ತೆಹ್ರಾನ್: ಇರಾನ್ ದೇಶವು ಕಳೆದ ಹಲವು ವರ್ಷಗಳಲ್ಲೇ ಕಂಡರಿಯದ ಅತಿದೊಡ್ಡ ಪ್ರತಿಭಟನೆಗೆ ಸಾಕ್ಷಿಯಾಗುತ್ತಿದೆ. ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳ ಆರ್ಥಿಕ ದಿಗ್ಬಂಧನದಿಂದ ಕುಸಿದಿರುವ ಇರಾನ್ ಆರ್ಥಿಕತೆ ಮತ್ತು ಗಗನಕ್ಕೇರಿರುವ ಹಣದುಬ್ಬರ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂಸಾಚಾರದಲ್ಲಿ ಇದುವರೆಗೆ ಕನಿಷ್ಠ ಏಳು ಜನರು ಸಾವಿಗೀಡಾಗಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.
ಪ್ರತಿಭಟನೆಯ ವಿಡಿಯೋಗಳು ಮತ್ತು ಫೋಟೋಗಳು ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿರುವುದು ಮತ್ತು ಗುಂಡಿನ ಸದ್ದು ಕೇಳಿಸುತ್ತಿರುವುದು ವರದಿಯಾಗಿದೆ.
ರಾಜಧಾನಿ ತೆಹ್ರಾನ್ನಲ್ಲಿ ಪ್ರತಿಭಟನೆ ತುಸು ತಣ್ಣಗಾಗಿದ್ದರೂ, ದೇಶದ ಇತರ ಭಾಗಗಳಿಗೆ ಹರಡಿದೆ. ತೆಹ್ರಾನ್ನಿಂದ 300 ಕಿಮೀ ದೂರದಲ್ಲಿರುವ ‘ಅಜ್ನಾ’ ಎಂಬಲ್ಲಿ ಭೀಕರ ಹಿಂಸಾಚಾರ ನಡೆದಿದೆ ಎಂದು ವರದಿಗಳು ತಿಳಿಸಿವೆ.
2022ರ ನಂತರದ ದೊಡ್ಡ ಪ್ರತಿಭಟನೆ
2022ರಲ್ಲಿ ಮಹ್ಸಾ ಅಮಿನಿ ಸಾವಿನ ನಂತರ ನಡೆದಿದ್ದ ಬೃಹತ್ ಹೋರಾಟದ ಬಳಿಕ, ಇರಾನ್ನಲ್ಲಿ ನಡೆಯುತ್ತಿರುವ ಅತ್ಯಂತ ದೊಡ್ಡ ನಾಗರಿಕ ಪ್ರತಿಭಟನೆ ಇದಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಇರಾನ್ನ ಸರ್ಕಾರಿ ಸುದ್ದಿ ಸಂಸ್ಥೆ ‘ಇರ್ನಾ’ ಪ್ರಕಾರ, ಇರಾನ್ ರೆವಲ್ಯೂಷನರಿ ಗಾರ್ಡ್ನ (ಬಸಿಜ್ ಪಡೆ) 21 ವರ್ಷದ ಸ್ವಯಂಸೇವಕನೊಬ್ಬ ಹಿಂಸಾಚಾರದಲ್ಲಿ ಹತ್ಯೆಗೀಡಾಗಿದ್ದಾನೆ. “ಸಾರ್ವಜನಿಕ ಶಾಂತಿ ಕಾಪಾಡುವ ವೇಳೆ ಪ್ರತಿಭಟನಾಕಾರರ ಕೈಯಲ್ಲಿ ಗಾರ್ಡ್ ಸದಸ್ಯ ಹುತಾತ್ಮನಾಗಿದ್ದಾನೆ. ಅಲ್ಲದೆ 13 ಬಸಿಜ್ ಸದಸ್ಯರು ಮತ್ತು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ,” ಎಂದು ಲೊರೆಸ್ತಾನ್ ಪ್ರಾಂತ್ಯದ ಉಪ ರಾಜ್ಯಪಾಲ ಸಯೀದ್ ಪೌರಾಲಿ ತಿಳಿಸಿದ್ದಾರೆ.
ಹಿಂಸಾಚಾರಕ್ಕೆ ಇರಾನಿನ ಅಧಿಕಾರಿಗಳು ಪ್ರತಿಭಟನಾಕಾರರನ್ನು ದೂಷಿಸಿದ್ದಾರೆ. ಪ್ರತಿಭಟನಾಕಾರರ ಧ್ವನಿಯನ್ನು ಕೇಳಬೇಕು, ಆದರೆ ಹಿಂಸಾಚಾರ ಅದಕ್ಕೆ ಉತ್ತರವಾಗಿರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಹಣದುಬ್ಬರದ ಹೊಡೆತ
ಕಳೆದ ಡಿಸೆಂಬರ್ನಲ್ಲಿ ಇರಾನ್ನಲ್ಲಿ ಹಣದುಬ್ಬರ ದರವು ಶೇ. 42.5ಕ್ಕೆ ತಲುಪಿದೆ. ಆರ್ಥಿಕ ಒತ್ತಡ, ಬೆಲೆ ಏರಿಕೆ ಮತ್ತು ಕರೆನ್ಸಿ ಮೌಲ್ಯ ಕುಸಿತದಿಂದ ಕಂಗೆಟ್ಟ ಜನರು ಬೀದಿಗಿಳಿದಿದ್ದಾರೆ.
ಇಸ್ರೇಲ್ ಮತ್ತು ಅಮೆರಿಕದ ಇತ್ತೀಚಿನ ದಾಳಿಗಳಿಂದ ಇರಾನ್ ಈಗಾಗಲೇ ತತ್ತರಿಸಿದೆ. ಅಮೆರಿಕವು ಇರಾನ್ನ ಪರಮಾಣು ತಾಣಗಳ ಮೇಲೆ ಬಾಂಬ್ ದಾಳಿ ನಡೆಸಿದ್ದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಈ ವೇಳೆ ಪ್ರತಿಭಟನೆಗಳು ನಡೆದಿವೆ.
ತನ್ನ ಮೇಲಿನ ಆರ್ಥಿಕ ದಿಗ್ಬಂಧನಗಳನ್ನು ಸಡಿಲಗೊಳಿಸಲು ಇರಾನ್ ಯುರೇನಿಯಂ ಪುಷ್ಟೀಕರಣವನ್ನು ನಿಲ್ಲಿಸಿರುವುದಾಗಿ ಹೇಳಿದೆ. ಆದರೆ ಅಮೆರಿಕದೊಂದಿಗೆ ಮಾತುಕತೆಗಳು ಇನ್ನೂ ಸಫಲವಾಗಿಲ್ಲ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಪುನರಾರಂಭಿಸದಂತೆ ಕಠಿಣ ಎಚ್ಚರಿಕೆ ನೀಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ