ಜಮ್ಮು ಮತ್ತು ಕಾಶ್ಮೀರ | 200 ಅಡಿ ಆಳದ ಕಂದಕಕ್ಕೆ ಉರುಳಿದ ವಾಹನ ; 10 ಯೋಧರು ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಗುರುವಾರ ಸೇನಾ ವಾಹನವೊಂದು ಆಳವಾದ ಕಂದಕಕ್ಕೆ ಉರುಳಿದ ಪರಿಣಾಮ, ಕನಿಷ್ಠ 10 ಯೋಧರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಒಂಬತ್ತು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗುರುವಾರ ಭದೇರ್ವಾ-ಚಂಬಾ ಅಂತರರಾಜ್ಯ ರಸ್ತೆಯ ಖನ್ನಿ ಟಾಪ್ ಎಂಬಲ್ಲಿ ಈ ದುರಂತ ಸಂಭವಿಸಿದೆ. ಬುಲೆಟ್ ಪ್ರೂಫ್ ಸೇನಾ ವಾಹನವು ಒಟ್ಟು 17 ಸಿಬ್ಬಂದಿಯನ್ನು ಹೊತ್ತು ಎತ್ತರದ ಪ್ರದೇಶದಲ್ಲಿರುವ ಪೋಸ್ಟ್‌ನತ್ತ ಸಾಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ವಾಹನವು ಸುಮಾರು 200 ಅಡಿ ಆಳದ ಕಂದಕಕ್ಕೆ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಸೇನೆ ಮತ್ತು ಪೊಲೀಸರು ಜಂಟಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಸ್ಥಳದಲ್ಲೇ ನಾಲ್ವರು ಯೋಧರು ಮೃತಪಟ್ಟಿದ್ದರು, ನಂತರ ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ಗಾಯಗೊಂಡ 9 ಯೋಧರನ್ನು ರಕ್ಷಿಸಲಾಗಿದ್ದು, ಅವರಲ್ಲಿ ಸ್ಥಿತಿ ಗಂಭೀರವಾಗಿರುವ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಧಮ್‌ಪುರ ಮಿಲಿಟರಿ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲಾಗಿದೆ.

ಪ್ರಧಾನಿ ಮೋದಿ ಮತ್ತು ಲೆಫ್ಟಿನೆಂಟ್ ಗವರ್ನರ್ ಸಂತಾಪ
ಪ್ರಧಾನಿ ನರೇಂದ್ರ ಮೋದಿ: “ದೋಡಾದಲ್ಲಿ ನಡೆದ ಈ ಅಪಘಾತದಿಂದ ತೀವ್ರ ನೋವಾಗಿದೆ. ನಮ್ಮ ಕೆಚ್ಚೆದೆಯ ಸೈನಿಕರನ್ನು ನಾವು ಕಳೆದುಕೊಂಡಿದ್ದೇವೆ. ದೇಶಕ್ಕೆ ಅವರ ಸೇವೆ ಎಂದೆಂದಿಗೂ ಸ್ಮರಣೀಯ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ,” ಎಂದು ಪ್ರಧಾನಿ ಮೋದಿ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲಾ ನೆರವು ನೀಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ: “ದೇಶದ ವೀರ ಪುತ್ರರ ಸರ್ವೋಚ್ಚ ತ್ಯಾಗವನ್ನು ನಾವು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ. ಶೋಕತಪ್ತ ಕುಟುಂಬಗಳೊಂದಿಗೆ ಇಡೀ ದೇಶವೇ ನಿಂತಿದೆ. ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ,” ಎಂದು ಎಲ್‌ಜಿ ಸಿನ್ಹಾ ಸಂತಾಪ ಸೂಚಿಸಿದ್ದಾರೆ.

ಪ್ರಮುಖ ಸುದ್ದಿ :-   ಅಯೋಧ್ಯೆ ರಾಮಮಂದಿರದ ಮೊದಲ ಸಿಇಒ ಆಗಿ ನಿವೃತ್ತ ಏರ್‌ ಮಾರ್ಷಲ್‌ ಜೀತೇಂದ್ರ ಮಿಶ್ರ ನೇಮಕ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement