೋನು ಎಂದು ಗುರುತಿಸಲಾಗಿದೆ. ಹರ್ಪಿಂದರ ಅವರು ಇತ್ತೀಚೆಗಷ್ಟೇ ವಿದೇಶದಿಂದ ಮರಳಿ ಗ್ರಾಮದಲ್ಲಿ ನೆಲೆಸಿದ್ದರು. ಸೋಮವಾರ ಅವರು ತಮ್ಮ ಸಂಬಂಧಿಕರೊಬ್ಬರ ಜೊತೆ ಸೋಫಾದ ಮೇಲೆ ಕುಳಿತಿದ್ದರು. ಈ ವೇಳೆ ಅವರು ಸೋಫಾದಿಂದ ಮೇಲೆ ಏಳಲು ಪ್ರಯತ್ನಿಸಿದಾಗ, ಸೊಂಟದಲ್ಲಿದ್ದ ಪಿಸ್ತೂಲ್‌ನಿಂದ ಗುಂಡು ಹಾರಿದ್ದು, ಅವರ ಹೊಟ್ಟೆಗೆ ತಗುಲಿದೆ.
ಈ ಸಂಪೂರ್ಣ ದೃಶ್ಯ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗುಂಡಿನ ಶಬ್ದ ಕೇಳುತ್ತಿದ್ದಂತೆ ಕುಟುಂಬಸ್ಥರು ಓಡಿ ಬಂದು ಅವರನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದ್ದಾರೆ. ಆದರೆ, ಬಟಿಂಡಾದ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಹರ್ಪಿಂದರ ಕೊನೆಯುಸಿರೆಳೆದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸದರ್ ಪೊಲೀಸ್ ಠಾಣೆಯ ಅಧಿಕಾರಿ ರವೀಂದರ ಶರ್ಮಾ ಅವರು ಮೃತರ ತಂದೆ ದರ್ಶನ್ ಸಿಂಗ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 194 ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಮೃತ ಹರ್ಪಿಂದರ ಅವರಿಗೆ ಪತ್ನಿ ಮತ್ತು ಎರಡು ವರ್ಷದ ಹೆಣ್ಣು ಮಗಳಿದ್ದಾಳೆ. ಮಂಗಳವಾರ ನಡೆದ ಅಂತ್ಯಕ್ರಿಯೆಯಲ್ಲಿ ಗ್ರಾಮಸ್ಥರು ಹಾಗೂ ಆಮ್ ಆದ್ಮಿ ಪಕ್ಷದ (AAP) ಪ್ರಮುಖರು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ