ನೆದರ್ಲ್ಯಾಂಡ್ಸ್: ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಯ ನಂತರ ರೋಗಿಗಳು ಪ್ರಜ್ಞೆ ಬಂದಾಗ ನೋವಿನ ಬಗ್ಗೆಯೋ ಅಥವಾ ಮನೆಯವರ ಬಗ್ಗೆಯೋ ವಿಚಾರಿಸುತ್ತಾರೆ. ಆದರೆ ನೆದರ್ಲ್ಯಾಂಡ್ಸ್‌ನಲ್ಲಿ 17 ವರ್ಷದ ಹುಡುಗನೊಬ್ಬ ಮೊಣಕಾಲು ಶಸ್ತ್ರಚಿಕಿತ್ಸೆಯ ನಂತರ ಎಚ್ಚರಗೊಂಡಾಗ ವೈದ್ಯರೇ ದಂಗಾಗುವಂತಹ ಘಟನೆ ನಡೆದಿದೆ. ಡಚ್ ಭಾಷೆಯೇ ಮಾತೃಭಾಷೆಯಾಗಿದ್ದರೂ, ಆತ ಎಚ್ಚರಗೊಂಡಾಗ ಕೇವಲ ಇಂಗ್ಲಿಷ್‌ನಲ್ಲಿ ಮಾತನಾಡಲು ಶುರುಮಾಡಿದ್ದಾನೆ…!
ತಂದೆ-ತಾಯಿಯ ಗುರುತೇ ಮರೆತ…
ಫುಟ್ಬಾಲ್ ಆಡುವಾಗ ಮೊಣಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ಈ ಯುವಕನನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮುಗಿದರೂ, ಅರಿವಳಿಕೆ (Anaesthesia) ಪ್ರಭಾವ ಕಡಿಮೆಯಾದ ನಂತರ ಯುವಕ ವಿಚಿತ್ರವಾಗಿ ವರ್ತಿಸಲು ಶುರುಮಾಡಿದ. ತಾನು ಅಮೆರಿಕದಲ್ಲಿದ್ದೇನೆ ಎಂದು ಹೇಳುತ್ತ ಹಠ ಹಿಡಿದ ಆತ, ತನ್ನ ಹೆತ್ತವರನ್ನು ಗುರುತಿಸಲಿಲ್ಲ. ಅಷ್ಟೇ ಅಲ್ಲದೆ, ತನ್ನ ಮಾತೃಭಾಷೆಯಾದ ‘ಡಚ್’ ಅನ್ನು ಅರ್ಥಮಾಡಿಕೊಳ್ಳುವ ಅಥವಾ ಮಾತನಾಡುವ ಸಾಮರ್ಥ್ಯವನ್ನೂ ಕಳೆದುಕೊಂಡಿದ್ದ.
ಏನಿದು ‘ಫಾರಿನ್ ಲ್ಯಾಂಗ್ವೇಜ್ ಸಿಂಡ್ರೋಮ್’?
ಆರಂಭದಲ್ಲಿ ಇದು ಅರಿವಳಿಕೆಯ ಪ್ರಭಾವದಿಂದ ಉಂಟಾಗುವ ತಾತ್ಕಾಲಿಕ ಗೊಂದಲ (Emergence Delirium) ಎಂದೇ ವೈದ್ಯರು ಭಾವಿಸಿದ್ದರು. ಆದರೆ ಹಲವು ಗಂಟೆಗಳಾದರೂ ಆತ ಡಚ್ ಭಾಷೆಯಲ್ಲಿ ಒಂದು ಪದವನ್ನೂ ಮಾತನಾಡದಿದ್ದಾಗ ಮನೋವೈದ್ಯರ ತಂಡ ಆತನನ್ನು ಪರೀಕ್ಷಿಸಿತು.
ಸುಮಾರು 18 ಗಂಟೆಗಳ ನಂತರ ನಡೆಸಿದ ಪರೀಕ್ಷೆಯಲ್ಲಿ ಆತ ಸಂಪೂರ್ಣ ಆರೋಗ್ಯವಾಗಿದ್ದಾನೆ ಮತ್ತು ಎಚ್ಚರವಾಗಿದ್ದಾನೆ ಎಂದು ತಿಳಿದುಬಂದಿದೆ. ಆದರೆ ಆತ ಕೇವಲ ಇಂಗ್ಲಿಷ್‌ನಲ್ಲಿ ಮಾತ್ರ ಮಾತನಾಡುತ್ತಿದ್ದ. ಈತನಿಗೆ ಮಾಡಿದ ಮನೋವೈದ್ಯಕೀಯ ಮೌಲ್ಯಮಾಪನವು ಅಪರೂಪದ ಸಿಂಡ್ರೋಮ್ ಅನ್ನು ಬಹಿರಂಗಪಡಿಸಿತು. ವೈದ್ಯರು ಇದನ್ನು ‘ಫಾರಿನ್ ಲ್ಯಾಂಗ್ವೇಜ್ ಸಿಂಡ್ರೋಮ್’ (Foreign Language Syndrome – FLS) ಎಂದು ಗುರುತಿಸಿದ್ದಾರೆ.
ಇದು ವಿಶ್ವಾದ್ಯಂತ ಹತ್ತಕ್ಕಿಂತ ಕಡಿಮೆ ಪ್ರಕರಣಗಳು ಮಾತ್ರ ವರದಿಯಾದ ಅತ್ಯಂತ ಅಪರೂಪದ ಸ್ಥಿತಿಯಾಗಿದೆ. ಈ ಪ್ರಕರಣವನ್ನು ನಂತರ ಜರ್ನಲ್ ಆಫ್ ಮೆಡಿಕಲ್ ಕೇಸ್ ರಿಪೋರ್ಟ್ಸ್‌ನಲ್ಲಿ ಪ್ರಕಟಿಸಲಾಯಿತು
ವ್ಯಕ್ತಿಯು ತನ್ನ ಮಾತೃಭಾಷೆಯನ್ನು ಮರೆತು, ತನಗೆ ಅಲ್ಪಸ್ವಲ್ಪ ತಿಳಿದಿರುವ ಬೇರೆ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಲು ಆರಂಭಿಸುತ್ತಾನೆ. ವಿದೇಶಿ ಭಾಷಾ ಸಿಂಡ್ರೋಮ್ ಎಂದರೆ ಮತ್ತೊಂದು ಭಾಷೆಗೆ ಅನೈಚ್ಛಿಕವಾಗಿ ಮಾತನಾಡಲು ಬದಲಾಯಿಸುವುದಾಗಿದೆ., ಇದು ರೋಗಿ ಮಾತೃಭಾಷೆ ಮಾತನಾಡುವುದು ಹಾಗೂ ಅರ್ಥ ಮಾಡಿಕೊಳ್ಳುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವ ಸ್ಥಿತಿಯಾಗಿದೆ. ವರದಿಯಾದ ಪ್ರಕರಣಗಳು ಹೆಚ್ಚಾಗಿ ಪುರುಷ ರೋಗಿಗಳನ್ನು ಒಳಗೊಂಡಿರುತ್ತವೆ ಮತ್ತು ಕಾಲಾನಂತರದಲ್ಲಿ ಸ್ವಯಂಪ್ರೇರಿತವಾಗಿ ಪರಿಹರಿಸಲ್ಪಡುತ್ತವೆ ಮೆದುಳಿನ ಕಾರ್ಯಚಟುವಟಿಕೆಯಲ್ಲಿ ಉಂಟಾಗುವ ಸಣ್ಣ ವ್ಯತ್ಯಾಸಗಳು ಇದಕ್ಕೆ ಕಾರಣ ಎನ್ನಲಾಗಿದ್ದರೂ, ಇದರ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ.
ಅದೃಷ್ಟವಶಾತ್, ಈ ಸ್ಥಿತಿಯು ಶಾಶ್ವತವಲ್ಲ. ಸ್ವಲ್ಪ ಸಮಯದ ನಂತರ ಬಾಲಕ ತನ್ನ ಮಾತೃಭಾಷೆಯಾದ ಡಚ್ ಅನ್ನು ಮತ್ತೆ ಮಾತನಾಡಲು ಶಕ್ತನಾಗಿದ್ದಾನೆ ಎಂದು ವೈದ್ಯಕೀಯ ವರದಿಗಳು ತಿಳಿಸಿವೆ.


ನಿಮ್ಮ ಕಾಮೆಂಟ್ ಬರೆಯಿರಿ