ಸ್ಪೇನ್‌ನಲ್ಲಿ 2 ಹೈಸ್ಪೀಡ್‌ ರೈಲುಗಳು “ಅತ್ಯಂತ ವಿಚಿತ್ರ” ಅಪಘಾತ ; 21 ಸಾವು, 70ಕ್ಕೂ ಹೆಚ್ಚು ಜನರಿಗೆ ಗಾಯ

ಮ್ಯಾಡ್ರಿಡ್: ದಕ್ಷಿಣ ಸ್ಪೇನ್‌ನ ಅಂಡಲೂಸಿಯಾ ಪ್ರಾಂತ್ಯದಲ್ಲಿ ಭಾನುವಾರ ಸಂಜೆ ಸಂಭವಿಸಿದ ಎರಡು ಅತಿವೇಗದ (High-speed) ರೈಲುಗಳ ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ಕನಿಷ್ಠ 21 ಜನರು ಸಾವಿಗೀಡಾಗಿದ್ದಾರೆ ಮತ್ತು 73ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯನ್ನು ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ “ತೀವ್ರ ವೇದನೆಯ ರಾತ್ರಿ” ಎಂದು ಬಣ್ಣಿಸಿದ್ದಾರೆ.
ಸ್ಪೇನ್‌ನ ರೈಲ್ವೆ ಜಾಲದ ಆಪರೇಟರ್ ‘ಅಡಿಫ್’ (Adif) ನೀಡಿರುವ ಮಾಹಿತಿಯ ಪ್ರಕಾರ ಮಲಾಗಾದಿಂದ ಮ್ಯಾಡ್ರಿಡ್‌ಗೆ ಪ್ರಯಾಣಿಸುತ್ತಿದ್ದ ರೈಲು ‘ಅಡಾಮುಜ್’ ಎಂಬಲ್ಲಿ ಹಳಿ ತಪ್ಪಿ ಪಕ್ಕದ ಹಳಿಗೆ ಸರಿಯಿತು.
ಇದೇ ವೇಳೆ ಎದುರುಗಡೆಯಿಂದ ಬರುತ್ತಿದ್ದ ಮತ್ತೊಂದು ರೈಲಿಗೆ ಇದು ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎರಡೂ ರೈಲುಗಳು ಹಳಿ ತಪ್ಪಿವೆ.
ಅಪಘಾತವು ರೈಲ್ವೆ ಹಳಿಯ ನೇರವಾದ ಭಾಗದಲ್ಲಿ ಸಂಭವಿಸಿದೆ. ಈ ಹಳಿಯನ್ನು ಇತ್ತೀಚೆಗಷ್ಟೇ ನವೀಕರಿಸಲಾಗಿತ್ತು ಮತ್ತು ಹಳಿ ತಪ್ಪಿದ ಮೊದಲ ರೈಲು ಕೂಡ ತೀರಾ ಹೊಸದಾಗಿತ್ತು. ಹೀಗಾಗಿ ಈ ಅಪಘಾತ ಸಂಭವಿಸಿರುವುದು ಅತ್ಯಂತ ಆಶ್ಚರ್ಯಕರವಾಗಿದೆ ಎಂದು ಸಾರಿಗೆ ಸಚಿವ ಆಸ್ಕರ್ ಪುಯೆಂಟೆ ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಮತ್ತು ಸಾವು-ನೋವು
ಅಂಡಲೂಸಿಯಾದ ತುರ್ತು ಸೇವಾ ವಿಭಾಗದ ಮುಖ್ಯಸ್ಥ ಆಂಟೋನಿಯೊ ಸಾಂಜ್ ಅವರ ಪ್ರಕಾರ, ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಗಾಯಗೊಂಡ 73 ಜನರಲ್ಲಿ 30 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ. ಅಪಘಾತದ ಸ್ಥಳದಲ್ಲಿ ರೈಲಿನ ಬೋಗಿಗಳು ನಜ್ಜುಗುಜ್ಜಾಗಿದ್ದು, ಲೋಹದ ಅವಶೇಷಗಳ ನಡುವೆ ಜನರು ಸಿಲುಕಿಕೊಂಡಿರುವುದು ರಕ್ಷಣಾ ಕಾರ್ಯಾಚರಣೆಗೆ ದೊಡ್ಡ ಸವಾಲಾಗಿದೆ. ಕೆಲವು ಬೋಗಿಗಳು ಸುಮಾರು 4 ಮೀಟರ್ ಆಳದ ಹಳ್ಳಕ್ಕೆ ಉರುಳಿ ಬಿದ್ದಿವೆ. ರಕ್ಷಣಾ ಕಾರ್ಯಕ್ಕಾಗಿ ಸೇನೆಯ ತುರ್ತು ಘಟಕದ 40 ಸದಸ್ಯರು ಮತ್ತು 15 ವಾಹನಗಳನ್ನು ನಿಯೋಜಿಸಲಾಗಿದೆ.
ಪ್ರತ್ಯಕ್ಷದರ್ಶಿಗಳ ಭೀಕರ ಅನುಭವ
ಅಪಘಾತದಿಂದ ಬದುಕುಳಿದ ಪ್ರಯಾಣಿಕರು ಇದನ್ನು “ಭೀಕರ ಹಾರರ್ ಸಿನಿಮಾ” ಎಂದು ಬಣ್ಣಿಸಿದ್ದಾರೆ. “ರೈಲು ಭಾರಿ ಸದ್ದಿನೊಂದಿಗೆ ಹಠಾತ್ತಾಗಿ ನಿಂತಿತು, ಎಲ್ಲೆಡೆ ಕತ್ತಲೆ ಆವರಿಸಿತು. ಬೋಗಿಯಲ್ಲಿದ್ದ ಲಗೇಜ್‌ಗಳು ಜನರ ಮೇಲೆ ಬಿದ್ದವು, ಮಕ್ಕಳು ಕಿರುಚಾಡುತ್ತಿದ್ದರು,” ಎಂದು ಬದುಕುಳಿದ ಪ್ರಯಾಣಿಕರೊಬ್ಬರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕ್ರಿಕೆಟ್ ದಂತಕತೆ ಸರ್ ಗ್ಯಾರಿ ಸೋಬರ್ಸ್ ನಿಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement