ಬೆಳಗಾವಿ: ಹಿರಿಯ ಐಪಿಎಸ್ ಅಧಿಕಾರಿ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್ ಅವರು ಕಚೇರಿಯಲ್ಲೇ ಮಹಿಳೆಯೊಂದಿಗೆ ಸರಸವಾಡಿದ್ದಾರೆ ಎಂಬ ಆರೋಪಿತ ವೀಡಿಯೊ ವೈರಲ್ ಆಗಿದ್ದು, ಈ ಕುರಿತು ವರದಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಗೃಹ ಇಲಾಖೆಗೆ ಸೂಚನೆ ನೀಡಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿ ಸಮವಸ್ತ್ರದಲ್ಲಿರುವಾಗಲೇ ತಮ್ಮ ಕಚೇರಿಯ ಒಳಗಡೆ ಮಹಿಳೆಯನ್ನು ತಬ್ಬಿಕೊಂಡಿರುವ ವೀಡಿಯೊ ವೈರಲ್ ಆದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸೂಚನೆ ನೀಡಿದ್ದಾರೆ.
ಸೋಮವಾರ ಬೆಳಗಾವಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ವೀಡಿಯೊ ಬಗ್ಗೆ ನನಗೆ ಬೆಳಿಗ್ಗೆ ತಿಳಿಯಿತು. ತಪ್ಪಿತಸ್ಥರೆಂದು ಕಂಡುಬಂದರೆ ಎಷ್ಟೇ ದೊಡ್ಡವರಾದರೂ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿ ವರದಿ ನೀಡುವಂತೆ ಗೃಹ ಇಲಾಖೆಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.
ಕರ್ತವ್ಯದ ಸಮಯದಲ್ಲಿ ಸರ್ಕಾರಿ ಕಚೇರಿಯೊಳಗೆ ಆಪಾದಿತ ಕೃತ್ಯಗಳು ನಡೆದಿವೆ ಎಂದು ಹೇಳಲಾಗುತ್ತಿರುವುದರಿಂದ ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆ ತಮ್ಮ ಮಲಮಗಳು, ನಟಿ ರನ್ಯಾ ರಾವ್ ಅವರ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿಯಾಗಿದ್ದಾರೆ ಎಂಬ ಆರೋಪ ಮೇಲೆ ರಾಮಚಂದ್ರ ರಾವ್ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿತ್ತು. ನಂತರ ಅವರನ್ನು ರಾಜ್ಯ ಸರ್ಕಾರ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಮರುನೇಮಕ ಮಾಡಿತ್ತು.
ನನ್ನ ವಿರುದ್ಧ ಷಡ್ಯಂತ್ರ ; ರಾಮಚಂದ್ರ ರಾವ್
ಸುದ್ದಿಗಾರರೊಂದಿಗೆ ಮಾತನಾಡಿದ ರಾಮಚಂದ್ರ ರಾವ್ ಅವರು, ಇದು ಹೇಗೆ ಮತ್ತು ಯಾವಾಗ ನಡೆಯಿತು, ಯಾರು ಅದನ್ನು ಮಾಡಿದ್ದಾರೆಂದು ನಾನು ಯೋಚಿಸುತ್ತಿದ್ದೇನೆ. ಈ ಯುಗದಲ್ಲಿ ಏನು ಬೇಕಾದರೂ ಮಾಡಬಹುದು. ಅದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
‘ಅದು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಿದ ಅಥವಾ ಎಡಿಟ್ ಮಾಡಿದ ವೀಡಿಯೊ ಆಗಿದೆ. ನನ್ನ ವೃತ್ತಿಜೀವನಕ್ಕೆ ಕಪ್ಪುಚುಕ್ಕೆ ತರಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ರೀತಿಯ ಷಡ್ಯಂತ್ರ ರೂಪಿಸಿವೆ. ಇವೆಲ್ಲವೂ ಕಟ್ಟುಕತೆ’ ಎಂದು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ