ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಿತಿನ್ ನವೀನ್

ನವದೆಹಲಿ: ನಿತಿನ್ ನವೀನ್ ಅವರು ಮಂಗಳವಾರ ಅಧಿಕೃತವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಮೂಲಕ 1980ರಲ್ಲಿ ಸ್ಥಾಪನೆಯಾದ ಬಿಜೆಪಿ ಪಕ್ಷದಲ್ಲಿ ಹೊಸ ತಲೆಮಾರಿನ ನಾಯಕತ್ವಕ್ಕೆ ಚಾಲನೆ ಸಿಕ್ಕಂತಾಗಿದೆ. ವಿಶೇಷವೆಂದರೆ, ಬಿಜೆಪಿ ಸ್ಥಾಪನೆಯಾದ ವರ್ಷವೇ (1980) ನಿತಿನ್ ನವೀನ್ ಅವರು ಜನಿಸಿದ್ದಾರೆ.
ಬಿಜೆಪಿ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಅಧಿಕೃತ ಸಭೆಯಲ್ಲಿ ನಿತಿನ್ ನವೀನ್ ಅವರನ್ನು ನೂತನ ಅಧ್ಯಕ್ಷರೆಂದು ಘೋಷಿಸಲಾಯಿತು. ಬಿಜೆಪಿಯ ಸಾಂಸ್ಥಿಕ ಚುನಾವಣಾ ರಿಟರ್ನಿಂಗ್ ಆಫೀಸರ್ ಕೆ. ಲಕ್ಷ್ಮಣ ಅವರು ಚುನಾವಣಾ ಫಲಿತಾಂಶ ಪ್ರಕಟಿಸಿ, 45 ವರ್ಷದ ನವೀನ್ ಅವರಿಗೆ ಪ್ರಮಾಣಪತ್ರ ಹಸ್ತಾಂತರಿಸಿದರು. ಇದರೊಂದಿಗೆ ನಿತಿನ್ ನವೀನ್ ಅವರು ಬಿಜೆಪಿ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನ ರಾಷ್ಟ್ರೀಯ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಗಣ್ಯರ ಉಪಸ್ಥಿತಿಯಲ್ಲಿ ನಾಯಕತ್ವ ಹಸ್ತಾಂತರ
ಈ ಐತಿಹಾಸಿಕ ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ, ನಿರ್ಗಮಿತ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವರಾದ ರಾಜನಾಥ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ ಸೇರಿದಂತೆ ಹಲವು ಹಿರಿಯ ನಾಯಕರು ಸಾಕ್ಷಿಯಾದರು. 1980ರಲ್ಲಿ ಸ್ಥಾಪನೆಯಾದ ಬಿಜೆಪಿಯ 12ನೇ ಅಧ್ಯಕ್ಷರಾಗಿ ನವೀನ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಡಿಸೆಂಬರ್ 14 ರಂದು ಪಕ್ಷದ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ನಂತರ ಅವರು ಬಿಹಾರ ಸರ್ಕಾರದ ಕಾನೂನು ಮತ್ತು ನ್ಯಾಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
“ಬಿಜೆಪಿಯಲ್ಲಿ ನಾಯಕತ್ವವು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಬೆಳೆಯುತ್ತದೆಯೇ ಹೊರತು ವಂಶಪಾರಂಪರ್ಯ ಸವಲತ್ತುಗಳಿಂದಲ್ಲ ಎಂಬುದಕ್ಕೆ ಈ ಚುನಾವಣೆ ಸಾಕ್ಷಿಯಾಗಿದೆ,” ಎಂದು ಕೆ. ಲಕ್ಷ್ಮಣ ತಿಳಿಸಿದರು.

ಪ್ರಮುಖ ಸುದ್ದಿ :-   ಹ್ಯಾರಿಯರ್ ಕಾರು, ನಕಲಿ ಎನ್‌ಎಸ್‌ಜಿ ಕಮಾಂಡೋಗಳು ! ಸೇನೆಯ ಬ್ರಿಗೇಡಿಯರ್ ಸೋಗಿನಲ್ಲಿ ಓಡಾಡುತ್ತಿದ್ದ ಯುವಕ ಬಲೆಗೆ ಬಿದ್ದಿದ್ದೇ ರೋಚಕ

 ಐತಿಹಾಸಿಕ ಸಂದರ್ಭ: ಜೆ.ಪಿ. ನಡ್ಡಾ
“ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಯುವ ಮತ್ತು ಪ್ರತಿಭಾವಂತ ನಿತಿನ್ ನವೀನ್ ಜವಾಬ್ದಾರಿ ವಹಿಸಿಕೊಳ್ಳುತ್ತಿರುವುದು ಅತ್ಯಂತ ಐತಿಹಾಸಿಕ ಸಂದರ್ಭ. ಕೋಟ್ಯಂತರ ಕಾರ್ಯಕರ್ತರ ಪರವಾಗಿ ಅವರಿಗೆ ಅಭಿನಂದನೆಗಳು ಎಂದು ಜೆ.ಪಿ. ನಡ್ಡಾ ಹಾರೈಸಿದರು.
ಸೋಮವಾರ ನಡೆದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಪ್ರಧಾನಿ ಮೋದಿ ಸೇರಿದಂತೆ ಹಿರಿಯ ನಾಯಕರು ನಿತಿನ್ ಅವರ ಹೆಸರನ್ನು ಸೂಚಿಸಿದ್ದರು. ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ದೇಗುಲಗಳಿಗೆ ಭೇಟಿ, ವಿಶೇಷ ಪೂಜೆ
ಪದಗ್ರಹಣಕ್ಕೂ ಮುನ್ನ ನಿತಿನ್ ನವೀನ್ ಅವರು ದೆಹಲಿಯ ವಿವಿಧ ದೇವಾಲಯಗಳಿಗೆ ಭೇಟಿ ನೀಡಿದರು. ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚದೇವ ಮತ್ತು ಇತರ ನಾಯಕರೊಂದಿಗೆ ಜಂಡೇವಾಲಾ ದೇವಿ ಮಂದಿರ, ಮಂದಿರ ಮಾರ್ಗದಲ್ಲಿರುವ ವಾಲ್ಮೀಕಿ ಮಂದಿರ, ಕನಾಟ್ ಪ್ಲೇಸ್‌ನ ಪ್ರಾಚೀನ ಹನುಮಾನ ಮಂದಿರ ಹಾಗೂ ಬಂಗ್ಲಾ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
‘ಝೆಡ್’ ಕೆಟಗರಿ ಭದ್ರತೆ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ನಿತಿನ್ ನವೀನ್ ಅವರಿಗೆ ಉನ್ನತ ಮಟ್ಟದ ‘ಝೆಡ್’ (Z) ಕೆಟಗರಿ ವಿಐಪಿ ಭದ್ರತೆಯನ್ನು ಒದಗಿಸಿದೆ. ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) ಸಶಸ್ತ್ರ ಕಮಾಂಡೋಗಳು ಇನ್ಮುಂದೆ ಅವರ ದೇಶಾದ್ಯಂತ ಪ್ರವಾಸದ ವೇಳೆ ಭದ್ರತೆ ನೀಡಲಿದ್ದಾರೆ.

ಪ್ರಮುಖ ಸುದ್ದಿ :-   ಕೇವಲ 23ನೇ ವಯಸ್ಸಿಗೆ 19 ಸರ್ಕಾರಿ ಪರೀಕ್ಷೆ ಪಾಸ್ ! ರಾಷ್ಟ್ರಪತಿಯಿಂದ 'ಅಟ್-ಹೋಮ್' ಗೌರವಕ್ಕೆ ಆಯ್ಕೆಯಾದ ಯುವತಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement