ಮಿನಿಯಾಪೋಲಿಸ್: ಅಮೆರಿಕದ ಪ್ರಮುಖ ನಗರಗಳಲ್ಲಿ ಟ್ರಂಪ್ ಆಡಳಿತವು ನಡೆಸುತ್ತಿರುವ ವಲಸೆ ವಿರೋಧಿ ಕಾರ್ಯಾಚರಣೆಯ (Immigration Crackdown) ವೇಳೆ, ಬುಧವಾರ ಮಿನಿಯಾಪೋಲಿಸ್‌ನಲ್ಲಿ ಐಸಿಇ (Immigration and Customs Enforcement) ಅಧಿಕಾರಿಯೊಬ್ಬರು ಮಹಿಳೆಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಈ ಘಟನೆಯನ್ನು ಫೆಡರಲ್ ಅಧಿಕಾರಿಗಳು ‘ಆತ್ಮರಕ್ಷಣೆ’ ಎಂದು ಸಮರ್ಥಿಸಿಕೊಂಡಿದ್ದರೆ, ನಗರದ ಮೇಯರ್ ಇದನ್ನು ‘ಬೇಜವಾಬ್ದಾರಿತನ ಮತ್ತು ಅನಗತ್ಯ ಕೃತ್ಯ’ ಎಂದು ಕಿಡಿಕಾರಿದ್ದಾರೆ.
ಕೊಲೊರಾಡೋ ಮೂಲದ 37 ವರ್ಷದ ರೆನೀ ನಿಕೋಲ್ ಮ್ಯಾಕ್ಲಿನ್ ಗುಡ್ ಎಂಬುವವರು ಈ ದಾಳಿಯಲ್ಲಿ ಮೃತಪಟ್ಟವರು. ಹಿಮಪಾತದಿಂದ ಕೂಡಿದ ವಸತಿ ಪ್ರದೇಶದಲ್ಲಿ, ಕುಟುಂಬ ಸದಸ್ಯರೊಬ್ಬರ ಎದುರೇ ಅವರ ತಲೆಗೆ ಗುಂಡು ಹಾರಿಸಲಾಗಿದೆ. ವಿಶೇಷವೆಂದರೆ, 2020ರಲ್ಲಿ ಜಾರ್ಜ್ ಫ್ಲಾಯ್ಡ್ ಹತ್ಯೆಗೀಡಾದ ಸ್ಥಳದಿಂದ ಕೇವಲ ಒಂದು ಮೈಲಿ ದೂರದಲ್ಲಿ ಈ ಘಟನೆ ಸಂಭವಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳ ಪ್ರಕಾರ, ಅಧಿಕಾರಿಯೊಬ್ಬರು ರಸ್ತೆಯ ಮಧ್ಯೆ ನಿಂತಿದ್ದ ಎಸ್‌ಯುವಿ (SUV) ಹತ್ತಿರ ಬಂದು ಬಾಗಿಲು ತೆರೆಯುವಂತೆ ಒತ್ತಾಯಿಸುತ್ತಾರೆ. ವಾಹನವು ಸ್ವಲ್ಪ ಮುಂದೆ ಚಲಿಸಿದಾಗ, ಎದುರಿಗಿದ್ದ ಮತ್ತೊಬ್ಬ ಅಧಿಕಾರಿ ತಕ್ಷಣವೇ ಕನಿಷ್ಠ ಎರಡು ಸುತ್ತು ಗುಂಡು ಹಾರಿಸುತ್ತಾರೆ. ಮೃತ ಮಹಿಳೆಗೆ ಆರು ವರ್ಷದ ಮಗುವಿದೆ ಎಂದು ತಿಳಿದುಬಂದಿದೆ.
ಪರ-ವಿರೋಧ ವಾದಗಳು:
ಹೋಮ್‌ಲ್ಯಾಂಡ್ ಸೆಕ್ಯುರಿಟಿ ಸೆಕ್ರೆಟರಿ ಕ್ರಿಸ್ಟಿ ನೋಮ್ ಈ ಘಟನೆಯನ್ನು “ದೇಶೀಯ ಭಯೋತ್ಪಾದನೆ” ಎಂದು ಕರೆದಿದ್ದಾರೆ. ಮಹಿಳೆಯು ಅಧಿಕಾರಿಯ ಮೇಲೆ ವಾಹನ ಹರಿಸಲು ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಗುಂಡು ಹಾರಿಸಲಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಐಸಿಇ ಕಾರ್ಯವೈಖರಿಯನ್ನು ಬೆಂಬಲಿಸಿದ್ದಾರೆ.
ಆದರೆ, ಮಿನಿಯಾಪೋಲಿಸ್ ಮೇಯರ್ ಜಾಕೋಬ್ ಫ್ರೇ ಅವರು ಫೆಡರಲ್ ಅಧಿಕಾರಿಗಳ ವಾದವನ್ನು “ಸಂಪೂರ್ಣ ಸುಳ್ಳು” (Garbage) ಎಂದು ತಳ್ಳಿಹಾಕಿದ್ದಾರೆ. “ಇದು ಆತ್ಮರಕ್ಷಣೆ ಅಲ್ಲ, ಕುಟುಂಬಗಳನ್ನು ಬೇರ್ಪಡಿಸುವ ಮತ್ತು ರಸ್ತೆಗಳಲ್ಲಿ ಅವಾಂತರ ಸೃಷ್ಟಿಸುವ ಕೆಲಸ. ಅವರು ಜನರನ್ನು ಕೊಲ್ಲುತ್ತಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಗುಂಡಿನ ದಾಳಿಯು ಟ್ರಂಪ್ ಆಡಳಿತದ ವಲಸೆ ವಿರೋಧಿ ಕಾರ್ಯಾಚರಣೆಯ ಐದನೇ ಬಲಿಯಾಗಿದೆ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿ “ICE out of Minnesota” ಎಂದು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು. ಮಿನಿಯಾಪೋಲಿಸ್ ಮತ್ತು ಸೇಂಟ್ ಪಾಲ್ ನಗರಗಳಲ್ಲಿ ಸುಮಾರು 2,000ಕ್ಕೂ ಹೆಚ್ಚು ಫೆಡರಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಸಾರ್ವಜನಿಕರಲ್ಲಿ ಭೀತಿ ಮತ್ತು ಅಸಮಾಧಾನ ಮೂಡಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ