ಬಾರಾಮತಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ (NCP) ಅಧ್ಯಕ್ಷ ಅಜಿತ್ ಪವಾರ್ (66) ಅವರು ಬುಧವಾರ (ಜನವರಿ 28) ಬೆಳಿಗ್ಗೆ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ. ಬಾರಾಮತಿ ವಿಮಾನ ನಿಲ್ದಾಣದ ರನ್‌ವೇ ಸಮೀಪವೇ ಲಿಯರ್‌ಜೆಟ್ 45 ಎಂಬ ವಿಮಾನ ಪತನಗೊಂಡ ಮತ್ತೊಂದು ವೀಡಿಯೊ ಹೊರಹೊಮ್ಮಿದೆ.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಜನರನ್ನು ಹೊತ್ತೊಯ್ಯುತ್ತಿದ್ದ ಲಿಯರ್‌ಜೆಟ್ 45 ವಿಮಾನವು ಬುಧವಾರ ಬೆಳಿಗ್ಗೆ ಬಾರಾಮತಿ ವಿಮಾನ ನಿಲ್ದಾಣದ ರನ್‌ವೇ ಬಳಿ ಅಪಘಾತಕ್ಕೀಡಾಗುವ ಮೊದಲು ಎಡಕ್ಕೆ ಓರೆಯಾಗಿ ಹಾರಿದ್ದನ್ನು ತೋರಿಸುವ ಹೊಸ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿವೆ. ಇದು ತಾಂತ್ರಿಕ ದೋಷವೋ ಅಥವಾ ಪೈಲಟ್‌ಗಳ ನಿಯಂತ್ರಣ ತಪ್ಪಿದ್ದೋ ಎಂಬುದು ತನಿಖೆಯಿಂದ ತಿಳಿಯಬೇಕಿದೆ.
ವೀಡಿಯೊವು ವಿಮಾನವು ವೇಗವಾಗಿ ಇಳಿಯುತ್ತಾ ಎಡಕ್ಕೆ ತೀವ್ರವಾಗಿ ತಿರುಗುತ್ತ ಬೀಳುವುದನ್ನು ತೋರಿಸಿದೆ. ವಿಮಾನವು ಇಳಿಯುವ ಮೊದಲು ಹೀಗೆ ಮಾಡುವುದು ಅಸಾಮಾನ್ಯ ಎಂದು ವಾಯುಯಾನ ತಜ್ಞರು ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ಅವರನ್ನು ಉಲ್ಲೇಖಿಸಿದೆ. ಇದು ತಾಂತ್ರಿಕ ದೋಷದ ಪರಿಣಾಮವಾಗಿರಬಹುದು ಅಥವಾ ಪೈಲಟ್‌ಗಳು ವಿಮಾನದಲ್ಲಿನ ಕೆಲವು ರೀತಿಯ ಒತ್ತಡಗಳನ್ನು ಸರಿದೂಗಿಸಲು ಪ್ರಯತ್ನಿಸುತ್ತಿರಬಹುದು ಎಂದು ಅವರು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ಮುಂಬೈನಿಂದ ಬಾರಾಮತಿಗೆ ಪ್ರಯಾಣಿಸುತ್ತಿದ್ದ ವಿಎಸ್‌ಆರ್ ವೆಂಚರ್ಸ್ ಸಂಸ್ಥೆಗೆ ಸೇರಿದ ಈ ವಿಮಾನದಲ್ಲಿ ಅಜಿತ್ ಪವಾರ್ ಸೇರಿ ಒಟ್ಟು ಐವರು ಪ್ರಯಾಣಿಸುತ್ತಿದ್ದರು.
ಬುಧವಾರ ಬೆಳಿಗ್ಗೆ 8:34ರ ಸುಮಾರಿಗೆ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದಾಗ ರನ್‌ವೇ ಕಾಣಿಸದ ಕಾರಣ ಪೈಲಟ್‌ಗಳು ‘ಗೋ-ಅರೌಂಡ್’ (ಮತ್ತೆ ಹಾರಾಟ) ಮಾಡಿದ್ದರು. ಆದರೆ, 8:44ಕ್ಕೆ ಎರಡನೇ ಬಾರಿ ಲ್ಯಾಂಡಿಂಗ್‌ಗೆ ಯತ್ನಿಸಿದಾಗ ವಿಮಾನವು ಹಠಾತ್ತನೆ ಎಡಭಾಗಕ್ಕೆ ವಾಲಿ, ರನ್‌ವೇ ಸಮೀಪದ ಮುಕ್ತ ಪ್ರದೇಶದಲ್ಲಿ ಅಪ್ಪಳಿಸಿದೆ.
ಈ ದುರಂತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್, ಅಂಗರಕ್ಷಕ ವಿದಿಪ್ ಜಾಧವ್, ಪೈಲಟ್ ಕ್ಯಾಪ್ಟನ್ ಸುಮಿತ್ ಕಪೂರ್, ಫಸ್ಟ್ ಆಫೀಸರ್ ಶಾಂಭವಿ ಪಾಠಕ್ ಮತ್ತು ಫ್ಲೈಟ್ ಅಟೆಂಡೆಂಟ್ ಪಿಂಕಿ ಮಾಲಿ ಮೃತಪಟ್ಟಿದ್ದಾರೆ.
ಅಜಿತ್ ಪವಾರ್ ಅವರ ಅಂತ್ಯಕ್ರಿಯೆಯು ಗುರುವಾರ ಬೆಳಿಗ್ಗೆ 11 ಗಂಟೆಗೆ ಬಾರಾಮತಿಯಲ್ಲಿ ನಡೆಯಲಿದ್ದು, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಭಾಗವಹಿಸುವ ಸಾಧ್ಯತೆಯಿದೆ.


ನಿಮ್ಮ ಕಾಮೆಂಟ್ ಬರೆಯಿರಿ