ಮುಂಬೈ: ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಕಾಲಿಕ ನಿಧನವು ಮಹಾರಾಷ್ಟ್ರ ರಾಜಕಾರಣದಲ್ಲಿ, ಅದರಲ್ಲಿಯೂ ಎನ್ಸಿಪಿ ಪಕ್ಷದಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (NCP) ಭವಿಷ್ಯದ ಬಗ್ಗೆ ಅನಿಶ್ಚಿತತೆ ಮೂಡಿದ್ದು, ಪಕ್ಷವನ್ನು ಮುನ್ನಡೆಸಲು ಅಜಿತ್ ಪವಾರ್ ಪತ್ನಿ, ಸಂಸದೆ ಸುನೇತ್ರಾ ಪವಾರ್ ಅವರನ್ನು ರಾಜ್ಯ ರಾಜಕಾರಣಕ್ಕೆ ಕರೆತರಲು ಹಿರಿಯ ನಾಯಕರು ಮುಂದಾಗಿದ್ದಾರೆ.
ಗುರುವಾರ ನಡೆದ ಅಜಿತ್ ಪವಾರ್ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಹಾಗೂ ಎನ್ಸಿಪಿಯ ಹಿರಿಯ ನಾಯಕ ನರಹರಿ ಜಿರವಾಲ್, “ಜನರು ಈಗ ‘ವಹಿನಿ’ (ಸುನೇತ್ರಾ ಪವಾರ್) ಅವರು ರಾಜ್ಯ ರಾಜಕಾರಣ ಮತ್ತು ಆಡಳಿತದಲ್ಲಿ ಪ್ರವೇಶಿಸಬೇಕೆಂದು ಬಯಸುತ್ತಿದ್ದಾರೆ. ಈ ಬಗ್ಗೆ ನಾವು ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಸುನೇತ್ರಾ ಪವಾರ್ ಅವರು ರಾಜ್ಯಸಭಾ ಸದಸ್ಯರಾಗಿದ್ದಾರೆ. ಮೂಲಗಳ ಪ್ರಕಾರ, ಅಜಿತ್ ಪವಾರ್ ಪ್ರತಿನಿಧಿಸುತ್ತಿದ್ದ ಭದ್ರಕೋಟೆ ಬಾರಾಮತಿ ವಿಧಾನಸಭಾ ಕ್ಷೇತ್ರದಿಂದಲೇ ಅವರು ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಪಕ್ಷದ ನಾಯಕತ್ವಕ್ಕಾಗಿ ಹಿರಿಯ ನಾಯಕರ ಕಸರತ್ತು
ಪಕ್ಷದ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹಿರಿಯ ನಾಯಕರಾದ ಪ್ರಫುಲ್ ಪಟೇಲ್, ಛಗನ್ ಭುಜಬಲ್, ಧನಂಜಯ ಮುಂಡೆ ಮತ್ತು ಸುನಿಲ ತಟ್ಕರೆ ಅವರಂತಹ ದಿಗ್ಗಜ ನಾಯಕರು ಈಗಾಗಲೇ ಸುನೇತ್ರಾ ಪವಾರ್ ಅವರನ್ನು ಭೇಟಿ ಮಾಡಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುವಂತೆ ಅವರು ಒತ್ತಾಯಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಎನ್ಸಿಪಿ ಎರಡು ಬಣಗಳ ವಿಲೀನಕ್ಕೆ ವೇದಿಕೆ ಸಿದ್ಧ?
2023ರ ಜುಲೈನಲ್ಲಿ ಅಜಿತ್ ಪವಾರ್ ಅವರು ಶರದ್ ಪವಾರ್ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿ ಎನ್ಡಿಎ ಮೈತ್ರಿಕೂಟ ಸೇರ್ಪಡೆಯಾದಾಗ ಪಕ್ಷ ಎರಡು ಹೋಳಾಗಿತ್ತು. ಆದರೆ ಈಗ ಅಜಿತ್ ಪವಾರ್ ಅವರ ಸಾವಿನ ನಂತರ, ಎರಡೂ ಬಣಗಳು ಮತ್ತೆ ಒಂದಾಗುವ (Merger) ಬಲವಾದ ಮುನ್ಸೂಚನೆಗಳು ಸಿಗುತ್ತಿವೆ.
ವಿಲೀನದ ಬಗ್ಗೆ ಜಿರವಾಲ್ ನೀಡಿದ ಹೇಳಿಕೆ ಕುತೂಹಲ ಮೂಡಿಸಿದೆ.”ಎರಡೂ ಬಣಗಳು ಈಗಾಗಲೇ ಮಾನಸಿಕವಾಗಿ ಒಂದಾಗಿವೆ. ಚದುರಿ ಹೋಗುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬುದು ಎಲ್ಲರಿಗೂ ಮನವರಿಕೆಯಾಗಿದೆ. ಒಗ್ಗಟ್ಟಿನಿಂದ ಇರುವುದೇ ಇಂದಿನ ಅಗತ್ಯ ಎಂದು ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಪುಣೆ ಮತ್ತು ಪಿಂಪ್ರಿ-ಚಿಂಚವಾಡ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಎರಡೂ ಬಣಗಳು ಒಟ್ಟಾಗಿ ಸ್ಪರ್ಧಿಸಿದ್ದು ಈ ವಾದಕ್ಕೆ ಪುಷ್ಟಿ ನೀಡುತ್ತಿದೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಹಾಯುತಿ ಸಂಖ್ಯಾಬಲ
ಪ್ರಸ್ತುತ ಮಹಾರಾಷ್ಟ್ರದ ‘ಮಹಾಯುತಿ’ ಮೈತ್ರಿಕೂಟವು ಸುಭದ್ರವಾಗಿದ್ದು, 288 ಸದಸ್ಯರ ವಿಧಾನಸಭೆಯಲ್ಲಿ ಒಟ್ಟು 232 ಶಾಸಕರನ್ನು ಹೊಂದಿದೆ. ಅದರಲ್ಲಿ ಬಿಜೆಪಿ 132, ಶಿವಸೇನೆ (ಏಕನಾಥ ಶಿಂಧೆ ಬಣ) 57 ಹಾಗೂ ಎನ್ಸಿಪಿ (ಅಜಿತ್ ಪವಾರ್ ಬಣ) 41 ಸ್ಥಾನಗಳನ್ನು ಹೊಂದಿದೆ.


ನಿಮ್ಮ ಕಾಮೆಂಟ್ ಬರೆಯಿರಿ