ಶಿರಸಿ: ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರದಲ್ಲಿ ಹರಿಯುವ ಬೇಡ್ತಿ ಮತ್ತು ಅಘನಾಶಿನಿ ನದಿಗಳ ತಿರುವು ಯೋಜನೆ ಸಂಪೂರ್ಣ ಅವೈಜ್ಞಾನಿಕ ಮತ್ತು ಅತಾರ್ಕಿಕವಾಗಿದೆ. ಪಶ್ಚಿಮ ಘಟ್ಟಕ್ಕೆ ಹಾಗೂ ಇಲ್ಲಿನ ಜನಜೀವನಕ್ಕೆ ಶಾಶ್ವತ ಹಾನಿ ಮಾಡುವ ಇಂತಹ ಯೋಜನೆಗಳನ್ನು ಸರ್ಕಾರ ತಕ್ಷಣವೇ ಕೈಬಿಡಬೇಕು. ಈ ಯೋಜನೆ ಸಂಪೂರ್ಣವಿನಾಶಕಾರಿಯಾಗಿದ್ದರಿಂದ ಇದರ ವಿರುದ್ಧದ ಹೋರಾಟದಲ್ಲಿ ಜನಪ್ರತಿನಿಧಿಗಳೇ ಮುಂದೆ ನಿಲ್ಲಬೇಕು ಎಂದು ಸೋಂದಾ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಕರೆ ನೀಡಿದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಎಂಇಎಸ್ ಕಾಲೇಜು ಮೈದಾನದಲ್ಲಿ ಬೇಡ್ತಿ ಹಾಗೂ ಅಘನಾಶಿನಿ ನದಿ ತಿರುವು ಯೋಜನೆ ಹಾಗೂ ಶರಾವತಿ ಭೂಗತ ಜಲವಿದ್ಯುತ್ ಯೋಜನೆ ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಜನಸಮಾವೇಶದಲ್ಲಿ ಮಾತನಾಡಿದ ಅವರು, ಸರ್ಕಾರ ಯೋಜನೆ ಕೈಬಿಡದಿದ್ದರೆ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಹೇಳಿದರು.
ನಾವು ಅಭಿವೃದ್ಧಿ ವಿರೋಧಿ ಪರಿಸರವಾದಿಗಳಲ್ಲ ಎಂದು ಸ್ಪಷ್ಟಪಡಿಸಿದ ಶ್ರೀಗಳು ಆದರೆ, ಪಶ್ಚಿಮ ಘಟ್ಟಕ್ಕೆ ಹಾನಿ ಮಾಡುವ ಈ ನದಿ ಜೋಡಣೆ ಯೋಜನೆಗಳು ಅತಾರ್ಕಿಕ ಹಾಗೂ ಅವೈಜ್ಞಾನಿಕವಾಗಿರುವುದರಿಂದ ಇದನ್ನು ವಿರೋಧಿಸುತ್ತಿದ್ದೇವೆ ಎಂದರು.
ಈ ನದಿಗಳಿಂದ ನೀರೊಯ್ಯುವ ಪ್ರದೇಶಗಳಲ್ಲಿ ಈಗಾಗಲೇ ನೀರಾವರಿ ವ್ಯವಸ್ಥೆಗಳಿವೆ. ಆದರೆ ಅವುಗಳ ಸಮರ್ಪಕ ಬಳಕೆಯಾಗಿಲ್ಲ. ಇದನ್ನು ಮಾಡಿದರೆ ನೀರೊಯ್ಯುವ ಪ್ರಮೇಯವೇ ಬರುವುದಿಲ್ಲ. ಅಲ್ಲದೆ, ಸಹ್ಯಾದ್ರಿಯಂತಹ ಘಟ್ಟ ಪ್ರದೇಶದಲ್ಲಿ ನದಿಗಳ ಪಾತ್ರವನ್ನು ಬದಲಿಸುವುದು ಕಷ್ಟ ಮಾತ್ರವಲ್ಲ, ಅಸಾಧ್ಯ ಕೂಡ. ಪ್ರಕೃತಿಯ ವಿರುದ್ಧದ ಈ ನಡೆ ಅತಾರ್ಕಿಕವಾದುದು ಎಂದು ಅವರು ಪ್ರತಿಪಾದಿಸಿದರು.
ಪರಿಸರ ನಾಶದ ಭೀತಿ
ಯೋಜನೆಗಾಗಿ ನಿರ್ಮಿಸಲಾಗುವ ದೊಡ್ಡ ದೊಡ್ಡ ಕಾಲುವೆಗಳು ಮತ್ತು ಸುರಂಗಗಳಿಂದ ಪಶ್ಚಿಮ ಘಟ್ಟದಲ್ಲಿ ಭೂ ಕುಸಿತದ ಸಾಧ್ಯತೆ ಹೆಚ್ಚಲಿದೆ. ನದಿಯ ಸ್ವಾಭಾವಿಕ ಹರಿವಿಗೆ ತಡೆಯೊಡ್ಡಿದರೆ ಅಂತರ್ಜಲ ಮರುಪೂರಣ ಪ್ರಕ್ರಿಯೆ ನಿಲ್ಲುತ್ತದೆ. ಇದರಿಂದ ನಮ್ಮ ಜಿಲ್ಲೆ ಬರ ಪೀಡಿತವಾಗಲಿದೆ. ನದಿ ನೀರಿನ ಹರಿವು ಕಡಿಮೆಯಾದರೆ ಕರಾವಳಿಯಲ್ಲಿ ಸಮುದ್ರದ ಉಪ್ಪು ನೀರು ಒಳನುಗ್ಗಿ ಕೃಷಿ ಭೂಮಿ ಹಾಗೂ ಮೀನುಗಾರಿಕೆ ನಾಶವಾಗುತ್ತದೆ ಎಂದು ಎಚ್ಚರಿಸಿದರು.
“ನಾಶವಾದ ಪರಿಸರ, ಅರಣ್ಯವನ್ನು ಮತ್ತೆ ಸರಿಪಡಿಸಲು ಇವರಿಗೆ ಸಾಧ್ಯವೇ? ನಾಶವಾಗುವ ಜನರ ಬದುಕನ್ನು ಸರ್ಕಾರ ಮತ್ತೆ ಕಟ್ಟಿಕೊಡಲು ಸಾಧ್ಯವೇ..?. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಶಾಶ್ವತ ವಿನಾಶ ಕಟ್ಟಿಟ್ಟ ಬುತ್ತಿ ಎಂದರು.
“ನಾವು ಅಭಿವೃದ್ಧಿ ಅಥವಾ ಎಲ್ಲ ಯೋಜನೆಗಳನ್ನು ವಿರೋಧಿಸುತ್ತಿಲ್ಲ. ಆದರೆ ಪಶ್ಚಿಮ ಘಟ್ಟದ ವಿನಾಶಕ್ಕೆ ಕಾರಣವಾಗುವ ಯೋಜನೆಗಳನ್ನು ವಿರೋಧಿಸುತ್ತಿದ್ದೇವೆ. ನಮ್ಮ ಹೋರಾಟ ಯಾವುದೇ ರಾಜಕೀಯ ಪಕ್ಷದ ಅಥವಾ ಯಾವುದೇ ವ್ಯಕ್ತಿಯ ವಿರುದ್ಧ ಅಲ್ಲ, ನಮ್ಮ ಹೋರಾಟ ವಿನಾಶಕಾರಿ ಯೋಜನೆಯ ವಿರುದ್ಧ ಎಂದು ಶ್ರೀಗಳು ಸ್ಪಷ್ಟಪಡಿಸಿದರು.
ಯಾರಿಗೂ ಲಾಭವಿಲ್ಲ..
ಬಯಲುಸೀಮೆಯ ಜನರಿಗೆ ನೀರು ಕೊಡಲು ಈ ಯೋಜನೆ ರೂಪಿಸಲಾಗುತ್ತಿದೆ ಎನ್ನಲಾಗುತ್ತಿದೆ. ಆದರೆ, ಬಯಲುಸೀಮೆಯ ಮಣ್ಣಿಗೆ ವಿಶೇಷ ಗುಣವಿದ್ದು, ಅಲ್ಲಿ ಕಡಿಮೆ ನೀರಿನಲ್ಲಿಯೇ ಬೆಳೆ ತೆಗೆಯಬಹುದು. ಅಲ್ಲಿಗೆ ಮಲೆನಾಡಿನ ನೀರನ್ನು ಅತಿಯಾಗಿ ಹರಿಸಿದರೆ, ಅಲ್ಲಿನ ಮಣ್ಣಿನ ಆರೋಗ್ಯ ಕೆಡಲಿದೆಯೇ ಹೊರತು ರೈತರಿಗೆ ಲಾಭವಾಗುವುದಿಲ್ಲ. “ಇಲ್ಲಿನ ನೀರನ್ನು ಅಲ್ಲಿಗೆ ಒಯ್ಯುವ ಯೋಚನೆಯೇ ಅವೈಜ್ಞಾನಿಕ. ಇದರಿಂದ ಬಯಲುಸೀಮೆಯ ಜನರಿಗೂ ಹಾನಿಯೇ ಹೆಚ್ಚು. ಹೀಗಾಗಿ ಬಯಲುಸೀಮೆಯ ಜನರೂ ಈ ಯೋಜನೆಯ ವಿರುದ್ಧದ ನಮ್ಮ ಹೋರಾಟದಲ್ಲಿ ಸೇರಿಕೊಳ್ಳಬೇಕು ಎಂದು ಶ್ರೀಗಳು ಕರೆ ನೀಡಿದರು.
ನದಿಗಳಿಗೆ ಧಕ್ಕೆ
ನದಿಗಳಿಂದ ಸಮುದ್ರಕ್ಕೆ ಹರಿದು ಹೋಗುವ ವ್ಯರ್ಥವಾದ ನೀರನ್ನು ಒಯ್ಯುತ್ತೇವೆ ಎಂದು ಹೇಳುತ್ತಾರೆ. ಘಟ್ಟದ ಕೆಳಗಿನ ನದಿ ನೀರನ್ನು ಲೆಕ್ಕಾಚಾರ ಹಾಕಿ ಹೇಳುತ್ತಾರೆ. ಸಮುದ್ರಕ್ಕೆ ಸೇರುವ ನೀರು ವ್ಯರ್ಥವಲ್ಲ. ಅದು ಪ್ರಕೃತಿಯ ಸಮತೋಲನಕ್ಕೆಬೇಕಾದ ನೀರು. ಕರಾವಳಿ ನೀರಿನಲ್ಲಿ ಲವಣಾಂಶ ಹೆಚ್ಚಿರುತ್ತದೆ. ಘಟ್ಟದ ಮೇಲಿನ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ನೀರು ಬತ್ತುತ್ತದೆ. ಈ ಯೋಜನೆಗಾಗಿ ನದಿಗೆ ನೀರುಣಿಸುವ ಉಪನದಿಗಳನ್ನು ತಿರುಗಿಸಲಾಗುತ್ತದೆ. ಉಪನದಿಗಳನ್ನು ಬೇರೆಡೆ ತಿರುಗಿಸುವುದು ಎಂದರೆ ದೇಹದಲ್ಲಿ ರಕ್ತ ಹರಿಯುವುದನ್ನು ನಿಲ್ಲಿಸಿದಂತೆ. ಹೀಗಾದರೆ ನದಿಯ ಅಸ್ತಿತ್ವ ಹೇಗೆ ಉಳಿಸಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.
ಈ ಭಾಗದ ಜನಪ್ರತಿನಿಧಿಗಳು ಜನರ ಭಾವನೆಗಳನ್ನು ಸರ್ಕಾರಕ್ಕೆ ಮುಟ್ಟಿಸಬೇಕು ಮತ್ತು ಜನರ ಪರವಾಗಿ ನಿಲ್ಲಬೇಕು.
ಸರ್ಕಾರ ಈ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡಬೇಕು. ಒಂದು ವೇಳೆ ಸರ್ಕಾರ ಯೋಜನೆಗೆ ಮುಂದಾದರೆ, ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಕೃತಿ ಕಾಡಲು ಆರಂಭಿಸಿದರೆ...
ಸ್ವಾದಿ ದಿಗಂಬರ ಜೈನ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಭಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಮಾತನಾಡಿ,
ಭಾರತದ ಭವ್ಯ ನಾಗರಿಕತೆ ನದಿ ತೀರದಲ್ಲಿಯೇ ಬೆಳೆದಿದೆ. ಹೀಗಾಗಿ, ನದಿಗಳನ್ನು ಉಳಿಸಿಕೊಳ್ಳುವ ಈ ಹೋರಾಟವು ಕೇವಲ ನೀರಿನ ಹೋರಾಟವಲ್ಲ, ಬದಲಾಗಿ ನಮ್ಮ ನಾಗರಿಕತೆಯನ್ನು ಸಂರಕ್ಷಿಸುವ ಹೋರಾಟವಾಗಿದೆ ಎಂದರು.
ಇಂದು ಎಲ್ಲರೂ ಸೇರಿ ನದಿಗೆ ಕಾಟ ಕೊಡುತ್ತಿದ್ದಾರೆ, ಪ್ರಕೃತಿಗೆ ಕಾಟ ಕೊಡುತ್ತಿದ್ದಾರೆ. ಆದರೆ ನದಿ, ಪ್ರಕೃತಿ ಕಾಡಲು ಆರಂಭಿಸಿದರೆ ಈ ಸರ್ಕಾರವೂ ಇರುವುದಿಲ್ಲ, ಯಾರೂ ಉಳಿಯುವುದಿಲ್ಲ. ಪ್ರಕೃತಿಯನ್ನು ಸಂರಕ್ಷಿಸಿ ಅದರ ಜೊತೆಗೆ ಸಾಗುತ್ತದೆಯೋ ಅದು ಉತ್ತಮ ಸರ್ಕಾರ. ಆದರೆ ಈಗ ಸರ್ಕಾರವು ಬೇಡ್ತಿ ಮತ್ತು ಅಘನಾಶಿನಿ ನದಿಗಳಿಗೆ ಹಾಗೂ ಇಲ್ಲಿನ ಪರಿಸರಕ್ಕೆ ಹಿಂಸೆ ನೀಡುವಂತಹ ಯೋಜನೆಗಳನ್ನು ಜಾರಿಗೆ ತರಲು ಹವಣಿಸುತ್ತಿದೆ. ಇಂತಹ ಪ್ರಕೃತಿ ವಿರೋಧಿ ಧೋರಣೆಯ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.
ಸರ್ಕಾರಕ್ಕೆ ಉತ್ತರ ಕನ್ನಡ ಜಿಲ್ಲೆಯ ಮೇಲೆ ಎಲ್ಲಿಲ್ಲದ ಪ್ರೀತಿ. ಆ ಪ್ರೀತಿಯಿಂದಾಗಿಯೇ ಜಿಲ್ಲೆಗೆ ಹಲವು ಮಾರಕ ಯೋಜನೆಗಳನ್ನು ತರುತ್ತಿದೆ,” ಎಂದು ಟೀಕಿಸಿದ ಅವರು, ಬೇಡ್ತಿ ಕಣಿವೆಗೆ ಕಳೆದ ಹಲವು ದಶಕಗಳಿಂದ ಒಂದಿಲ್ಲೊಂದು ತೊಂದರೆಗಳು ಬರುತ್ತಲೇ ಇವೆ. ಜನರಿಗೆ ಮತ್ತು ನದಿಗಳಿಗೆ ಹಿಂಸೆ ನೀಡುವ ಇಂತಹ ಯೋಜನೆಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಜನಾಭಿಪ್ರಾಯ ಕೇಳಿ ಮುಂದುವರಿಯಿರಿ….
ಶ್ರೀಮನ್ನೆಲೆಮಾವು ಮಠದ ಶ್ರೀ ಮಾಧನಾನಂದ ಭಾರತಿ ಸ್ವಾಮಿಗಳು ಮಾತನಾಡಿ, ನದಿ ಜೋಡಣೆಯಿಂದ ಜನರ ಬದುಕೇ ತಿರುವು ಮುರುವು ಆಗುತ್ತದೆ. ಜನರ ಬದುಕಿನ ನಾಡಿಯಾದ ನದಿಗಳು ತಾಯಿಗೆ ಸಮಾನ. ಅರಣ್ಯ ನಾಶ ಆಗುವ ನದಿ ತಿರುವು ಯೋಜನೆ ಹೇಗೆ ಅಭಿವೃದ್ಧಿ ಆಗುತ್ತದೆ ಎಂದು ಪ್ರಶ್ನಿಸಿದರು. ನಮ್ಮ ಮುಂದಿನ ಭವಿಷ್ಯಕ್ಕಾಗಿ ಮತ್ತು ಮಕ್ಕಳ ಬದುಕಿಗಾಗಿ ಈ ಯೋಜನೆಯನ್ನು ವಿರೋಧಿಸುವುದು ಅನಿವಾರ್ಯ. ಸರ್ಕಾರವು ಇಲ್ಲಿನವರಿಗೆ ಬೇಡವಾದ ಯೋಜನೆಗಳನ್ನು ಕೈಬಿಡಬೇಕು. ಎಂದು ಆಗ್ರಹಿಸಿದರು.
ಪಶ್ಚಿಮ ಘಟ್ಟದಲ್ಲಿ ಪ್ರಕೃತಿ ಅನಾಹುತಗಳನ್ನು ನೋಡುತ್ತಿದ್ದೇವೆ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ನದಿ ತಿರುವು ಯೋಜನೆಗಳನ್ನು ಜಾರಿಗೊಳಿಸಿದರೆ ಇನ್ನಷ್ಟು ಅನಾಹುತಗಳು ಸಂಭವಿಸಬಹುದು ಎಂಬ ಬಗ್ಗೆ ಯೋಚಿಸಬೇಕು. ಅಲ್ಲದೆ, ಯೋಜನೆಯನ್ನು ಜಾರಿಗೊಳಿಸುವ ಮುನ್ನ ಸ್ಥಳೀಯರೊಂದಿಗೆ ವಿಚಾರ ವಿನಿಮಯ ಅತ್ಯಗತ್ಯ. ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಜನರಿಗೆ ಒಳ್ಳೆಯದಾಗುತ್ತದೆ ಎಂದಾದರೆ ಮಾತ್ರ ಮಾಡಬೇಕು ಎಂದರು.
ಶ್ರೀಕ್ಷೇತ್ರ ಸಂಸ್ಥಾನ ಜಡೆಮಠದ ಶ್ರೀ ಡಾ. ಮಹಾಂತ ಸ್ವಾಮಿಗಳು ಮಾತನಾಡಿ, ಹಿಂದೆ ಗುರುಗಳು ಇದ್ದಾರೆ, ಮುಂದೆ ಗುರಿ ಇದೆ. ನಾವು ಹೆದರುವ ಕೆಲಸವಿಲ್ಲ. ಹೀಗಾಗಿ ಈ ಯೋಜನೆ ಆಗಲು ಸಾಧ್ಯವಿಲ್ಲ. ನಾವೆಲ್ಲರೂ ಸೇರಿ ಒಗ್ಗಟ್ಟಾಗಿ ಹೋರಾಟ ಮಾಡಿದರೆ ಇದು ಖಂಡಿತ ನಿಲ್ಲುತ್ತದೆ ಎಂದರು.
ಶಿರಳಗಿ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತಿ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಜಾತಿ, ಮತ ಪಂಥ ಪಕ್ಷಾತೀತವಾಗಿ ಈ ಹೋರಾಟ ನಡೆಯುತ್ತಿದೆ. ಈ ಯೋಜನೆ ಖಂಡಿತ ಸ್ಥಗಿತವಾಗುತ್ತದೆ. ಈ ಹೋರಾಟದ ಪ್ರಜ್ಞೆ ಮುಂದುವರಿಯಲಿ ಎಂದರು.


ನಿಮ್ಮ ಕಾಮೆಂಟ್ ಬರೆಯಿರಿ