ಫರಿದಾಬಾದ್: ಮಗಳಿಗೆ ಮನೆಯಲ್ಲೇ ಪಾಠ ಕಲಿಸಲು ಹೋದ ತಂದೆಯೊಬ್ಬ, ಆಕೆ ಸರಿಯಾಗಿ ಅಂಕಿಗಳನ್ನು ಬರೆಯಲಿಲ್ಲ ಎಂಬ ಕಾರಣಕ್ಕೆ ಮನಬಂದಂತೆ ಥಳಿಸಿ ಮಗಳನ್ನೇ ಹೊಡೆದು ಸಾಯಿಸಿದ ಘಟನೆ ನಡೆದಿದೆ.
ಶುಕ್ರವಾರ ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಆರೋಪಿ ಕೃಷ್ಣ ಜೈಸ್ವಾಲ್ (31) ಎಂಬಾತನನ್ನು ಬಂಧಿಸಿದ್ದಾರೆ. ಸೆಕ್ಟರ್ 58 ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಒಂದು ದಿನದ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಉತ್ತರ ಪ್ರದೇಶದ ಸೋನ್‌ಭದ್ರಾ ಜಿಲ್ಲೆಯ ಖೇರಾಟಿಯಾ ಗ್ರಾಮದ ನಿವಾಸಿಯಾದ ಜೈಸ್ವಾಲ್ ಕುಟುಂಬ, ಫರಿದಾಬಾದ್‌ನ ಬಾಡಿಗೆ ಮನೆಯಲ್ಲಿ ವಾಸವಿತ್ತು. ದಂಪತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ತಾಯಿ ಹಗಲು ವೇಳೆ ಕೆಲಸಕ್ಕೆ ತೆರಳುತ್ತಿದ್ದರೆ, ಮನೆಯಲ್ಲಿದ್ದ ತಂದೆ ಜೈಸ್ವಾಲ್ ಮಕ್ಕಳನ್ನು ನೋಡಿಕೊಳ್ಳುವುದರ ಜೊತೆಗೆ ಮಗಳಿಗೆ ಪಾಠ ಹೇಳಿಕೊಡುತ್ತಿದ್ದ.
ಜನವರಿ 21 ರಂದು ಈ ಕೃತ್ಯ ನಡೆದಿದೆ. ಮಗಳಿಗೆ 1 ರಿಂದ 50 ರವರೆಗೆ ಅಂಕಿಗಳನ್ನು ಬರೆಯಲು ಜೈಸ್ವಾಲ್ ಸೂಚಿಸಿದ್ದ. ಆದರೆ ಮಗು ಅಂಕಿಗಳನ್ನು ಬರೆಯಲು ವಿಫಲವಾದಾಗ ಕೋಪಗೊಂಡ ಆತ, ಮಗುವಿನ ಮೇಲೆ ಹಲ್ಲೆ ನಡೆಸಿದ್ದಾನೆ. ತೀವ್ರ ಸ್ವರೂಪದ ಪೆಟ್ಟು ಬಿದ್ದಿದ್ದರಿಂದ ಮಗು ಸ್ಥಳದಲ್ಲೇ ಪ್ರಾಣ ಬಿಟ್ಟಿದೆ.
ಸಂಜೆ ತಾಯಿ ಕೆಲಸ ಮುಗಿಸಿ ಮನೆಗೆ ಬಂದಾಗ ಮಗು ಮೃತಪಟ್ಟಿರುವುದು ಕಂಡುಬಂದಿದೆ. ತಕ್ಷಣವೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. “ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ನಂತರ ಮಗುವಿನ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ,” ಎಂದು ಫರಿದಾಬಾದ್ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ