ಗ್ರೋಕ್‌ (Grok) ಎಐ ದುರ್ಬಳಕೆಗೆ ತೀವ್ರ ಆಕ್ಷೇಪ ; ಎಕ್ಸ್ ಸಂಸ್ಥೆಗೆ ಕೇಂದ್ರ ಸರ್ಕಾರದಿಂದ ಖಡಕ್ ನೋಟಿಸ್

ನವದೆಹಲಿ: ಮಹಿಳೆಯರ ವಿರುದ್ಧ ಅಶ್ಲೀಲ ಮತ್ತು ಅವಹೇಳನಕಾರಿ ವಿಷಯಗಳನ್ನು ಸೃಷ್ಟಿಸಲು ಗ್ರೋಕ್‌ (‘Grok)’ ಎಂಬ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಮೈಕ್ರೋಬ್ಲಾಗಿಂಗ್ ತಾಣ ‘X’ (ಹಿಂದಿನ ಟ್ವಿಟರ್) ಸಂಸ್ಥೆಗೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಗಂಭೀರ ನೋಟಿಸ್ ನೀಡಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಮತ್ತು ಐಟಿ ನಿಯಮಗಳು 2021ರ ಅಡಿಯಲ್ಲಿ ತನ್ನ ಶಾಸನಬದ್ಧ ಕರ್ತವ್ಯಗಳನ್ನು ಪಾಲಿಸುವಲ್ಲಿ ಎಕ್ಸ್ ಸಂಸ್ಥೆ ವಿಫಲವಾಗಿದೆ ಎಂದು ಸರ್ಕಾರ ಕಿಡಿಕಾರಿದೆ.
 ಕೈಗೊಂಡಿರುವ ಕ್ರಮಗಳ ಬಗ್ಗೆ ಮುಂದಿನ 72 ಗಂಟೆಗಳ ಒಳಗಾಗಿ ವಿವರವಾದ ವರದಿಯನ್ನು (ATR) ಸಲ್ಲಿಸುವಂತೆ ಸೂಚಿಸಲಾಗಿದೆ. ತಪ್ಪು ಎಸಗುವ ಬಳಕೆದಾರರ ಖಾತೆಗಳನ್ನು ಅಮಾನತುಗೊಳಿಸುವುದು ಮತ್ತು ಅಶ್ಲೀಲ ವಿಷಯಗಳನ್ನು ಕೂಡಲೇ ತೆಗೆದುಹಾಕುವಂತೆ ಆದೇಶಿಸಲಾಗಿದೆ.
ನಿಯಮ ಪಾಲಿಸದಿದ್ದರೆ ಐಟಿ ಕಾಯ್ದೆಯ ಸೆಕ್ಷನ್ 79ರ ಅಡಿಯಲ್ಲಿ ಕಂಪನಿಗೆ ಸಿಗುವ ‘ಸುರಕ್ಷಿತ ರಕ್ಷಣೆ’ಯನ್ನು (Safe Harbour) ರದ್ದುಗೊಳಿಸುವುದಾಗಿ ಮತ್ತು ಕ್ರಿಮಿನಲ್ ಕ್ರಮ ಕೈಗೊಳ್ಳುವುದಾಗಿ ಸಚಿವಾಲಯ ಎಚ್ಚರಿಸಿದೆ.
ಏನಿದು ವಿವಾದ? 
ಎಕ್ಸ್ ಸಂಸ್ಥೆಯ AI ಸೇವೆಯಾದ ಗ್ರೋಕ್‌ (‘Grok’) ಅನ್ನು ಬಳಸಿಕೊಂಡು ಬಳಕೆದಾರರು ಮಹಿಳೆಯರ ಫೋಟೋಗಳನ್ನು ಅಶ್ಲೀಲವಾಗಿ ಮಾರ್ಪಡಿಸುತ್ತಿದ್ದಾರೆ. ಈ ಕೃತಕ ಚಿತ್ರಗಳು ಮತ್ತು ವಿಡಿಯೋಗಳು ಮಹಿಳೆಯರ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುತ್ತಿವೆ ಎಂದು ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ಇಂತಹ ಕೃತ್ಯಗಳು ಲೈಂಗಿಕ ಕಿರುಕುಳವನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಸರ್ಕಾರ ಹೇಳಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), ಮಹಿಳೆಯರ ಅಸಭ್ಯ ಪ್ರಾತಿನಿಧ್ಯ ನಿಷೇಧ ಕಾಯ್ದೆ ಮತ್ತು ಪೋಕ್ಸೋ (POCSO) ಕಾಯ್ದೆಗಳ ಅಡಿಯಲ್ಲಿ ಎಕ್ಸ್ ಸಂಸ್ಥೆ ಶಿಕ್ಷಾರ್ಹ ಕ್ರಮಗಳನ್ನು ಎದುರಿಸಬೇಕಾಗಬಹುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಪ್ರಿಯಾಂಕಾ ಚತುರ್ವೇದಿ ಪತ್ರ
 ಶಿವಸೇನಾ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಈ ಬಗ್ಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದ್ದರು. “ಪುರುಷರು ನಕಲಿ ಖಾತೆಗಳ ಮೂಲಕ ಮಹಿಳೆಯರ ಫೋಟೋಗಳನ್ನು ಬಳಸಿ, Grok AI ಮೂಲಕ ಅವುಗಳನ್ನು ಅಶ್ಲೀಲಗೊಳಿಸುತ್ತಿದ್ದಾರೆ. ಇದು ಮಹಿಳೆಯರ ಸುರಕ್ಷತೆಗೆ ದೊಡ್ಡ ಸಂಚಕಾರವಾಗಿದೆ” ಎಂದು ಅವರು ಆತಂಕ ವ್ಯಕ್ತಪಡಿಸಿದ್ದರು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement