
ಬೀದರ: ಸಂಕ್ರಾಂತಿ ಸಂಭ್ರಮದ ನಡುವೆಯೇ ಗಾಳಿಪಟದ ದಾರ (ಮಾಂಜಾ) ಮತ್ತೊಂದು ಬಲಿ ಪಡೆದಿದೆ. ಕರ್ನಾಟಕದ ಬೀದರ ಜಿಲ್ಲೆಯಲ್ಲಿ ಗಾಳಿಪಟದ ದಾರ ಕುತ್ತಿಗೆಗೆ ಸಿಲುಕಿ 48 ವರ್ಷದ ಬೈಕ್ ಸವಾರರೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ.
ಮೃತರು ಸಂಜುಕುಮಾರ ಹೊಸಮನಿ ಎಂದು ತಿಳಿದುಬಂದಿದೆ.
ಸಂಕ್ರಾಂತಿ ಹಬ್ಬದ ಪ್ರಯುಕ್ತ, ಹುಮನಾಬಾದಿನಲ್ಲಿ ವಾಸವಾಗಿರುವ ತಮ್ಮ ಮಗಳನ್ನು ಕರೆದುಕೊಂಡು ಬರಲು ಅವರು ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ತಾಳಮಡಗಿ ಗ್ರಾಮದ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಮೇಲೆ ಹಾರಾಡುತ್ತಿದ್ದ ಗಾಳಿಪಟದ ನಿಷೇಧಿತ ನೈಲಾನ್ ದಾರ ಅವರ ಕಣ್ಣಿಗೆ ಕಾಣದೆ ನೇರವಾಗಿ ಕುತ್ತಿಗೆಗೆ ಸುತ್ತಿಕೊಂಡಿದೆ. ನೈಲಾನ್ ದಾರವು ಕುತ್ತಿಗೆಯನ್ನು ಆಳವಾಗಿ ಸೀಳಿದ್ದರಿಂದ ವಿಪರೀತ ರಕ್ತಸ್ರಾವ ಉಂಟಾಗಿ ಅವರು ರಸ್ತೆಯಲ್ಲೇ ಕುಸಿದು ಬಿದ್ದಿದ್ದಾರೆ. ದಾರಹೋಕರು ಅವರ ಗಾಯಕ್ಕೆ ಬಟ್ಟೆ ಕಟ್ಟಿ ರಕ್ತ ನಿಲ್ಲಿಸಲು ಪ್ರಯತ್ನಿಸಿದರಾದರೂ, ಅಷ್ಟರಲ್ಲೇ ಅವರು ಪ್ರಾಣ ಬಿಟ್ಟಿದ್ದರು.

ಘಟನಾ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ ಸ್ಥಳೀಯರು, ಅಪಾಯಕಾರಿ ನೈಲಾನ್ ದಾರಗಳ (ಚೈನೀಸ್ ಮಾಂಜಾ) ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಮತ್ತು ತುರ್ತು ಚಿಕಿತ್ಸಾ ಸೇವೆಗಳನ್ನು ಸುಧಾರಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಪ್ರಾಣಾಂತಿಕವಾಗುತ್ತಿರುವ ‘ಚೈನೀಸ್ ಮಾಂಜಾ’:
ಮೊದಲು ಗಾಳಿಪಟಕ್ಕೆ ಹತ್ತಿ ನೂಲನ್ನು ಬಳಸಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅಗ್ಗದ ಬೆಲೆಯ ಮತ್ತು ಗಟ್ಟಿಯಾದ ನೈಲಾನ್ ದಾರಗಳು ಮಾರುಕಟ್ಟೆಗೆ ಬಂದಿವೆ. ಈ ನೈಲಾನ್ ದಾರಗಳು ಸುಲಭವಾಗಿ ಹರಿಯುವುದಿಲ್ಲ. ಇದು ಬೈಕ್ ಸವಾರರ ಕುತ್ತಿಗೆಗೆ ತಗುಲಿದಾಗ ಚಾಕುವಿನಂತೆ ಚರ್ಮವನ್ನು ಸೀಳುತ್ತದೆ. ಇತ್ತೀಚಿನ ದಿನಗಳಲ್ಲಿ ಇಂತಹ ಹಲವಾರು ಪ್ರಕರಣಗಳು ವರದಿಯಾಗುತ್ತಲೇ ಇವೆ.


ನಿಮ್ಮ ಕಾಮೆಂಟ್ ಬರೆಯಿರಿ