ಪಶ್ಚಿಮ ಘಟ್ಟಗಳ ಧ್ವನಿ, ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ಇನ್ನಿಲ್ಲ

ಪುಣೆ: ಭಾರತದ ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಜೀವನವಿಡೀ ಹೋರಾಡಿದ, ಹಿರಿಯ ಪರಿಸರ ವಿಜ್ಞಾನಿ ಮತ್ತು ಪರಿಸರ ತಜ್ಞ ಮಾಧವ ಗಾಡ್ಗೀಳ್ (83) ಅವರು ಬುಧವಾರ ರಾತ್ರಿ (ಜನವರಿ 7) ಪುಣೆಯಲ್ಲಿ ನಿಧನರಾದರು. ಅವರು ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು.
ಗಾಡ್ಗೀಳ್ ಅವರ ಪುತ್ರ ಸಿದ್ಧಾರ್ಥ ಗಾಡ್ಗೀಳ್ ಅವರು ಈ ದುಃಖದ ಸುದ್ದಿಯನ್ನು ಅಧಿಕೃತವಾಗಿ ಹಂಚಿಕೊಂಡಿದ್ದಾರೆ.
ಪಶ್ಚಿಮ ಘಟ್ಟಗಳ ರಕ್ಷಣೆಗೆ ಶ್ರಮಿಸಿದ ‘ಜನರ ವಿಜ್ಞಾನಿ’
 ಮಾಧವ ಗಾಡ್ಗೀಳ್ ಅವರು, ಮಾಧವ ಗಾಡ್ಗೀಳ್ 1942ರ ಮೇ 24ರಂದು ಪುಣೆಯಲ್ಲಿ ಪ್ರಮೀಳಾ ಹಾಗೂ ಅರ್ಥಶಾಸ್ತ್ರಜ್ಞರಾದ ಧನಂಜಯ ರಾಮಚಂದ್ರ ಗಾಡ್ಗೀಳ್ ದಂಪತಿಗೆ ಜನಿಸಿದರು. ಗಾಡ್ಗೀಳ್ ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಜೀವಶಾಸ್ತ್ರದ ಪದವಿ, ಮುಂಬೈ ವಿಶ್ವವಿದ್ಯಾಲಯದಲ್ಲಿ ಪ್ರಾಣಿಶಾಸ್ತ್ರದ ಪದವಿ ಹಾಗೂ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಪದವಿ ಪಡೆದಿದ್ದಾರೆ.
1971ರಲ್ಲಿ ಅಮೆರಿಕದಿಂದ ಭಾರತಕ್ಕೆ ಮರಳಿದ ಅವರು ಅಗರ್ಕರ್ ಸಂಶೋಧನಾ ಸಂಸ್ಥೆಯಲ್ಲಿ 2 ವರ್ಷ ಕೆಲಸ ನಿರ್ವಹಿಸಿ, 1973ರಲ್ಲಿ ಬೆಂಗಳೂರಿನ ಭಾರತೀಯ ಸೇರಿದರು. ಅಲ್ಲಿ 30 ವರ್ಷಗಳ ಕಾಲ ವಿವಿಧ ಹುದ್ದೆಗಳನ್ನು ಅಲಂಕರಿಸಿ, 2004ರಲ್ಲಿ ಸಂಸ್ಥೆಯ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದರು.ಇದಲ್ಲದೆ ಗಾಡ್ಗೀಳ್‌ರವರು ಸ್ಟಾನ್ಡ್‌ಫೋರ್ಡ್ ವಿಶ್ವವಿದ್ಯಾಲಯ ಹಾಗೂ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
1980ರ ದಶಕದಲ್ಲಿ ನೀಲಗಿರಿ ಅರಣ್ಯ ಪ್ರದೇಶವನ್ನು ಭಾರತದ ಮೊದಲ ಜೈವಿಕ ಅರಣ್ಯವನ್ನಾಗಿಸುವುದರಲ್ಲಿ ಗಾಡ್ಗೀಳ್‌ರವರ ಸಂಶೋಧನೆಗಳು ಪ್ರಮುಖ ಪಾತ್ರ ವಹಿಸಿವೆ. 2002ರಲ್ಲಿ ಜೀವ ಸಂರಕ್ಷಣಾ ಕಾಯಿದೆಯ ಕರಡು ಸಮಿತಿ ಸದಸ್ಯರಾಗಿ ಗಾಡ್ಗೀಳ್‌ರವರು ಮಾಡಿದ ಶಿಫಾರಸ್ಸುಗಳನ್ನು ರಾಷ್ಟ್ರೀಯ ಜೀವ ಸಂರಕ್ಷಣಾ ಸಮಿತಿಯು ಅಂಗೀಕರಿಸಿದೆ.
ಬಾಲ್ಯದಿಂದಲೂ ಪ್ರಕೃತಿಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅವರು ಸಿದ್ಧಪಡಿಸಿದ ‘ಗಾಡ್ಗೀಳ್ ವರದಿ’ (ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ ವರದಿ) ಜಾಗತಿಕ ಮಟ್ಟದಲ್ಲಿ ಪರಿಸರ ಸಂರಕ್ಷಣೆಯ ದಿಕ್ಸೂಚಿಯಾಗಿದೆ.
2010 ರಲ್ಲಿ ಪರಿಸರ ಮತ್ತು ಅರಣ್ಯ ಸಚಿವಾಲಯವು ರಚಿಸಿದ್ದ ಪಶ್ಚಿಮ ಘಟ್ಟಗಳ ಪರಿಸರ ವಿಜ್ಞಾನ ತಜ್ಞರ ಸಮಿತಿ (WGEEP)ಯ ಅಧ್ಯಕ್ಷತೆ ವಹಿಸುವ ಮೂಲಕ ಮಾಧವ ಗಾಡ್ಗೀಳ್ ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದರು. ಈ ಸಮಿತಿಯು ವರದಿಯಲ್ಲಿ ಪಶ್ಚಿಮ ಘಟ್ಟಗಳ ಶೇ. 75ರಷ್ಟು ಭಾಗವನ್ನು ‘ಪರಿಸರ ಸೂಕ್ಷ್ಮ ವಲಯ’ ಎಂದು ಘೋಷಿಸಬೇಕೆಂದು ಶಿಫಾರಸು ಮಾಡಿದ್ದರು. ಅಭಿವೃದ್ಧಿಯ ಹೆಸರಿನಲ್ಲಿ ಪಶ್ಚಿಮ ಘಟ್ಟಗಳಲ್ಲಿ ಕೈಗೊಳ್ಳುವ ಬೃಹತ್ ಯೋಜನೆಗಳು ಭವಿಷ್ಯದಲ್ಲಿ “ದುರಂತದ ಪರಿಣಾಮಗಳನ್ನು” ಬೀರುತ್ತವೆ ಎಂದು ಅವರು ಮೊದಲೇ ಎಚ್ಚರಿಸಿದ್ದರು. ಅವರ ವರದಿಯು ಹೊಸ ರಸ್ತೆಗಳು ಅಥವಾ ಕಟ್ಟಡ ನಿರ್ಮಾಣ, ಕಡಿದಾದ ಇಳಿಜಾರುಗಳಲ್ಲಿ ಅಭಿವೃದ್ಧಿ ಮತ್ತು ಕಲ್ಲು ಗಣಿಗಾರಿಕೆಯನ್ನು ನಿಷೇಧಿಸುವುದು ಸೇರಿದಂತೆ ಇತರ ಹಲವು ಅಂಶಗಳ ಬಗ್ಗೆ ಅದು ಶಿಫಾರಸು ಮಾಡಿತ್ತು.
ಐದು ದಶಕಗಳಿಗೂ ಹೆಚ್ಚು ಕಾಲ ಭಾರತದ ಪರಿಸರ ಚಿಂತನೆ, ಸಂರಕ್ಷಣಾ ನೀತಿಗಳನ್ನು ಆಳವಾಗಿ ರೂಪಿಸಿದ್ದ ಅವರು 1983 ರಲ್ಲಿ ಸ್ಥಾಪನೆಯಾದ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ಸಿ) ಪರಿಸರ ವಿಜ್ಞಾನ ಕೇಂದ್ರದ ಸ್ಥಾಪಕರಾಗಿದ್ದರು. ಅವರ ನಾಯಕತ್ವದಲ್ಲಿ, ಈ ಕೇಂದ್ರವು ಪರಿಸರ ವಿಜ್ಞಾನ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಪರಿಸರ ನೀತಿಯಲ್ಲಿ ಸಂಶೋಧನೆಗಾಗಿ ಭಾರತದ ಅಗ್ರಗಣ್ಯ ಸಂಸ್ಥೆಗಳಲ್ಲಿ ಒಂದಾಗಿ ವಿಕಸನಗೊಂಡಿತು.
ಸಾಧನೆಗಳ ಮೈಲಿಗಲ್ಲು:
ವಿಶ್ವಸಂಸ್ಥೆಯ ಗೌರವ: 2024ರಲ್ಲಿ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮವು (UNEP) ಇವರನ್ನು ವಿಶ್ವದ ಆರು ‘ಚಾಂಪಿಯನ್ಸ್ ಆಫ್ ದಿ ಅರ್ಥ್’ ವಾರಿಯರ್‌ಗಳಲ್ಲಿ ಒಬ್ಬರೆಂದು ಗುರುತಿಸಿ ಗೌರವಿಸಿತ್ತು.
ಪುಣೆ, ಮುಂಬೈ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದ ಅವರು, ‘ಗಣಿತ ಪರಿಸರ ವಿಜ್ಞಾನ’ದಲ್ಲಿ (Mathematical Ecology) ಪಿಎಚ್‌ಡಿ ಮಾಡಿದ್ದರು. ಭಾರತದ ‘ಜೈವಿಕ ವೈವಿಧ್ಯತೆ ಕಾಯ್ದೆ’ಯ ಕರಡು ಸಿದ್ಧಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
2023ರಲ್ಲಿ ಇವರ ಆತ್ಮಕಥೆ ‘ಎ ವಾಕ್ ಅಪ್ ದಿ ಹಿಲ್: ಲಿವಿಂಗ್ ವಿತ್ ಪೀಪಲ್ ಆಂಡ್ ನೇಚರ್’ ಬಿಡುಗಡೆಯಾಗಿತ್ತು.
ಪಕ್ಷಿ ವೀಕ್ಷಕನಿಂದ ಪರಿಸರ ತಜ್ಞನವರೆಗೆ:
ಪಕ್ಷಿ ವೀಕ್ಷಕರಾಗಿದ್ದ ತಮ್ಮ ತಂದೆಯಿಂದ ಪ್ರೇರಿತರಾಗಿದ್ದ ಗಾಡ್ಗೀಳ್ ಅವರಿಗೆ ಓದುವುದನ್ನು ಕಲಿಯುವ ಮೊದಲೇ ಚಿತ್ರಗಳನ್ನು ನೋಡಿ ಪಕ್ಷಿಗಳನ್ನು ಗುರುತಿಸುವ ಕಲೆ ಸಿದ್ಧಿಸಿತ್ತು. ಅವರು ಕೇವಲ ಪರಿಸರ ಮಾತ್ರವಲ್ಲದೆ ಗಣಿತ, ಸಮಾಜ ವಿಜ್ಞಾನ ಮತ್ತು ಸಾರ್ವಜನಿಕ ನೀತಿಗಳ ಬಗ್ಗೆಯೂ ಅಪಾರ ಜ್ಞಾನ ಹೊಂದಿದ್ದರು.
ಪಶ್ಚಿಮ ಘಟ್ಟಗಳ ರಕ್ಷಣೆಗಾಗಿ ಅವರು ನೀಡಿದ ಕೊಡುಗೆ ಮತ್ತು “ತಳಮಟ್ಟದಿಂದ ಪರಿಸರ ಸಂರಕ್ಷಣೆ” (Bottom-up approach) ಎಂಬ ಅವರ ಸಿದ್ಧಾಂತವು ಮುಂದಿನ ತಲೆಮಾರುಗಳಿಗೆ ದಾರಿದೀಪವಾಗಿ ಉಳಿಯಲಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement