1996ರ ಹಳೆಯ ಪತ್ರ ತಂದಿತು ಗೆಳತಿಯರ ಪುನರ್ಮಿಲನ: ತಾಯಿಗಾಗಿ ಮಗಳ ಅಪರೂಪದ ಸಾಹಸ!
“ಕಾಲ ಬದಲಾದಂತೆ ಸ್ನೇಹವೂ ಮರೆಯಾಗುತ್ತದೆ” ಎಂಬ ಮಾತಿದೆ. ಆದರೆ, ಇಲ್ಲೊಂದು ಅಪರೂಪದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಸುಮಾರು 30 ವರ್ಷಗಳ ಹಿಂದೆ ಕಳೆದುಹೋದ ಸ್ನೇಹವೊಂದನ್ನು ಮಗಳ ಸಾಹಸದಿಂದ ಮತ್ತೆ ಬೆಸೆಯುವಂತೆ ಮಾಡಿದೆ.
ಇತ್ತೀಚೆಗೆ ವೈರಲ್ ಆಗಿರುವ ವೀಡಿಯೊವೊಂದರಲ್ಲಿ, ಮಗಳೊಬ್ಬಳು ತನ್ನ ತಾಯಿಗೆ ಆಕೆಯ ಕಾಲೇಜು ದಿನಗಳ ಆತ್ಮೀಯ ಗೆಳತಿಯನ್ನು ಭೇಟಿ ಮಾಡಿಸುವ ಮೂಲಕ ಅಚ್ಚರಿ ನೀಡಿದ್ದಾಳೆ. ಇದಕ್ಕೆ ಕಾರಣವಾಗಿದ್ದು 1996ರಲ್ಲಿ ಬರೆದ ಒಂದು ಹಳೆಯ ಪತ್ರ…!
ಕಾಲೇಜು ಮುಗಿದ ನಂತರ ಮದುವೆ, ಸಂಸಾರ ಎಂದು ಬ್ಯುಸಿಯಾದ ಈ ಗೆಳತಿಯರು ಸಂಪರ್ಕ ಕಳೆದುಕೊಂಡಿದ್ದರು. ತನ್ನ ಆತ್ಮೀಯ ಗೆಳತಿಯನ್ನು ತಾಯಿ ತುಂಬಾ ನೆನಪಿಸಿಕೊಳ್ಳುತ್ತಿದ್ದರು. ಆ ಹಳೆಯ ಪತ್ರದಲ್ಲಿ ಗೆಳತಿಯ ವಿಳಾಸವಿತ್ತಾದರೂ, ಇಷ್ಟು ವರ್ಷಗಳ ನಂತರ ಅವರು ಅಲ್ಲಿರುತ್ತಾರೋ ಇಲ್ಲವೋ ಎಂಬ ಅನುಮಾನವಿತ್ತು.
ತಾಯಿಯ ಮುಖದಲ್ಲಿ ನಗು ನೋಡಲು ಬಯಸಿದ ಮಗಳು, 1996ರಲ್ಲಿ ಬರೆದ ಪತ್ರದಲ್ಲಿದ್ದ ವಿಳಾಸವನ್ನೇ ಸುಳಿವಾಗಿಟ್ಟುಕೊಂಡು ಅವಳು ತನ್ನ ತಾಯಿಯ ಆತ್ಮೀಯ ಗೆಳತಿಯನ್ನು ಹುಡುಕಲು ಹೊರಟಿದ್ದಾಳೆ. ವೀಡಿಯೊದಲ್ಲಿ ತಾಯಿ ಮತ್ತು ಮಗಳು ಕಾರಿನಲ್ಲಿ ಆ ವಿಳಾಸವನ್ನು ಹುಡುಕುತ್ತಾ ಹೋಗುವುದು, ಅಲ್ಲಿನ ಸ್ಥಳೀಯರ ಬಳಿ ವಿಚಾರಿಸುವುದು ಸೆರೆಯಾಗಿದೆ. ಕೊನೆಗೆ ಆ ವಿಳಾಸ ಪತ್ತೆಯಾದಾಗ ನಡೆದ ಘಟನೆ ನಿಜಕ್ಕೂ ರೋಚಕವಾಗಿತ್ತು.
ಭಾವನಾತ್ಮಕ ಪುನರ್ಮಿಲನ:
ಸುಮಾರು ಮೂರು ದಶಕಗಳ ಕಾಲ ಪರಸ್ಪರ ಕಾಣದಿದ್ದರೂ, ಮುಖಾಮುಖಿಯಾದ ತಕ್ಷಣ ಗೆಳತಿಯರಿಬ್ಬರೂ ಒಬ್ಬರನ್ನೊಬ್ಬರು ಗುರುತಿಸಿ ಅಪ್ಪಿಕೊಂಡಿದ್ದಾರೆ. ಈ ಭಾವನಾತ್ಮಕ ಕ್ಷಣ ನೋಡುಗರ ಕಣ್ಣಾಲಿಗಳನ್ನು ಒದ್ದೆಯಾಗಿಸುತ್ತಿದೆ.
ಈ ವಿಡಿಯೋ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. “ಮಕ್ಕಳು ತಮ್ಮ ಪೋಷಕರ ಕನಸನ್ನು ನನಸು ಮಾಡುವುದನ್ನು ನೋಡುವುದೇ ಒಂದು ಸಂಭ್ರಮ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು ತಮ್ಮದೇ ಆದ ಅನುಭವ ಹಂಚಿಕೊಳ್ಳುತ್ತಾ, “ನಾನು ಕೂಡ ಇದೇ ರೀತಿ 28 ವರ್ಷಗಳ ಹಿಂದೆ ದೂರವಾಗಿದ್ದ ಚಿಕ್ಕಮ್ಮ ಮತ್ತು ಅವರ ಗೆಳತಿಯನ್ನು ಒಂದು ಸಮಾರಂಭದಲ್ಲಿ ಒಂದುಗೂಡಿಸಿದ್ದೆ” ಎಂದು ಬರೆದುಕೊಂಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ