ಢಾಕಾ: ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವಂತೆಯೇ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ಮುಂದುವರಿದಿದ್ದು, ಸೋಮವಾರ (ಜನವರಿ 5) ಹಿಂದೂ ಯುವಕನೊಬ್ಬನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಕಳೆದ ಮೂರು ವಾರಗಳಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಡೆದ ಐದನೇ ಹಿಂಸಾಚಾರ ಪ್ರಕರಣ ಇದಾಗಿದ್ದು, ದೇಶದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಭೀತಿ ಮೂಡಿಸಿದೆ.
ಪತ್ರಕರ್ತ ಮತ್ತು ‘ಬ್ಲಿಟ್ಜ್’ ಸಂಪಾದಕ ಸಲಾವುದ್ದೀನ್ ಶೋಯೆಬ್ ಚೌಧರಿ ಅವರ ಪ್ರಕಾರ, ಮೃತನನ್ನು ರಾಣಾ ಪ್ರತಾಪ ಬೈರಾಗಿ ಎಂದು ಗುರುತಿಸಲಾಗಿದೆ. ಜೆಸ್ಸೋರ್ ಜಿಲ್ಲೆಯ ಮೊನಿರಾಮಪುರ ಉಪಜಿಲಾದಲ್ಲಿ ಮಧ್ಯಾಹ್ನದ ವೇಳೆಗೆ ಅಪರಿಚಿತ ದುಷ್ಕರ್ಮಿಗಳು ಈತನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಹತ್ಯೆಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ ಮತ್ತು ಪೊಲೀಸರು ಈವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಸರಣಿ ಹಿಂಸಾಚಾರದ ಆತಂಕ:
ಬಾಂಗ್ಲಾದೇಶದಲ್ಲಿ ಫೆಬ್ರವರಿ 12 ರಂದು ಸಾರ್ವತ್ರಿಕ ಚುನಾವಣೆಗಳು ನಡೆಯಲಿದ್ದು, ಈ ಹೊತ್ತಿನಲ್ಲಿ ಹಿಂದೂ ಸಮುದಾಯದ ಮೇಲೆ ನಡೆಯುತ್ತಿರುವ ಸರಣಿ ದಾಳಿಗಳು ಆತಂಕಕಾರಿ ವಾತಾವರಣ ಸೃಷ್ಟಿಸಿದೆ. ಡಿಸೆಂಬರ್ 31ರಂದು ಶರಿಯತ್‌ಪುರ ಜಿಲ್ಲೆಯ ಹಿಂದೂ ವ್ಯಕ್ತಿ ಖೋಕನ್ ದಾಸ್ ಅವರ ಮೇಲೆ ಗುಂಪೊಂದು ದಾಳಿ ಮಾಡಿತ್ತು. ಅಂಗಡಿ ಮುಚ್ಚಿ ಮನೆಗೆ ಮರಳುತ್ತಿದ್ದ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಢಾಕಾ ಮೆಡಿಕಲ್ ಕಾಲೇಜಿನಲ್ಲಿ ನಿಧನರಾದರು.
ಡಿಸೆಂಬರ್ 18ರಂದು ಮೈಮೆನ್‌ಸಿಂಗ್ ಜಿಲ್ಲೆಯ ಭಾಲುಕಾದಲ್ಲಿ 27 ವರ್ಷದ ಗಾರ್ಮೆಂಟ್ ಕಾರ್ಮಿಕ ದಿಪು ಚಂದ್ರ ದಾಸ್ ಎಂಬುವವರನ್ನು ಅತ್ಯಂತ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂಬ ಸುಳ್ಳು ಆರೋಪ ಹೊರಿಸಿ, ಉದ್ರಿಕ್ತ ಗುಂಪು ಅವರನ್ನು ಮರಕ್ಕೆ ನೇತುಹಾಕಿ ಬೆಂಕಿ ಹಚ್ಚಿತ್ತು. ನಂತರದ ತನಿಖೆಯಲ್ಲಿ ಅವರು ಯಾವುದೇ ಅವಹೇಳನ ಮಾಡಿಲ್ಲ ಎಂಬುದು ಸಾಬೀತಾಗಿತ್ತು.
ಚುನಾವಣಾ ಹೊತ್ತಿನಲ್ಲಿ ಅಲ್ಪಸಂಖ್ಯಾತರನ್ನು ಗುರಿ ಮಾಡಲಾಗುತ್ತಿರುವ ಈ ಘಟನೆಗಳು ಬಾಂಗ್ಲಾದೇಶದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.


ನಿಮ್ಮ ಕಾಮೆಂಟ್ ಬರೆಯಿರಿ