
ಮಸ್ಕತ್: ಭಾರತ ಮತ್ತು ಓಮನ್ ನಡುವಿನ ಸಾವಿರಾರು ವರ್ಷಗಳ ಪುರಾತನ ಕಡಲ ಸಂಬಂಧವನ್ನು ಸ್ಮರಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿದ್ದ ಸಾಹಸಯಾತ್ರೆ ಯಶಸ್ವಿಯಾಗಿದೆ. ಗುಜರಾತ್ನ ಪೋರ್ಬಂದರಿನಿಂದ ಹೊರಟಿದ್ದ ಭಾರತೀಯ ನೌಕಾಪಡೆಯ ಸಾಂಪ್ರದಾಯಿಕ ‘ಹೊಲಿಗೆ ಹಡಗು’ (stitched ship) INSV ಕೌಂಡಿನ್ಯ, 17 ದಿನಗಳ ಸುದೀರ್ಘ ಪ್ರಯಾಣದ ನಂತರ ಬುಧವಾರ ಓಮನ್ನ ಮಸ್ಕತ್ ತೀರವನ್ನು ಸುರಕ್ಷಿತವಾಗಿ ತಲುಪಿದೆ.
ಈ ನೌಕೆಯ ವಿಶೇಷತೆಯೆಂದರೆ, 65 ಅಡಿ ಉದ್ದದ ಈ ನೌಕೆಯನ್ನು ಸಾಂಪ್ರದಾಯಿಕ ಹೊಲಿಗೆ ಹಡಗು ನಿರ್ಮಾಣ ತಂತ್ರಗಳನ್ನು ಬಳಸಿ ನಿರ್ಮಿಸಲಾಗಿದೆ, ಹಲವಾರು ಶತಮಾನಗಳ ಹಿಂದಿನ ನೈಸರ್ಗಿಕ ವಸ್ತುಗಳು ಮತ್ತು ವಿಧಾನಗಳನ್ನು ಇದರಲ್ಲಿ ಬಳಸಲಾಗಿದೆ. ಅಜಂತಾ ಗುಹೆಯ ಐದನೇ ಶತಮಾನದ ವರ್ಣಚಿತ್ರದಿಂದ ಸ್ಫೂರ್ತಿ ಪಡೆದು ಈ 65 ಅಡಿ ಉದ್ದದ ನೌಕೆಯನ್ನು ಸಿದ್ಧಪಡಿಸಲಾಗಿದೆ. ಕೇರಳದ ಪರಿಣಿತ ಕುಶಲಕರ್ಮಿಗಳು ನೈಸರ್ಗಿಕ ವಸ್ತುಗಳನ್ನು ಬಳಸಿ ಹಳೆಯ ಪದ್ಧತಿಯಲ್ಲೇ ಇದನ್ನು ನಿರ್ಮಿಸಿದ್ದಾರೆ.
ಭವ್ಯ ಸ್ವಾಗತ ಕೋರಿದ ಕೇಂದ್ರ ಸಚಿವ ಸೋನೋವಾಲ್
ಮಸ್ಕತ್ನ ಪೋರ್ಟ್ ಸುಲ್ತಾನ್ ಖಾಬೂಸ್ ಬಂದರಿನಲ್ಲಿ ನೌಕೆಯನ್ನು ಬರಮಾಡಿಕೊಂಡ ಕೇಂದ್ರ ಬಂದರು ಮತ್ತು ಹಡಗು ಸಚಿವ ಸರ್ಬಾನಂದ ಸೋನೋವಾಲ್, “ಈ ಯಾತ್ರೆಯು ಭಾರತದ ಕಡಲ ಕ್ಷೇತ್ರದ ಶಕ್ತಿ ಮತ್ತು ಪರಂಪರೆಯನ್ನು ಜಗತ್ತಿಗೆ ಸಾರಿದೆ. ಇದು ಕೇವಲ ಪ್ರಯಾಣವಲ್ಲ, ಭಾರತ ಮತ್ತು ಓಮನ್ ನಡುವಿನ ಗಾಢ ನಾಗರಿಕ ಸಂಬಂಧದ ಸಂಕೇತ ಎಂದು ಬಣ್ಣಿಸಿದರು.
ಕಮಾಂಡರ್ ವಿಕಾಸ್ ಶಿಯೋರಾನ್ ನೇತೃತ್ವದ 4 ಅಧಿಕಾರಿಗಳು ಮತ್ತು 13 ನೌಕಾಪಡೆಯ ನಾವಿಕರು ಈ ಸಾಹಸದಲ್ಲಿ ಪಾಲ್ಗೊಂಡಿದ್ದರು.
ಪೋರ್ಬಂದರಿನಿಂದ ಮಸ್ಕತ್ವರೆಗಿನ ಸುಮಾರು 650 ನಾಟಿಕಲ್ ಮೈಲಿ ದೂರವನ್ನು ಈ ನೌಕೆ ಯಶಸ್ವಿಯಾಗಿ ಕ್ರಮಿಸಿದೆ. ಆಗ್ನೇಯ ಏಷ್ಯಾಕ್ಕೆ ಸಮುದ್ರಯಾನ ಮಾಡಿದ್ದ ಪೌರಾಣಿಕ ನಾವಿಕ ‘ಕೌಂಡಿನ್ಯ’ನ ಹೆಸರನ್ನು ಈ ನೌಕೆಗೆ ಇಡಲಾಗಿದೆ.
ಕೇಂದ್ರ ಸಾಂಸ್ಕೃತಿಕ ಸಚಿವಾಲಯ, ಭಾರತೀಯ ನೌಕಾಪಡೆ ಮತ್ತು ಹೊಡಿ ಇನ್ನೋವೇಶನ್ಸ್ ಜಂಟಿಯಾಗಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದವು.
ಯೋಜನೆಯಲ್ಲಿ ತೊಡಗಿದ್ದ ಆರ್ಥಿಕ ಸಲಹಾ ಮಂಡಳಿಯ ಸದಸ್ಯ ಸಂಜೀವ್ ಸನ್ಯಾಲ ಮಾತನಾಡಿ, “ಪ್ರಾಚೀನ ಭಾರತವು ಸಾಹಸಿಗಳು ಮತ್ತು ಉದ್ಯಮಿಗಳ ದೇಶವಾಗಿತ್ತು. ಕೇವಲ ಒಂದು ವರ್ಣಚಿತ್ರವನ್ನು ಆಧರಿಸಿ ಇಂತಹ ಕ್ರಿಯಾತ್ಮಕ ನೌಕೆಯನ್ನು ನಿರ್ಮಿಸುವುದು ದೊಡ್ಡ ಸವಾಲಾಗಿತ್ತು,” ಎಂದರು.
ಸಮುದ್ರದ ಬೃಹತ್ ಅಲೆಗಳ ಒತ್ತಡವನ್ನೂ ತಡೆದು ನಿಂತ ಈ ‘ಹೊಲಿಗೆ ನೌಕೆ’ (stitched ship)ಯು ಭಾರತದ ಪ್ರಾಚೀನ ನೌಕಾ ನಿರ್ಮಾಣ ತಂತ್ರಜ್ಞಾನ ಎಷ್ಟು ಪ್ರಬಲವಾಗಿತ್ತು ಎಂಬುದನ್ನು ಸಾಬೀತುಪಡಿಸಿದೆ. ಭಾರತ ಮತ್ತು ಓಮನ್ ರಾಜತಾಂತ್ರಿಕ ಸಂಬಂಧದ 70ನೇ ವರ್ಷದ ಅಂಗವಾಗಿ ಈ ಯಾನ ವಿಶೇಷ ಮಹತ್ವ ಪಡೆದಿದೆ.



ನಿಮ್ಮ ಕಾಮೆಂಟ್ ಬರೆಯಿರಿ