
ಮುಂಬೈ: ಎನ್‌ಸಿಪಿ (NCP) ನಾಯಕ ಅಜಿತ್ ಪವಾರ್ ಅವರ ಅಕಾಲಿಕ ನಿಧನದ ನಂತರ ತೆರವಾಗಿದ್ದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅವರ ಪತ್ನಿ ಹಾಗೂ ರಾಜ್ಯಸಭಾ ಸಂಸದೆ ಸುನೇತ್ರಾ ಪವಾರ್ ಅವರು ಶನಿವಾರ (ಜನವರಿ 31) ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಶನಿವಾರ ಸಂಜೆ ಸುನೇತ್ರಾ ಪವಾರ್ ಅವರು ಪ್ರಮಾಣ ವಚನ ಸ್ವೀಕರಿಸಿದರೆ ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶನಿವಾರ ಮಧ್ಯಾಹ್ನ 2 ಗಂಟೆಗೆ ಮುಂಬೈನ ವಿಧಾನ ಭವನದಲ್ಲಿ ಎನ್‌ಸಿಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಸುನೇತ್ರಾ ಅವರ ಹೆಸರನ್ನು ಅಧಿಕೃತವಾಗಿ ಅಂತಿಮಗೊಳಿಸಲಾಗುತ್ತದೆ ಎನ್ನಲಾಗಿದೆ.

ಹಿರಿಯ ನಾಯಕ ಛಗನ್ ಭುಜಬಲ್ ಮತ್ತು ಪ್ರಫುಲ್ ಪಟೇಲ್ ಅವರು ಸುನೇತ್ರಾ ಪವಾರ್ ಅವರ ಆಯ್ಕೆಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಅಜಿತ್ ಪವಾರ್ ಅವರ ನಿಧನದಿಂದ ತೆರವಾಗಿರುವ ಬಾರಾಮತಿ ವಿಧಾನಸಭಾ ಕ್ಷೇತ್ರಕ್ಕೆ ಮುಂದೆ ಉಪಚುನಾವಣೆ ನಡೆಯಲಿದೆ.
ಕಳೆದ ಬುಧವಾರ ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ (66) ಸೇರಿದಂತೆ ಐವರು ಮೃತಪಟ್ಟಿದ್ದರು. ಅಜಿತ್ ಪವಾರ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಬಾರಾಮತಿಯಲ್ಲಿ ನೆರವೇರಿಸಲಾಯಿತು. ಶುಕ್ರವಾರ ಅವರ ಚಿತಾಭಸ್ಮವನ್ನು ನೀರಾ ಮತ್ತು ಕರಾ ನದಿಗಳ ಸಂಗಮದಲ್ಲಿ ವಿಸರ್ಜಿಸಲಾಯಿತು.
.


ನಿಮ್ಮ ಕಾಮೆಂಟ್ ಬರೆಯಿರಿ