ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಕೃತಕ ಬುದ್ಧಿಮತ್ತೆ (AI) ಸೃಜಿತ ವೀಡಿಯೊವೊಂದು ಈಗ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಎಐ ಅವತಾರಗಳನ್ನು ಒಳಗೊಂಡ ಈ ವೀಡಿಯೊ ಸದ್ಯ ಇಂಟರ್ನೆಟ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ.
ಟ್ವಿಟರ್‌ನಲ್ಲಿ (X) ಫ್ಯಾನ್ ಪೇಜ್ ಹಂಚಿಕೊಂಡಿರುವ ಈ ಒಂದು ನಿಮಿಷದ ವಿಡಿಯೋ ಕ್ಲಿಪ್, ಪಕ್ಕಾ ಸಿನಿಮಾ ಶೈಲಿಯಲ್ಲಿದೆ. ವೀಡಿಯೊದ ಆರಂಭದಲ್ಲಿ ಡಿ.ಕೆ. ಶಿವಕುಮಾರ ಅವರ ಎಐ ಅವತಾರವು ಕೌಬಾಯ್ ಶೈಲಿಯಲ್ಲಿ ಕಾಣಿಸಿಕೊಂಡಿದೆ.
ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎಐ ಆವೃತ್ತಿಯು “ಎಚ್.ಡಿ. ಕುಮಾರಸ್ವಾಮಿ ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳುತ್ತಾರೆ ಎಂದು ನೀವು ಭಾವಿಸುತ್ತೀರಾ?” ಎಂದು ಪ್ರಶ್ನಿಸುತ್ತದೆ. ಇದಕ್ಕೆ ಡಿಕೆಶಿ ಎಐ ಅವತಾರವು, “ನನಗಂತೂ ಹಾಗೆ ಅನ್ನಿಸುತ್ತಿಲ್ಲ” ಎಂದು ಉತ್ತರಿಸುತ್ತದೆ.
ಕುಮಾರಸ್ವಾಮಿ ಭರ್ಜರಿ ಎಂಟ್ರಿ
ಈ ಸಂಭಾಷಣೆಯ ಬೆನ್ನಲ್ಲೇ ಆಕ್ಷನ್ ಸಿನಿಮಾದಂತೆ ಕಾರಿನಿಂದ ವ್ಯಕ್ತಿಯೊಬ್ಬರು ಕೆಳಗಿಳಿಯುತ್ತಾರೆ. ಅವರೇ ಎಚ್.ಡಿ. ಕುಮಾರಸ್ವಾಮಿ. ವೀಡಿಯೊದ ಕೊನೆಯಲ್ಲಿ ಎಚ್‌ಡಿಕೆ ಅವತಾರವು “ಡ್ಯಾಡಿ ಈಸ್ ಹೋಮ್” (Daddy is home) ಎಂದು ಡೈಲಾಗ್ ಹೊಡೆಯುವ ಮೂಲಕ ಅಬ್ಬರಿಸುತ್ತದೆ.
ಈ ವೀಡಿಯೊವನ್ನು ಹಂಚಿಕೊಂಡಿರುವ ಫ್ಯಾನ್ ಪೇಜ್ “2028ಕ್ಕೆ ಕಾಯುವಿಕೆ ಅಂತ್ಯವಾಗಲಿದೆ” ಎಂಬ ಕ್ಯಾಪ್ಷನ್ ನೀಡಿದೆ. ಪ್ರಸ್ತುತ ಕೇಂದ್ರ ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವರಾಗಿರುವ ಕುಮಾರಸ್ವಾಮಿ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳಿ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸಂದೇಶವನ್ನು ಈ ವೀಡಿಯೊ ಮೂಲಕ ರವಾನಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ