
ನವದೆಹಲಿ: ದೆಹಲಿಯಲ್ಲಿ ವಾಸವಾಗಿರುವ ವೃದ್ಧ ಎನ್‌ಆರ್‌ಐ ವೈದ್ಯ ದಂಪತಿಯನ್ನು ಸರಿಸುಮಾರು ಎರಡು ವಾರಗಳ ಕಾಲ ‘ಡಿಜಿಟಲ್ ಅರೆಸ್ಟ್’ (Digital Arrest) ಹೆಸರಿನಲ್ಲಿ ಬಂಧನದಲ್ಲಿರಿಸಿ, ಬರೋಬ್ಬರಿ 14.85 ಕೋಟಿ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಡಾ. ಓಂ ತನೇಜಾ ಮತ್ತು ಅವರ ಪತ್ನಿ ಡಾ. ಇಂದಿರಾ ತನೇಜಾ ಅವರು ಸುಮಾರು 48 ವರ್ಷಗಳ ಕಾಲ ಅಮೆರಿಕಾದಲ್ಲಿ ವಿಶ್ವಸಂಸ್ಥೆಯೊಂದಿಗೆ ಕೆಲಸ ಮಾಡಿ, 2015 ರಲ್ಲಿ ಭಾರತಕ್ಕೆ ಮರಳಿದ್ದರು. ನಿವೃತ್ತಿಯ ನಂತರ ಅವರು ಇಲ್ಲಿ ಅನೇಕ ದತ್ತಿ ಸಂಸ್ಥೆಗಳಲ್ಲಿ (Charitable work) ತೊಡಗಿಸಿಕೊಂಡಿದ್ದರು.
ಡಿಸೆಂಬರ್ 24, 2025 ರಂದು ವಂಚಕರು ಕಾನೂನು ಜಾರಿಯ ಅಧಿಕಾರಿಗಳ ಸೋಗಿನಲ್ಲಿ ದಂಪತಿಗೆ ಕರೆ ಮಾಡಿದ್ದರು. ದಂಪತಿ ಹೆಸರಿನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ (Money Laundering) ಮತ್ತು ರಾಷ್ಟ್ರೀಯ ಭದ್ರತಾ ಉಲ್ಲಂಘನೆಯಂತಹ ಗಂಭೀರ ಪ್ರಕರಣಗಳಿವೆ ಎಂದು ಸುಳ್ಳು ಹೇಳಿ ಹೆದರಿಸಿದ್ದರು. ಹಾಗೂ ಬಂಧಿಸುವುದಾಗಿ ಬೆದರಿಕೆ ಹಾಕಿದ್ದರು.

ಡಿಸೆಂಬರ್ 24 ರಿಂದ ಜನವರಿ 10 ರವರೆಗೆ ದಂಪತಿಯನ್ನು ವೀಡಿಯೊ ಕರೆಗಳ ಮೂಲಕ ನಿರಂತರ ನಿಗಾದಲ್ಲಿ ಇರಿಸಲಾಗಿತ್ತು. ಇದನ್ನು ಪೊಲೀಸರು ‘ಡಿಜಿಟಲ್ ಅರೆಸ್ಟ್’ ಎಂದು ಕರೆದಿದ್ದಾರೆ.
ಈ ಅವಧಿಯಲ್ಲಿ ಹೆದರಿಸುವ ಮೂಲಕ ಡಾ. ಇಂದಿರಾ ತನೇಜಾ ಅವರಿಂದ ಸುಮಾರು 8 ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ (ಒಮ್ಮೆಗೆ 2 ಕೋಟಿ ರೂ.ಗಳಂತೆ) ಒಟ್ಟು 14.85 ಕೋಟಿ ರೂ.ಗಳನ್ನು ವರ್ಗಾಯಿಸಿಕೊಳ್ಳಲಾಗಿದೆ.
ವಂಚಕರ ಕುತಂತ್ರ…
77 ವರ್ಷದ ಡಾ. ಇಂದಿರಾ ಅವರು ಮನೆಯಿಂದ ಹೊರಹೋದಾಗಲೆಲ್ಲಾ ವಂಚಕರು ಅವರ ಪತಿಯ ಫೋನ್‌ಗೆ ವೀಡಿಯೊ ಕರೆ ಮಾಡಿ ಅವರ ಚಲನವಲನಗಳನ್ನು ಗಮನಿಸುತ್ತಿದ್ದರು. ಬ್ಯಾಂಕ್ ಅಧಿಕಾರಿಗಳು ಹಣದ ಬಗ್ಗೆ ಪ್ರಶ್ನಿಸಿದರೆ ಏನು ಉತ್ತರ ನೀಡಬೇಕು ಎಂಬುದನ್ನು ಕೂಡ ವಂಚಕರೇ ಹೇಳಿಕೊಟ್ಟಿದ್ದರು. ಇದರಿಂದಾಗಿ ಬ್ಯಾಂಕ್ ಮ್ಯಾನೇಜರ್ ಪ್ರಶ್ನಿಸಿದಾಗಲೂ ಇಂದಿರಾ ಅವರು ವಂಚಕರು ಹೇಳಿಕೊಟ್ಟ ಸುಳ್ಳು ಕಾರಣವನ್ನೇ ನೀಡಿದ್ದರು.
ಬೆಳಕಿಗೆ ಬಂದಿದ್ದು ಯಾವಾಗ?
ಜನವರಿ 10 ರಂದು ವಂಚಕರು “ನಿಮ್ಮ ಹಣವನ್ನು ಆರ್‌ಬಿಐ (RBI) ರೀಫಂಡ್ ಮಾಡಲಿದೆ, ನೀವು ಪೊಲೀಸ್ ಠಾಣೆಗೆ ಹೋಗಿ” ಎಂದು ಹೇಳಿದ್ದರು. ಇಂದಿರಾ ಅವರು ವೀಡಿಯೊ ಕರೆಯಲ್ಲಿರುವಾಗಲೇ ಪೊಲೀಸ್ ಠಾಣೆಗೆ ಹೋಗಿ ಅಲ್ಲಿನ ಅಧಿಕಾರಿಗೆ ಫೋನ್ ನೀಡಿದಾಗ, ವಂಚಕರು ಪೊಲೀಸರ ಜೊತೆಯೂ ಉದ್ಧಟತನದಿಂದ ಮಾತನಾಡಿದ್ದಾರೆ. ಆಗಲೇ ದಂಪತಿಗೆ ತಾವು ವಂಚನೆಗೆ ಒಳಗಾಗಿರುವುದು ಅರಿವಾಗಿದೆ.
ತಮ್ಮ ಜೀವನದ ಇಡೀ ಉಳಿತಾಯವನ್ನು ಕಳೆದುಕೊಂಡ ದಂಪತಿ ತೀವ್ರ ಆಘಾತಕ್ಕೊಳಗಾಗಿದ್ದಾರೆ. ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಸೈಬರ್ ಘಟಕವಾದ IFSO ಗೆ ವರ್ಗಾಯಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ