ನವದೆಹಲಿ : ಭಾರತ ಮತ್ತು ಐರೋಪ್ಯ ಒಕ್ಕೂಟದ (EU) ನಡುವೆ ಬಹುನಿರೀಕ್ಷಿತ ‘ಮುಕ್ತ ವ್ಯಾಪಾರ ಒಪ್ಪಂದ’ (FTA) ಅಂತಿಮ ಹಂತಕ್ಕೆ ತಲುಪಿದೆ. ಈ ಐತಿಹಾಸಿಕ ಒಪ್ಪಂದದ ಭಾಗವಾಗಿ, ಯುರೋಪ್ನಿಂದ ಆಮದು ಮಾಡಿಕೊಳ್ಳುವ ಐಷಾರಾಮಿ ಕಾರುಗಳ ಮೇಲಿನ ಆಮದು ಸುಂಕವನ್ನು (Import Tariff) ಕೇಂದ್ರ ಸರ್ಕಾರವು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಲು ಮುಂದಾಗಿದೆ ಎಂದು ವರದಿಯಾಗಿದೆ.
ಪ್ರಸ್ತುತ ವಿದೇಶದಿಂದ ಆಮದು ಮಾಡಿಕೊಳ್ಳುವ ಸಂಪೂರ್ಣ ಸಿದ್ಧಪಡಿಸಿದ ಕಾರುಗಳ ಮೇಲೆ ಭಾರತವು ಶೇ. 70ರಿಂದ ಶೇ. 110ರವರೆಗೆ ಭಾರಿ ಸುಂಕವನ್ನು ವಿಧಿಸುತ್ತಿದೆ. ಮೂಲಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಈ ಸುಂಕವನ್ನು ನೇರವಾಗಿ ಶೇ. 40ಕ್ಕೆ ಇಳಿಸಲು ಸಮ್ಮತಿಸಿದೆ. ಇದು ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯ ಇತಿಹಾಸದಲ್ಲೇ ಅತಿದೊಡ್ಡ ಬದಲಾವಣೆ ಎಂದು ವಿಶ್ಲೇಷಿಸಲಾಗುತ್ತಿದೆ.
ಯಾವ ಕಾರುಗಳಿಗೆ ಅನ್ವಯ?
15,000 ಯುರೋಗಳಿಗಿಂತ (ಸುಮಾರು ₹14 ಲಕ್ಷಕ್ಕೂ ಹೆಚ್ಚು) ಹೆಚ್ಚಿನ ಬೆಲೆಯ ಕಾರುಗಳಿಗೆ ಈ ರಿಯಾಯಿತಿ ಸಿಗಲಿದೆ.
ವೋಕ್ಸ್ವ್ಯಾಗನ್ (Volkswagen), ಮರ್ಸಿಡಿಸ್-ಬೆಂಜ್ (Mercedes-Benz) ಮತ್ತು ಬಿಎಂಡಬ್ಲ್ಯು (BMW) ಅಂತಹ ಕಂಪನಿಗಳ ಕಾರುಗಳು ಅಗ್ಗವಾಗಲಿವೆ. ಆರಂಭದಲ್ಲಿ ಶೇ. 40ಕ್ಕೆ ಇಳಿಕೆಯಾಗುವ ಈ ಸುಂಕವು, ಮುಂಬರುವ ವರ್ಷಗಳಲ್ಲಿ ಹಂತ ಹಂತವಾಗಿ ಶೇ. 10ಕ್ಕೆ ಇಳಿಕೆಯಾಗುವ ಸಾಧ್ಯತೆಯಿದೆ. ಆದರೆ, ಮಾತುಕತೆಗಳು ಗೌಪ್ಯವಾಗಿರುವುದರಿಂದ ಮತ್ತು ಕೊನೆಯ ಕ್ಷಣದ ಬದಲಾವಣೆಗಳಿಗೆ ಒಳಪಟ್ಟಿರಬಹುದು ಎಂದು ಮೂಲಗಳು ತಿಳಿಸಿವೆ. ಭಾರತದ ವಾಣಿಜ್ಯ ಸಚಿವಾಲಯ ಮತ್ತು ಯುರೋಪಿಯನ್ ಆಯೋಗವು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿವೆ.
‘ಒಪ್ಪಂದಗಳ ಮಹಾತಾಯಿ’ (Mother of All Deals)
ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಈ ಒಪ್ಪಂದವನ್ನು ಆರ್ಥಿಕ ತಜ್ಞರು “ಒಪ್ಪಂದಗಳ ಮಹಾತಾಯಿ” ಎಂದು ಕರೆಯುತ್ತಿದ್ದಾರೆ. ಮಂಗಳವಾರ ( ಜ.28) ಈ ಕುರಿತು ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ. ಇದರಿಂದ ಭಾರತದ ಜವಳಿ ಮತ್ತು ಆಭರಣ ರಫ್ತುದಾರರಿಗೂ ಭಾರಿ ಅನುಕೂಲವಾಗಲಿದ್ದು, ಅಮೆರಿಕ ವಿಧಿಸಿರುವ ಸುಂಕದ ಹೊಡೆತದಿಂದ ಪಾರಾಗಲು ಸಹಾಯವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸ್ಥಳೀಯ ಕಂಪನಿಗಳಿಗೆ ರಕ್ಷಣೆ
ದೇಶೀಯ ಕಾರು ತಯಾರಿಕಾ ಕಂಪನಿಗಳಾದ ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾ ಅವರ ಹಿತಾಸಕ್ತಿ ಕಾಯಲು ಸರ್ಕಾರ ಮುಂದಾಗಿದೆ. ವರದಿಗಳ ಪ್ರಕಾರ, ಹೀಗಾಗಿ, ಎಲೆಕ್ಟ್ರಿಕ್ ವಾಹನಗಳ (EV) ಮೇಲಿನ ಆಮದು ಸುಂಕವನ್ನು ಮುಂದಿನ 5 ವರ್ಷಗಳವರೆಗೆ ಇಳಿಕೆ ಮಾಡದಿರಲು ನಿರ್ಧರಿಸಲಾಗಿದೆ. 5 ವರ್ಷಗಳ ನಂತರವಷ್ಟೇ ಇವಿ ಕಾರುಗಳ ಮೇಲಿನ ಸುಂಕ ಕಡಿತದ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ.
ಯೂರೋಪಿಯನ್ ಕಂಪನಿಗಳಿಗೆ ವರ
ಪ್ರಸ್ತುತ ಭಾರತದ ಕಾರು ಮಾರುಕಟ್ಟೆಯಲ್ಲಿ ಯುರೋಪಿಯನ್ ಕಂಪನಿಗಳ ಪಾಲು ಕೇವಲ ಶೇ. 4ಕ್ಕಿಂತ ಕಡಿಮೆ ಇದೆ. ಸುಂಕ ಕಡಿತದಿಂದಾಗಿ ಈ ಕಂಪನಿಗಳು ತಮ್ಮ ಹೊಸ ಮಾಡೆಲ್ಗಳನ್ನು ಕಡಿಮೆ ಬೆಲೆಗೆ ಭಾರತಕ್ಕೆ ತರಲು ಮತ್ತು ಸ್ಥಳೀಯ ಮಾರುಕಟ್ಟೆಯನ್ನು ವಿಸ್ತರಿಸಲು ಸಾಧ್ಯವಾಗಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ