
ನವದೆಹಲಿ: ವಿಶ್ವವಿದ್ಯಾಲಯಗಳ ವ್ಯಾಪ್ತಿಯ ಕಾಲೇಜು ಕ್ಯಾಂಪಸ್ಗಳಲ್ಲಿ ಜಾತಿ ಆಧಾರಿತ ತಾರತಮ್ಯ ತಡೆಯುವುದಕ್ಕಾಗಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಹೊರಡಿಸಿರುವ ಹೊಸ ನಿಯಮಾವಳಿಗಳಿಗೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ.
ನಿಯಮಾವಳಿಗಳು ಅಸ್ಪಷ್ಟವಾಗಿದ್ದು, ದುರುಪಯೋಗ ಸಾಧ್ಯತೆ ಇರುವ ಕಾರಣ ನೀಡಿ ಹೊಸ ನಿಯಮಗಳಿಗೆ ತಡೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ ನೇತೃತ್ವದ ಪೀಠವು ನಿಯಮಕ್ಕೆ ಸ್ಪಷ್ಟೀಕರಣದ ಅಗತ್ಯವಿದೆ ಎಂದು ಹೇಳಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಜನವರಿ 13ರಿಂದ ಜಾರಿಗೆ ಬಂದಿರುವ ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಉತ್ತೇಜನ) ನಿಯಮಾವಳಿ- 2026 ನಿಯಮಾವಳಿ ದೇಶದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುತ್ತಿತ್ತು. ಯುಜಿಸಿ ನಿಯಮಾವಳಿಗಳು ಮುಖ್ಯವಾಗಿ ಎಸ್ಸಿ/ಎಸ್ಟಿ. ಒಬಿಸಿ, ಆರ್ಥಿಕವಾಗಿ ಹಿಂದುಳಿದವರು ಮತ್ತು ಅಂಗವೈಕಲ್ಯ ಹೊಂದಿರುವವರ ರಕ್ಷಣೆಗೆ ನೀಡುತ್ತಿದ್ದು, ಉಳಿದ ವರ್ಗಗಳಿಗೆ ಸಾಂಸ್ಥಿಕ ರಕ್ಷಣೆ ನೀಡುತ್ತಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ. ಸುಪ್ರೀಂ ಕೋರ್ಟ್ ಈ ನಿಯಮಾವಳಿಗೆ ಗುರುವಾರ ತಾತ್ಕಾಲಿಕ ತಡೆ ನೀಡಿದೆ.
“ಮೇಲ್ನೋಟಕ್ಕೆ, ನಿಯಮಗಳಲ್ಲಿರುವ ಭಾಷೆ ಅಸ್ಪಷ್ಟವಾಗಿದೆ. ಅದನ್ನು ದುರುಪಯೋಗಪಡಿಸಿಕೊಳ್ಳದಂತೆ ಭಾಷೆಯನ್ನು ತಿದ್ದುಪಡಿ ಮಾಡಲು ತಜ್ಞರು ಪರಿಶೀಲಿಸಬೇಕಾಗಿದೆ,” ಎಂದು ನ್ಯಾಯಾಲಯ ತಿಳಿಸಿದೆ. ಈ ಸಂಬಂಧ ಯುಜಿಸಿ ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ ನ್ಯಾಯಾಲಯ, ನಿಯಮಗಳನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿ ಇರಿಸಲು ಆದೇಶಿಸಿತು.
ನ್ಯಾಯಾಲಯ ಹಸ್ತಕ್ಷೇಪ ಮಾಡದಿದ್ದರೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಹಾಗೂ ಇದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ನುಡಿಯಿತು.
“ ಇದು ಗಂಭೀರ ಪರಿಣಾಮ ಬೀರುವ ಹಾಗೂ ಸಮಾಜವನ್ನು ವಿಭಜಿಸುವ ಸಾಧ್ಯತೆ ಇರುವುದರಿಂದ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕಾದ ಅಗತ್ಯವಿದೆ ಎಂದು ಪೀಠ ಹೇಳಿತು. ಮುಂದಿನ ವಿಚಾರಣೆಯನ್ನು ಕೋರ್ಟ್ ಮಾರ್ಚ್ 19 ಕ್ಕೆ ನಿಗದಿಪಡಿಸಿತು.



ನಿಮ್ಮ ಕಾಮೆಂಟ್ ಬರೆಯಿರಿ