ಆಭರಣ ಅಂಗಡಿಗೆ ಬಂದು ಚಿನ್ನದ ಸರ ಕಚ್ಚಿಕೊಂಡು ಹೋದ ಪಾರಿವಾಳ…!

ನಾಗೌರ್ (ರಾಜಸ್ಥಾನ): ಇಲ್ಲಿನ ದೇಗಾನಾ ಪಟ್ಟಣದ ಚಿನಿವಾರ ಪೇಟೆಯಲ್ಲಿ ಗುರುವಾರ ಅತ್ಯಂತ ವಿಲಕ್ಷಣ ಘಟನೆಯೊಂದು ನಡೆದಿದೆ. ಸುಮಾರು 1 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಪಾರಿವಾಳವೊಂದು ತನ್ನ ಕೊಕ್ಕಿನಲ್ಲಿ ಕಚ್ಚಿಕೊಂಡು ಹಾರಿಹೋದ ಘಟನೆ ನಡೆದಿದೆ.
ದೇಗಾನಾ ಬುಲಿಯನ್ ಮಾರ್ಕೆಟ್‌ನಲ್ಲಿರುವ ಚಿನ್ನಾಭರಣ ಮಳಿಗೆಯೊಂದರ ಮೇಲಿನ ಮಹಡಿಯಲ್ಲಿ ಕುಶಲಕರ್ಮಿಗಳು ಚಿನ್ನದ ಆಭರಣಗಳನ್ನು ತಯಾರಿಸುವ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಅನಿರೀಕ್ಷಿತವಾಗಿ ಅಂಗಡಿಯೊಳಗೆ ನುಗ್ಗಿದ ಪಾರಿವಾಳವೊಂದು, ಅಲ್ಲಿಯೇ ಇದ್ದ ಹೊಸದಾಗಿ ವಿನ್ಯಾಸಗೊಳಿಸಲಾದ ಚಿನ್ನದ ಸರವನ್ನು ತನ್ನ ಕೊಕ್ಕಿನಿಂದ ಕಚ್ಚಿಕೊಂಡು ಕ್ಷಣಾರ್ಧದಲ್ಲಿ ಹಾರಿಹೋಗಿದೆ.
ಬೆಲೆಬಾಳುವ ಆಭರಣದೊಂದಿಗೆ ಹಕ್ಕಿ ಹಾರುವುದನ್ನು ಕಂಡ ಮಾಲೀಕರು ಮತ್ತು ಕೆಲಸಗಾರರು ಒಂದು ಕ್ಷಣ ಸ್ತಬ್ದರಾದರು. ಈ ಸುದ್ದಿ ಮಾರುಕಟ್ಟೆಯಲ್ಲಿ ಹರಡುತ್ತಿದ್ದಂತೆ ವ್ಯಾಪಾರಿಗಳ ನಡುವೆ ಗಲಿಬಿಲಿ ಉಂಟಾಯಿತು.

ಹಲವು ನಿಮಿಷಗಳ ಹೈಡ್ರಾಮಾ
ಅಂಗಡಿಯಿಂದ ಹೊರಹಾರಿ ಹೋದ ಪಾರಿವಾಳವು ಮಾರುಕಟ್ಟೆಯ ಕಟ್ಟಡದ ಮೇಲ್ಛಾವಣಿಯ ಮೇಲೆ ಹೋಗಿ ಕುಳಿತುಕೊಂಡಿತು. ಅಲ್ಲಿ ಸೇರಿದ್ದ ಜನರು ಮತ್ತು ವ್ಯಾಪಾರಿಗಳು ಸರವು ಎಲ್ಲಿಯಾದರೂ ಬಿದ್ದು ಹೋಗಬಹುದೇ ಅಥವಾ ಪಾರಿವಾಳ ದೂರ ಹಾರಿ ಹೋಗಬಹುದೇ ಎಂಬ ಆತಂಕದಿಂದ ಆ ಹಕ್ಕಿಯ ಚಲನವಲನವನ್ನೇ ಸೂಕ್ಷ್ಮವಾಗಿ ಗಮನಿಸುತ್ತಿದ್ದರು.
ಅದೃಷ್ಟವಶಾತ್, ಕೆಲವು ನಿಮಿಷಗಳ ನಂತರ ಪಾರಿವಾಳದ ಕೊಕ್ಕಿನಿಂದ ಚಿನ್ನದ ಸರವು ಜಾರಿ ಛಾವಣಿಯ ಮೇಲೆ ಬಿತ್ತು. ಕೂಡಲೇ ಅಂಗಡಿಯ ಸಿಬ್ಬಂದಿ ಅಲ್ಲಿಗೆ ಧಾವಿಸಿ ಆಭರಣವನ್ನು ಸುರಕ್ಷಿತವಾಗಿ ವಶಪಡಿಸಿಕೊಂಡರು.
ಪ್ರಸ್ತುತ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಸಂದರ್ಭದಲ್ಲಿ ನಡೆದ ಈ ಘಟನೆಯು ಸ್ಥಳೀಯ ವ್ಯಾಪಾರಿಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಯಾವುದೇ ಹಾನಿಯಾಗದಂತೆ ಸರವು ಮರಳಿ ಸಿಕ್ಕಿರುವುದು ಮಾಲೀಕರಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ.

ಪ್ರಮುಖ ಸುದ್ದಿ :-   ವಿಡಿಯೊ | ಹಾಡಹಗಲೇ ಶಸ್ತ್ರಸಜ್ಜಿತರಿಂದ ಚಿನ್ನಾಭರಣ ಅಂಗಡಿ ದರೋಡೆ ; ಚಿನ್ನ-ನಗದು ಲೂಟಿ, ಹಲವು ಸುತ್ತು ಗುಂಡು ಹಾರಿಸಿ ಪರಾರಿ...!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement