ಸಂತರ ತೀವ್ರ ವಿರೋಧಕ್ಕೆ ಮಣಿದ ಆಯೋಜಕರು ; ಮಥುರಾದಲ್ಲಿ ಸನ್ನಿ ಲಿಯೋನ್ ಕಾರ್ಯಕ್ರಮ ರದ್ದು

ಲಕ್ನೋ: ಹೊಸ ವರ್ಷದ ಅಂಗವಾಗಿ ಮಥುರಾದಲ್ಲಿ ಆಯೋಜಿಸಲಾಗಿದ್ದ ನಟಿ ಸನ್ನಿ ಲಿಯೋನ್ ಕಾರ್ಯಕ್ರಮವನ್ನು ಸ್ಥಳೀಯ ಸಂತರು ಮತ್ತು ಧಾರ್ಮಿಕ ಮುಖಂಡರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ. ಇಂತಹ ಕಾರ್ಯಕ್ರಮಗಳು ಬ್ರಜ್ ಭೂಮಿಯ ಧಾರ್ಮಿಕ ಸಂಪ್ರದಾಯಗಳಿಗೆ ವಿರುದ್ಧವಾಗಿವೆ ಮತ್ತು ಭಕ್ತರ ಭಾವನೆಗಳಿಗೆ ಧಕ್ಕೆ ತರುತ್ತವೆ ಎಂದು ಅವರು ಅಸಮಾಧಾನವ್ಯಕ್ತಪಡಿಸಿದ್ದಾರೆ.
ಕೋಟಿಗಟ್ಟಲೆ ಭಕ್ತರಿಗೆ ಆಧ್ಯಾತ್ಮಿಕ ಕೇಂದ್ರವಾಗಿರುವ ಪವಿತ್ರ ಮಥುರಾದಲ್ಲಿ ಅಶ್ಲೀಲತೆಯನ್ನು ಉತ್ತೇಜಿಸುವ ಇಂತಹ ಕಾರ್ಯಕ್ರಮಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಸಂತ ಸಮುದಾಯವು ಅಸಮಾಧಾನ ವ್ಯಕ್ತಪಡಿಸಿದೆ.
ಸ್ಥಳೀಯ ಮೂಲಗಳ ಪ್ರಕಾರ, ಜನವರಿ 1 ರಂದು ರಾತ್ರಿ 9 ಗಂಟೆಗೆ ಮಥುರಾದ ಹೋಟೆಲ್ ಒಂದರಲ್ಲಿ ಸನ್ನಿ ಲಿಯೋನ್ ಅವರ ಪ್ರದರ್ಶನ ನಿಗದಿಯಾಗಿತ್ತು. ಸುಮಾರು 300 ಜನರಿಗಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಪ್ರವೇಶ ದರದ ಟಿಕೆಟ್‌ಗಳನ್ನು 20,000 ರೂ. ನಿಂದ 2 ಲಕ್ಷ ರೂ. ವರೆಗೆ ನಿಗದಿಪಡಿಸಲಾಗಿತ್ತು.
ಕಾರ್ಯಕ್ರಮದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ, ಶ್ರೀಕೃಷ್ಣ ಜನ್ಮಭೂಮಿ ಪ್ರಕರಣದ ಮುಖ್ಯ ಅರ್ಜಿದಾರರಾದ ದಿನೇಶ ಫಲಾಹಾರಿ ಸೇರಿದಂತೆ ಹಲವು ಧಾರ್ಮಿಕ ಮುಖಂಡರು ವಿರೋಧ ವ್ಯಕ್ತಪಡಿಸಿದರು. ಸೋಮವಾರ ಆಯೋಜಕರ ವಿರುದ್ಧ ಘೋಷಣೆಗಳನ್ನು ಕೂಗಿದ ಸಂತರು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಕೂಡಲೇ ಕಾರ್ಯಕ್ರಮ ರದ್ದುಗೊಳಿಸುವಂತೆ ಒತ್ತಾಯಿಸಿದರು.
“ಇಂತಹ ಕಾರ್ಯಕ್ರಮಗಳು ಮಥುರಾದ ಘನತೆ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಗುರುತಿಗೆ ಧಕ್ಕೆ ತರುತ್ತವೆ. ಇಂತಹ ಕಾರ್ಯಕ್ರಮಗಳು ನಗರದ ಹೆಸರನ್ನು ಕೆಡಿಸುತ್ತವೆ,” ಎಂದು ಸಂತರು ಅಭಿಪ್ರಾಯಪಟ್ಟಿದ್ದಾರೆ.
ಹೊಟೇಲ್‌ ಮಾಲೀಕರ ಸ್ಪಷ್ಟನೆ:
ಕಾರ್ಯಕ್ರಮ ರದ್ದಾದ ನಂತರ ಮಾತನಾಡಿದ ಹೋಟೆಲ್ ಮಾಲೀಕರು, “ಸನ್ನಿ ಲಿಯೋನ್ ದೇಶಾದ್ಯಂತ ಡಿಜೆ ಶೋಗಳನ್ನು ನಡೆಸಿಕೊಡುತ್ತಾರೆ. ನಾವು ಎಲ್ಲಾ ಕಾನೂನು ನಿಯಮಗಳನ್ನು ಪಾಲಿಸಿದ್ದೆವು. ಆದರೆ, ಸಂತರು ಒಪ್ಪದ ಕಾರಣ ನಮಗೆ ಕಾರ್ಯಕ್ರಮ ಹಿಂಪಡೆಯುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ,” ಎಂದು ತಿಳಿಸಿದ್ದಾರೆ.
ಸನ್ನಿ ಲಿಯೋನ್ ಅವರಿಗೆ ಮಥುರಾದಲ್ಲಿ ವಿರೋಧ ವ್ಯಕ್ತವಾಗುತ್ತಿರುವುದು ಇದೇ ಮೊದಲಲ್ಲ. 2021 ರಲ್ಲಿ ಬಿಡುಗಡೆಯಾದ ‘ಮಧುಬನ್ ಮೇ ರಾಧಿಕಾ ನಾಚೆ’ ಹಾಡಿನ ಮ್ಯೂಸಿಕ್ ವೀಡಿಯೊ ಕೂಡ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆ ಸಮಯದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿತ್ತು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement