ನವದೆಹಲಿ: ಏಪ್ರಿಲ್ 22ರ ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ನಾಲ್ಕು ದಿನಗಳ ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆಯು ಪಾಕಿಸ್ತಾನವನ್ನು ಅಸಹಾಯಕ ಸ್ಥಿತಿಗೆ ತಳ್ಳಿ ಕದನ ವಿರಾಮಕ್ಕೆ ಒಪ್ಪುವಂತೆ ಮಾಡಿದೆ ಎಂದು ಯುರೋಪಿಯನ್ ಮಿಲಿಟರಿ ವಿಶ್ಲೇಷಣಾ ವರದಿಯೊಂದು ಹೇಳಿದೆ.
ಸ್ವಿಟ್ಜರ್ಲೆಂಡ್‌ನ ಪುಲ್ಲಿಯಲ್ಲಿರುವ ‘ಸೆಂಟರ್ ಡಿ ಹಿಸ್ಟೋಯಿರ್ ಎಟ್ ಡಿ ಪ್ರಾಸ್ಪೆಕ್ಟಿವ್ ಮಿಲಿಟೈರ್ಸ್’ (CHPM) ಎಂಬ ಥಿಂಕ್ ಟ್ಯಾಂಕ್ ಈ ವರದಿಯನ್ನು ಪ್ರಕಟಿಸಿದೆ. ನಿವೃತ್ತ ಸ್ವಿಸ್ ಏರ್ ಫೋರ್ಸ್ ಮೇಜರ್ ಜನರಲ್ ಆಡ್ರಿಯನ್ ಫಾಂಟನೆಲ್ಲಾಜ್ ಅವರು ಬರೆದಿರುವ ‘ಆಪರೇಷನ್ ಸಿಂಧೂರ: ದಿ ಇಂಡಿಯಾ-ಪಾಕಿಸ್ತಾನ್ ಏರ್ ವಾರ್’ ಎಂಬ ವರದಿಯಲ್ಲಿ ಭಾರತದ ವಾಯು ಸಾಮರ್ಥ್ಯವನ್ನು ಶ್ಲಾಘಿಸಲಾಗಿದೆ.
ಭಾರತದ ವಾಯು ಪ್ರಾಬಲ್ಯ
ಮೇ 7 ರಿಂದ 10 ರವರೆಗೆ ನಡೆದ ಸಂಘರ್ಷದಲ್ಲಿ ಭಾರತವು ಪಾಕಿಸ್ತಾನದ ಮೇಲೆ ಸಂಪೂರ್ಣ ಮೇಲುಗೈ ಸಾಧಿಸಿತ್ತು. ಅಣ್ವಸ್ತ್ರ ಸಂಘರ್ಷದ ಗಡಿ ದಾಟದೆಯೇ ಪಾಕಿಸ್ತಾನದ ಒಳಗಿನ ಗುರಿಗಳನ್ನು ಧ್ವಂಸ ಮಾಡುವ ಸಾಮರ್ಥ್ಯವನ್ನು ಭಾರತ ಪ್ರದರ್ಶಿಸಿದೆ.
ಮೇ 8 ಮತ್ತು 9 ರಂದು ಪಾಕಿಸ್ತಾನದ ವಾಯುಪಡೆ (PAF) ಆದಂಪುರ ಮತ್ತು ಶ್ರೀನಗರದಂತಹ ಭಾರತೀಯ ವಾಯುನೆಲೆಗಳ ಮೇಲೆ ಡ್ರೋನ್ ದಾಳಿ ನಡೆಸಲು ಪ್ರಯತ್ನಿಸಿತು. ಇದಕ್ಕಾಗಿ ಪಾಕಿಸ್ತಾನವು ಟರ್ಕಿ ಮೂಲದ ಬೈರಕ್ತರ್ TB2 ಮತ್ತು ಅಕಿಂಜಿ ಡ್ರೋನ್‌ಗಳನ್ನು ಬಳಸಿಕೊಂಡಿತ್ತು. ಆದರೆ, ಭಾರತದ ರಕ್ಷಣಾ ವ್ಯವಸ್ಥೆಯನ್ನು ಭೇದಿಸಲು ಅದಕ್ಕೆ ಸಾಧ್ಯವಾಗಲಿಲ್ಲಎಂದು ವರದಿ ಹೇಳಿದೆ.
ಪ್ರತಿಯಾಗಿ ಭಾರತವು ಇಸ್ರೇಲ್ ಮೂಲದ ‘ಹಾರೋಪ್’ ಮತ್ತು ‘ಹಾರ್ಪಿ’ ಲೋಯಿಟರಿಂಗ್ ಕ್ಷಿಪಣಿಗಳನ್ನು ಬಳಸಿ ಪಾಕಿಸ್ತಾನದ ರೇಡಾರ್ ಕೇಂದ್ರಗಳನ್ನು ಧ್ವಂಸಗೊಳಿಸಿತು. ಚುನಿಯಾನ್ ಮತ್ತು ಪಾಸ್ರೂರ್‌ನಲ್ಲಿರುವ ಪಾಕಿಸ್ತಾನದ ಮುನ್ನೆಚ್ಚರಿಕೆ ನೀಡುವ ರೇಡಾರ್‌ಗಳು ನಾಶವಾಗಿವೆ ಎಂದು ವರದಿ ದೃಢಪಡಿಸಿದೆ.
ಪಾಕ್ ವಾಯುನೆಲೆಗಳ ಮೇಲೆ ಬ್ರಹ್ಮೋಸ್ ದಾಳಿ:
ವರದಿಯ ಪ್ರಕಾರ, ಭಾರತೀಯ ವಾಯುಪಡೆಯು ತನ್ನ ವಾಯುಪ್ರದೇಶದ ಒಳಗಿಂದಲೇ ಬ್ರಹ್ಮೋಸ್, ಸ್ಕಲ್ಪ್-ಇಜಿ (SCALP-EG) ಮತ್ತು ರಾಂಪೇಜ್ ಕ್ಷಿಪಣಿಗಳನ್ನು ಉಡಾಯಿಸಿ ಪಾಕಿಸ್ತಾನದ 200 ಕಿ.ಮೀ ಒಳಗಿರುವ ಟಾರ್ಗೆಟ್‌ಗಳನ್ನು ಹೊಡೆದುರುಳಿಸಿದೆ.
ಇಸ್ಲಾಮಾಬಾದ್ ಸಮೀಪದ ಈ ನೆಲೆಯಲ್ಲಿದ್ದ ಪಾಕ್ ವಾಯುಪಡೆಯ ಕಮಾಂಡ್ ಕೇಂದ್ರ ಧ್ವಂಸಗೊಂಡಿದೆ.
ಪಾಕಿಸ್ತಾನದ ಡ್ರೋನ್ ಪಡೆಯ ಕೇಂದ್ರ ಕಚೇರಿಯಾಗಿದ್ದ ಮುರಿದ್ ವಾಯುನೆಲೆ ಹ್ಯಾಂಗರ್‌ಗಳು ಮತ್ತು ನಿಯಂತ್ರಣ ಕೇಂದ್ರಗಳು ನಾಶವಾಗಿವೆ. ರಹೀಮ್ ಯಾರ್ ಖಾನ್ ಮತ್ತು ಸುಕ್ಕೂರ್ ವಾಯು ನೆಲೆಯ ರನ್‌ವೇಗಳು ಮತ್ತು ಡ್ರೋನ್ ನಿಯಂತ್ರಣ ಕೇಂದ್ರಗಳ ಮೇಲೆ ತೀವ್ರ ಹಾನಿಯಾಗಿದೆ.
ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಐದು ಎಫ್-16 (F-16) ಮತ್ತು ಜೆಎಫ್-17 (JF-17) ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ. ಭಾರತದ ಈ ತೀವ್ರತರವಾದ ದಾಳಿಯಿಂದಾಗಿ ಪಾಕಿಸ್ತಾನದ ರೇಡಾರ್ ವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಮತ್ತಷ್ಟು ಹಾನಿಯನ್ನು ತಪ್ಪಿಸಲು ಪಾಕಿಸ್ತಾನವು ಕದನ ವಿರಾಮಕ್ಕೆ ಶರಣಾಯಿತು ಎಂದು ಸ್ವಿಸ್ ವರದಿ ವಿಶ್ಲೇಷಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ