ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಬಿಡುಗಡೆ ಮಾಡಿರುವ ನೂತನ ಭೂಪಟವೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ತಮ್ಮ ‘ಟ್ರುತ್ ಸೋಶಿಯಲ್’ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ಭೂಪಟದಲ್ಲಿ ಕೆನಡಾ, ವೆನೆಜುವೆಲಾ ಮತ್ತು ಗ್ರೀನ್‌ಲ್ಯಾಂಡ್ ರಾಷ್ಟ್ರಗಳನ್ನು ಅಮೆರಿಕದ ಭೂಭಾಗವೆಂದು ತೋರಿಸಲಾಗಿದೆ.
AI ತಂತ್ರಜ್ಞಾನ ಬಳಸಿ ಸಿದ್ಧಪಡಿಸಿದಂತೆ ಕಾಣುವ ಈ ಚಿತ್ರದಲ್ಲಿ, ಟ್ರಂಪ್ ಅವರು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಇಟಲಿಯ ಜಾರ್ಜಿಯಾ ಮೆಲೋನಿ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಜರ್ಮನ್ ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್ ಅವರನ್ನೊಳಗೊಂಡ ಯುರೋಪಿಯನ್ ನಾಯಕರೊಂದಿಗೆ ಸಭೆ ನಡೆಸುತ್ತಿರುವುದನ್ನು ಕಾಣಬಹುದು. ಈ ನಾಯಕರ ಹಿನ್ನೆಲೆಯಲ್ಲಿರುವ ಅಮೆರಿಕದ ಭೂಪಟದಲ್ಲಿ ನೆರೆರಾಷ್ಟ್ರಗಳನ್ನೂ ಅಮೆರಿಕದ ಗಡಿಯೊಳಗೆ ತೋರಿಸಲಾಗಿದೆ.
ಮತ್ತೊಂದು ಪೋಸ್ಟ್‌ನಲ್ಲಿ, ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರೊಂದಿಗೆ ಟ್ರಂಪ್ ಗ್ರೀನ್‌ಲ್ಯಾಂಡ್‌ನಲ್ಲಿ ಅಮೆರಿಕದ ಧ್ವಜವನ್ನು ನೆಡುತ್ತಿರುವ ಚಿತ್ರವಿದ್ದು, ಅದಕ್ಕೆ “ಗ್ರೀನ್‌ಲ್ಯಾಂಡ್ ಅಮೆರಿಕದ ಕೇಂದ್ರಾಡಳಿತ ಪ್ರದೇಶ – ಸ್ಥಾಪನೆ 2026” ಎಂದು ಶೀರ್ಷಿಕೆ ನೀಡಲಾಗಿದೆ.
ಕೆನಡಾ ಮತ್ತು ವೆನೆಜುವೆಲಾ ಮೇಲಿನ ಹಿಡಿತ
ಕಳೆದ ವರ್ಷ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಕೆನಡಾವನ್ನು ಅಮೆರಿಕದ 51ನೇ ರಾಜ್ಯವನ್ನಾಗಿ ಮಾಡುವ ಪ್ರಸ್ತಾಪವನ್ನು ಟ್ರಂಪ್ ಮುಂದಿಟ್ಟಿದ್ದರು. ಆದರೆ ಕೆನಡಾ ಸರ್ಕಾರ ಇದನ್ನು ತಳ್ಳಿಹಾಕಿದ್ದರಿಂದ ಎರಡೂ ದೇಶಗಳ ನಡುವೆ ವ್ಯಾಪಾರ ಸಮರ ತಾರಕಕ್ಕೇರಿದೆ.
ಇತ್ತೀಚೆಗಷ್ಟೇ ಅಮೆರಿಕದ ವಿಶೇಷ ಪಡೆಗಳು ವೆನೆಜುವೆಲಾದಲ್ಲಿ ಕಾರ್ಯಾಚರಣೆ ನಡೆಸಿ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿ ನ್ಯೂಯಾರ್ಕ್‌ಗೆ ಕರೆತಂದಿದ್ದವು. ಅಂದಿನಿಂದ ಟ್ರಂಪ್ ಅವರು “ಅಮೆರಿಕವೇ ವೆನೆಜುವೆಲಾವನ್ನು ಆಳಲಿದೆ ಮತ್ತು ಅಲ್ಲಿನ ತೈಲ ನಿಕ್ಷೇಪಗಳನ್ನು ಅಮೆರಿಕದ ಕಂಪನಿಗಳು ನಿಯಂತ್ರಿಸಲಿವೆ” ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ.
https://truthsocial.com/@realDonaldTrump/115925888562624963
https://truthsocial.com/@realDonaldTrump/115925897257210763
ಗ್ರೀನ್‌ಲ್ಯಾಂಡ್ ಮೇಲೆ ಟ್ರಂಪ್ ಕಣ್ಣೇಕೆ?
ಗ್ರೀನ್‌ಲ್ಯಾಂಡ್‌ನಲ್ಲಿ ಹೇರಳವಾಗಿರುವ ಖನಿಜ ಸಂಪತ್ತು ಮತ್ತು ಅಮೆರಿಕದ ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಆ ದ್ವೀಪವನ್ನು ವಶಪಡಿಸಿಕೊಳ್ಳಲು ಟ್ರಂಪ್ ತುದಿಗಾಲಲ್ಲಿ ನಿಂತಿದ್ದಾರೆ.
ತಮಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡದಿದ್ದಕ್ಕಾಗಿ ಅಸಮಾಧಾನ ವ್ಯಕ್ತಪಡಿಸಿರುವ ಟ್ರಂಪ್, “ನಾನು ಎಂಟು ಯುದ್ಧಗಳನ್ನು ನಿಲ್ಲಿಸಿದ್ದರೂ ನನಗೆ ನೊಬೆಲ್ ನೀಡದ ಕಾರಣ, ಇನ್ನು ಮುಂದೆ ನಾನು ಕೇವಲ ಶಾಂತಿಯ ಬಗ್ಗೆ ಯೋಚಿಸುವ ಅಗತ್ಯವಿಲ್ಲ” ಎಂದು ನಾರ್ವೆ ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಗ್ರೀನ್‌ಲ್ಯಾಂಡ್ ಸ್ವಾಧೀನಕ್ಕೆ ಅಡ್ಡಿಪಡಿಸುವ ಯುರೋಪಿಯನ್ ರಾಷ್ಟ್ರಗಳ ಮೇಲೆ ಭಾರಿ ಸುಂಕ ಹೇರುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಭಾರಿ ಕುಸಿತ ಕಂಡುಬಂದಿದೆ.
ಡೆನ್ಮಾರ್ಕ್ ಆಡಳಿತಕ್ಕೊಳಪಟ್ಟಿರುವ ಗ್ರೀನ್‌ಲ್ಯಾಂಡ್ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ಟ್ರಂಪ್ ನಡೆಸುತ್ತಿರುವ ಈ ಪ್ರಯತ್ನವು ಮಿತ್ರರಾಷ್ಟ್ರಗಳ ನಡುವೆ ಆತಂಕ ಮೂಡಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ