ಕರ್ನೂಲ್ : ಸಂಚು ರೂಪಿಸಿ ತನ್ನ ಮಾಜಿ ಪ್ರಿಯಕರನ ಪತ್ನಿಯಾಗಿರುವ ವೈದ್ಯೆಯೊಬ್ಬರಿಗೆ ಎಚ್ಐವಿ (HIV) ಸೋಂಕಿತ ಇಂಜೆಕ್ಷನ್ ನೀಡಿದ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಕರ್ನೂಲ್ನಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ ನಾಲ್ವರನ್ನು ಜನವರಿ 24 ರಂದು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕರ್ನೂಲ್ ನಿವಾಸಿ ಬಿ. ಬೋಯ ವಸುಂಧರಾ (34), ಅದೋನಿಯ ಖಾಸಗಿ ಆಸ್ಪತ್ರೆಯ ನರ್ಸ್ ಕೊಂಗೆ ಜ್ಯೋತಿ (40) ಮತ್ತು ಆಕೆಯ ಇಬ್ಬರು ಮಕ್ಕಳು ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಮುಖ್ಯ ಆರೋಪಿ ವಸುಂಧರಾ ತನ್ನ ಮಾಜಿ ಪ್ರಿಯಕರ ವೈದ್ಯೆಯನ್ನು ಮದುವೆಯಾದುದನ್ನು ಸಹಿಸದೆ, ಆ ದಂಪತಿಯನ್ನು ಬೇರ್ಪಡಿಸಲು ಈ ಭೀಕರ ಸಂಚು ರೂಪಿಸಿದ್ದಳು.
ಇದಕ್ಕಾಗಿ ಆಕೆ ನರ್ಸ್ ಜ್ಯೋತಿಯ ಸಹಾಯದಿಂದ ಸರ್ಕಾರಿ ಆಸ್ಪತ್ರೆಯಲ್ಲಿದ್ದ ಎಚ್ಐವಿ ಸೋಂಕಿತ ರೋಗಿಗಳ ರಕ್ತದ ಮಾದರಿಯನ್ನು “ಸಂಶೋಧನೆಯ ಉದ್ದೇಶ” ಎಂದು ಸುಳ್ಳು ಹೇಳಿ ಪಡೆದುಕೊಂಡಿದ್ದಳು. ಈ ರಕ್ತವನ್ನು ಫ್ರಿಡ್ಜ್ನಲ್ಲಿ ಸಂಗ್ರಹಿಸಿಡಲಾಗಿತ್ತು.
ಜನವರಿ 9 ರಂದು ಮಧ್ಯಾಹ್ನ ಕರ್ನೂಲ್ನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರುವ ಸಂತ್ರಸ್ತೆ ಕೆಲಸ ಮುಗಿಸಿ ಸ್ಕೂಟರ್ನಲ್ಲಿ ಮನೆಗೆ ಮರಳುತ್ತಿದ್ದರು. ಈ ವೇಳೆ ವಿನಾಯಕ ಘಾಟ್ ಬಳಿ ಆರೋಪಿಗಳು ಉದ್ದೇಶಪೂರ್ವಕವಾಗಿ ಬೈಕ್ನಿಂದ ಸಂತ್ರಸ್ತೆಯ ಸ್ಕೂಟರ್ಗೆ ಡಿಕ್ಕಿ ಹೊಡೆದಿದ್ದಾರೆ.
ಅಪಘಾತದಲ್ಲಿ ಗಾಯಗೊಂಡು ಬಿದ್ದಿದ್ದ ವೈದ್ಯೆಗೆ ಸಹಾಯ ಮಾಡುವ ನೆಪದಲ್ಲಿ ಬಂದ ವಸುಂಧರಾ ಮತ್ತು ತಂಡ, ಆಕೆಯನ್ನು ಆಟೋರಿಕ್ಷಾಕ್ಕೆ ಹತ್ತಿಸುವ ಸೋಗಿನಲ್ಲಿ ಎಚ್ಐವಿ ಸೋಂಕಿತ ರಕ್ತವಿದ್ದ ಇಂಜೆಕ್ಷನ್ ಚುಚ್ಚಿದ್ದಾರೆ. ವೈದ್ಯೆ ಕಿರುಚಿಕೊಂಡಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಸಂತ್ರಸ್ತೆಯ ಪತಿ (ಇವರೂ ಸಹ ವೈದ್ಯರು) ನೀಡಿದ ದೂರಿನ ಮೇರೆಗೆ ಕರ್ನೂಲ್ ಪೊಲೀಸರು ತನಿಖೆ ಕೈಗೊಂಡು ಜನವರಿ 24 ರಂದು ಆರೋಪಿಗಳನ್ನು ಬಂಧಿಸಿದ್ದಾರೆ. ಇವರ ಮೇಲೆ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ