ಜೈಪುರ: ಕೊಲೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಇಬ್ಬರು ಕೈದಿಗಳು ಜೈಲಿನಲ್ಲೇ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದು, ಇದೀಗ ವಿವಾಹವಾಗಲು ಪೆರೋಲ್ ಪಡೆದಿರುವ ಅಪರೂಪದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಇಂದು (ಶುಕ್ರವಾರ, ಜನವರಿ 23) ಅಲ್ವಾರ್ನ ಬರೋಡಮೇವ್ನಲ್ಲಿ ಈ ವಿಶಿಷ್ಟ ವಿವಾಹ ನಡೆಯಲಿದ್ದು, ಮದುವೆಯ ಆಮಂತ್ರಣ ಪತ್ರಿಕೆಯೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಧು ಪ್ರಿಯಾ ಸೇಠ್ ಹಾಗೂ ವರ ಹನುಮಾನ ಪ್ರಸಾದ ಅಲಿಯಾಸ್ ಜಾಕ್ ಇಬ್ಬರೂ ಭೀಕರ ಕೊಲೆ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಹಿಂದೆ ಬೇರೆ ಬೇರೆ ಜೋಡಿಗಳೊಂದಿಗೆ ಸೇರಿ ಕೊಲೆ ಮಾಡಿದ್ದ ಇವರಿಬ್ಬರು, ಈಗ ತಮ್ಮ ಹಳೆಯ ಸಂಗಾತಿಗಳನ್ನು ಬಿಟ್ಟು ಪರಸ್ಪರ ಮದುವೆಯಾಗಲು ಸಜ್ಜಾಗಿದ್ದಾರೆ.
ಪ್ರಿಯಾ ಸೇಠ್ 2018ರಲ್ಲಿ ತನ್ನ ದುಷ್ಯಂತ್ ಶರ್ಮಾ ಎಂಬಾತನನ್ನು ‘ಹನಿ ಟ್ರ್ಯಾಪ್’ ಜಾಲಕ್ಕೆ ಸಿಲುಕಿಸಿ ಬರ್ಬರವಾಗಿ ಹತ್ಯೆಗೈದ ಆರೋಪದ ಮೇಲೆ ಈಕೆ ಜೈಲು ಸೇರಿದ್ದಳು. ಈ ಕೃತ್ಯದಲ್ಲಿ ಈಕೆಯ ಅಂದಿನ ಪ್ರಿಯಕರ ದೀಕ್ಷಾಂತ್ ಕಾಮ್ರಾ ಕೂಡ ಭಾಗಿಯಾಗಿದ್ದ. ದುಷ್ಯಂತ್ ಕೊಲೆ ಪ್ರಕರಣದಲ್ಲಿ ಜೈಪುರದಲ್ಲಿ ಜೈಲು ಶಿಕ್ಷೆಗೆ ಗುರಿಯಾಗುವ ಮೊದಲು (ಮೇ 2018), ಪ್ರಿಯಾ ಸೇಠ್ ತನ್ನ ಮಾಜಿ ಗೆಳೆಯ ದಿಕ್ಷಾಂತ್ ಕಾಮ್ರಾ ಜೊತೆ ವಾಸಿಸುತ್ತಿದ್ದಳು. ಪ್ರಕರಣದಲ್ಲಿ ಸಹ ಆರೋಪಿಯಾಗಿರುವ ದಿಕ್ಷಾಂತ್ ಸಹ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.ಹನುಮಾನ ಪ್ರಸಾದ ತನ್ನ ಪ್ರಿಯತಮೆ ಸಂತೋಷ್ ಎಂಬಾಕೆಯ ಸೂಚನೆಯ ಮೇರೆಗೆ, ಆಕೆಯ ಪತಿ ಮತ್ತು ಮೂವರು ಮಕ್ಕಳು ಹಾಗೂ ಆಕೆಯ ಸಂಬಂಧಿಕರ ಒಬ್ಬ ಮಗುವನ್ನು 2017ರಲ್ಲಿ ಹತ್ಯೆ ಮಾಡಿದ್ದ. ಅಂದು ತನಗಿಂತ 10 ವರ್ಷ ಹಿರಿಯವಳಾದ ಸಂತೋಷ್ ಪ್ರೀತಿಗಾಗಿ ಈತ ಕೊಲೆ ಮಾಡಿದ್ದ.
ಜೈಲಿನಲ್ಲಿ ಶುರುವಾದ ಹೊಸ ಅಧ್ಯಾಯ:
ಇವರಿಬ್ಬರನ್ನು ಜೈಪುರದ ‘ಓಪನ್ ಜೈಲು’ ಸೌಲಭ್ಯದಲ್ಲಿ ಇರಿಸಲಾಗಿತ್ತು. ಸಾಮಾನ್ಯ ಜೈಲುಗಳಿಗಿಂತ ಇಲ್ಲಿ ಕೈದಿಗಳಿಗೆ ಹೆಚ್ಚಿನ ಸ್ವಾತಂತ್ರ್ಯ ಮತ್ತು ಪರಸ್ಪರ ಬೆರೆಯುವ ಅವಕಾಶವಿರುತ್ತದೆ. ಕಳೆದ ಆರು ತಿಂಗಳಿನಿಂದ ಈ ಮುಕ್ತ ಕಾರಾಗೃಹದಲ್ಲಿ ಜೊತೆಯಾಗಿ ವಾಸಿಸುತ್ತಿದ್ದ ಇವರ ನಡುವೆ ಪ್ರೇಮ ಅಂಕುರಿಸಿದೆ.
ಹಳೆಯ ಸಂಗಾತಿಗಳಿಗೆ ಗುಡ್-ಬೈ:
ವಿಶೇಷವೆಂದರೆ, ಈ ಹಿಂದೆ ಕೊಲೆ ಕೃತ್ಯಗಳಲ್ಲಿ ಪ್ರಿಯಾ ಸೇಠ್ ಗೆ ಸಾಥ್ ನೀಡಿದ್ದ ಹಳೆಯ ಪ್ರಿಯಕರ ದೀಕ್ಷಾಂತ್ ಮತ್ತು ಹುಮಾನಪ್ರಸಾದ ಯಾರ ಸೂಚನೆಯ ಮೇರೆಲೆ ಕೊಲೆ ಮಾಡಿದ್ದನೋ ಆತನ ಪ್ರಿಯತಮೆ ಹಾಗೂ ಹಿಂದಿನ ಟೇಕ್ವಾಂಡೋ ಆಟಗಾರ್ತಿ ಸಂತೋಷ್ ಕೂಡ ಇದೇ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಆದರೆ, ಪ್ರಿಯಾ ಸೇಠ್ ಮತ್ತು ಹನುಮಾನ ತಮ್ಮ ಹಳೆಯ ಸಂಬಂಧಗಳನ್ನು ಕಡಿದುಕೊಂಡು ಹೊಸ ಜೀವನ ಆರಂಭಿಸಲು ನಿರ್ಧರಿಸಿದ್ದಾರೆ. ಈ ಅಪರೂಪದ ಪ್ರೇಮ ಮತ್ತು ವಿವಾಹದ ಸುದ್ದಿ ಈಗ ರಾಜಸ್ಥಾನದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ