ಘಾಜಿಯಾಬಾದ್: “ಮಮ್ಮಿ, ಪಪ್ಪಾ, ಕ್ಷಮಿಸಿ” — ಇವು ಮಂಗಳವಾರ ತಡರಾತ್ರಿ ಘಾಜಿಯಾಬಾದ್‌ನ ತಮ್ಮ ವಸತಿ ಕಟ್ಟಡದ ಒಂಬತ್ತನೇ ಮಹಡಿಯಿಂದ ಜಿಗಿದು ಸಾವಿಗೀಡಾದ ಮೂವರು ಸಹೋದರಿಯರು ಬರೆದಿಟ್ಟ ಕೊನೆಯ ಮಾತುಗಳು.
ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಮೂವರು ಅಪ್ರಾಪ್ತ ಸಹೋದರಿಯರು ಅತಿಯಾದ ಆನ್‌ಲೈನ್ ಗೇಮಿಂಗ್ ಗೀಳಿಗೆ ಬಿದ್ದಿದ್ದಕ್ಕೆ ಪೋಷಕರ ಆಕ್ಷೇಪಿಸಿದ್ದಕ್ಕೆ ತಮ್ಮ ಅಪಾರ್ಟ್‌ಮೆಂಟ್ ಕಟ್ಟಡದ ಒಂಬತ್ತನೇ ಮಹಡಿಯಿಂದ ಹಾರಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ.
ಈ ಘಟನೆಯು ಬೆಳಗಿನ ಜಾವ 2:15ಕ್ಕೆ ‘ಭಾರತ್ ಸಿಟಿ’ ಪ್ರದೇಶದಲ್ಲಿ ಸಂಭವಿಸಿದೆ. ಮೃತರನ್ನು ನಿಶಿಕಾ (16), ಪ್ರಾಚಿ (14) ಮತ್ತು ಪಾಖಿ (12) ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (SP) ಅತುಲಕುಮಾರ ಸಿಂಗ್ ತಿಳಿಸಿದ್ದಾರೆ.
ಮೂವರು ಅಪ್ರಾಪ್ತ ಬಾಲಕಿಯರು ಕಟ್ಟಡದಿಂದ ಜಿಗಿದ ನಂತರ ಸ್ಥಳೀಯ ನಿವಾಸಿಗಳು ಜೋರಾದ ಶಬ್ದ ಕೇಳಿ ಎಚ್ಚರಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡವು ಪ್ರದೇಶವನ್ನು ಸುಪರ್ದಿಗೆ ಪಡೆದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದೆ.
ಪ್ರಾಥಮಿಕ ವಿಚಾರಣೆಯ ಪ್ರಕಾರ, ಈ ಸಹೋದರಿಯರು ಮೊಬೈಲ್ ಫೋನ್‌ಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು ಮತ್ತು ಕೊರಿಯನ್ ಮೂಲದ ಆನ್‌ಲೈನ್ ಟಾಸ್ಕ್-ಆಧಾರಿತ (ಕಾರ್ಯ-ಆಧಾರಿತ) ಗೇಮಿಂಗ್ ಅಪ್ಲಿಕೇಶನ್ ಗೀಳಿಗೆ ಬಿದ್ದಿದ್ದರು ಎಂದು ತಿಳಿದುಬಂದಿದೆ.
ಪೋಷಕರಿಗೆ ಬರೆದ ಪತ್ರ ಪತ್ತೆ
ಕುಟುಂಬದ ಫ್ಲಾಟ್ ಅನ್ನು ಶೋಧಿಸಿದಾಗ, ಪೊಲೀಸರಿಗೆ ಬಾಲಕಿಯರು ತಮ್ಮ ಪೋಷಕರನ್ನು ಉದ್ದೇಶಿಸಿ ಬರೆದ ಒಂದು ಪುಟದ ಪತ್ರ ಸಿಕ್ಕಿದೆ. ಅದರಲ್ಲಿ “ಮಮ್ಮಿ, ಪಪ್ಪಾ ಕ್ಷಮಿಸಿ” ಎಂದು ಬರೆಯಲಾಗಿದೆ. ತನಿಖೆಯ ಭಾಗವಾಗಿ ಈ ಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
“ಮೂವರು ಬಾಲಕಿಯರು ತಮ್ಮ ಕಟ್ಟಡದ ಒಂಬತ್ತನೇ ಮಹಡಿಯ ಬಾಲ್ಕನಿಯಿಂದ ಜಿಗಿದು ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ನಮಗೆ ಬಂತು. ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ವಶಕ್ಕೆ ಪಡೆದರು. ಸಂತ್ರಸ್ತರನ್ನು ಲೋನಿಯಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು,” ಎಂದು ಎಸ್‌ಪಿ ಸಿಂಗ್ ಹೇಳಿದ್ದಾರೆ.
ಈ ಮೂವರು ಸಹೋದರಿಯರು ಸ್ನಾನ ಮಾಡುವುದು, ತಿನ್ನುವುದು, ಶಾಲೆಗೆ ಹೋಗುವುದು, ಮಲಗುವುದು ಮತ್ತು ಇತರ ದಿನನಿತ್ಯದ ಚಟುವಟಿಕೆಗಳನ್ನು ಒಳಗೊಂಡಂತೆ ಎಲ್ಲವನ್ನೂ ಒಟ್ಟಿಗೆ ಮಾಡುತ್ತಿದ್ದರು ಎಂದು ವರದಿಯಾಗಿದೆ.
ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಅವರು ಆನ್‌ಲೈನ್ ಆಟಗಳಿಗೆ ವ್ಯಸನಿಯಾಗಿದ್ದರು ಮತ್ತು ಆನ್‌ಲೈನ್ ಟಾಸ್ಕ್ ಆಧಾರಿತ ‘ಕೊರಿಯನ್ ಲವ್ ಗೇಮ್’ ಆಡುತ್ತಿದ್ದರು ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಹುಡುಗಿಯರು ನಿಯಮಿತವಾಗಿ ಶಾಲೆಗೆ ಹೋಗುತ್ತಿರಲಿಲ್ಲ ಎನ್ನಲಾಗಿದೆ.
ಪೊಲೀಸರು ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸುತ್ತಿದ್ದಾರೆ ಮತ್ತು ಬಾಲಕಿಯರ ಮೊಬೈಲ್ ಫೋನ್‌ಗಳು ಹಾಗೂ ಅವರ ಡಿಜಿಟಲ್ ಚಟುವಟಿಕೆಗಳನ್ನು ಪರಿಶೀಲಿಸುತ್ತಿದ್ದಾರೆ. ಆನ್‌ಲೈನ್ ಸಂವಹನಗಳು ಮತ್ತು ಅಪ್ಲಿಕೇಶನ್ ಬಳಕೆಯ ಇತಿಹಾಸವನ್ನು ವಿಶ್ಲೇಷಿಸಲು ಸೈಬರ್ ತಜ್ಞರ ನೆರವು ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ