ಯಲ್ಲಾಪುರ : ಚಾಕುವಿನಿಂದ ಇರಿದು ಮಹಿಳೆಯ ಕೊಲೆ

ಯಲ್ಲಾಪುರ: ವಿವಾಹಿತ ಮಹಿಳೆಯೊಬ್ಬರಿಗೆ ಚಾಕು ಇರಿದು ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ  ಪಟ್ಟಣದ ಕಾಳಮ್ಮ ನಗರದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ ಎಂದು ವರದಿಯಾಗಿದೆ.
ಹತ್ಯೆಯಾದ ಮಹಿಳೆಯನ್ನು ರಂಜಿತಾ ಮಲ್ಲಪ್ಪ ಬನ್ಸೋಡೆ (30) ಎಂದು ಗುರುತಿಸಲಾಗಿದ್ದು, ಆರೋಪಿ ರಫಿಕ್ ಎಂಬಾತ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಸುಮಾರು ಹತ್ತು ವರ್ಷಗಳ ಹಿಂದೆ ರಂಜಿತಾಳಿಗೆ ವಿಚ್ಛೇದನವಾಗಿದ್ದು, ಆಕೆಗೆ ಒಂದು ಮಗು ಕೂಡ ಇದೆ ಎಂದು ಹೇಳಲಾಗಿದೆ.  ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಶನಿವಾರ ಮಧ್ಯಾಹ್ನ ರಂಜಿತಾ ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ  ರಫೀಕ್ ರಸ್ತೆ ಮಧ್ಯೆ ಆಕೆಯನ್ನು ಅಡ್ಡಗಟ್ಟಿ  ಕುತ್ತಿಗೆಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರಂಜಿತಾಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು.  ಸ್ಥಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು,  ಪರಾರಿಯಾಗಿರುವ ಆರೋಪಿ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.
 ಈ ದುರ್ಘಟನೆಗೆ  ಸ್ಪಷ್ಟ ಕಾರಣ ತಿಳಿದುಬಂದಿಲ್ಲ.ಘಟನೆಯ ನಂತರ ಅನೇಕ ಸ್ಥಳೀಯರು ಪೋಲಿಸ್ ಠಾಣೆಗೆ ಜಮಾಯಿಸಿ ಆರೋಪಿತನನ್ನು ಹುಡುಗನನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement