ಜೂಜಾಟದ ವ್ಯಸನದಿಂದ ಖತರ್ನಾಕ್‌ ಸರಗಳ್ಳನಾಗಿ ಬದಲಾದ ಉದ್ಯಮಿಯ ಬಂಧನಕ್ಕೆ ಶೂಗಳು ಕಾರಣವಾಗಿದ್ದು ಹೇಗೆ…?

ಮುಂಬೈ: ಮುಂಬೈ ಮತ್ತು ನವಿ ಮುಂಬೈ ವ್ಯಾಪ್ತಿಯಲ್ಲಿ ಸರಣಿ ಸರಗಳ್ಳತನದ ಮೂಲಕ ಭೀತಿ ಸೃಷ್ಟಿಸಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ವೇಷ ಮರೆಸುವಲ್ಲಿ ನಿಪುಣನಾಗಿದ್ದ ಈ ಆರೋಪಿಯನ್ನು ಪತ್ತೆ ಹಚ್ಚಲು ಆತ ಧರಿಸುತ್ತಿದ್ದ ಒಂದೇ ಜೋಡಿ ‘ಶೂ’ಗಳು ಪ್ರಮುಖ ಸುಳಿವು ನೀಡಿದ್ದು ಕಳ್ಳನನ್ನು ಪತ್ತೆ ಹಚ್ಚಲು ಸಹಾಯ ಮಾಡಿದೆ.
ಬಂಧಿತ ಆರೋಪಿ ಸಿಯಾನ್ ನಿವಾಸಿ ಮೋಹನ್ ಕೋಕಟೆ, ಪ್ರತಿ ಬಾರಿ ಅಪರಾಧ ಎಸಗಿದ ನಂತರ ಪೊಲೀಸರ ಕಣ್ಣಿಗೆ ಮಣ್ಣೆರಚಲು ತನ್ನ ಉಡುಪುಗಳನ್ನು ಬದಲಾಯಿಸುತ್ತಿದ್ದ ಮತ್ತು ಹೆಲ್ಮೆಟ್ ಧರಿಸುತ್ತಿದ್ದ. ತನಿಖೆಯ ವೇಳೆ ಪೊಲೀಸರು ಸುಮಾರು 80ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮುಖ ಸರಿಯಾಗಿ ಕಾಣದಿದ್ದರೂ ಎಲ್ಲಾ ಕಡೆ ಆರೋಪಿಯು ಒಂದೇ ರೀತಿಯ ಶೂ ಧರಿಸಿರುವುದು ಕಂಡುಬಂದಿದೆ. ಈ ಸಣ್ಣ ಸುಳಿವನ್ನು ಬೆನ್ನತ್ತಿದ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಶ್ರೀಮಂತ ಕುಟುಂಬದ ಹಿನ್ನೆಲೆ, ಜೂಜಿನ ವ್ಯಸನ
ಆರೋಪಿ ಕೋಕಟೆ ಉತ್ತಮ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಈತ ತಂದೆ ಜೊತೆ ಗಾರ್ಡನಿಂಗ್ ಉದ್ಯಮ ನಡೆಸುತ್ತಿದ್ದ. ಈತನ ಕುಟುಂಬದ ಸದಸ್ಯರೆಲ್ಲರೂ ಸುಶಿಕ್ಷಿತರಾಗಿದ್ದು, ಆರ್ಥಿಕವಾಗಿ ಸದೃಢರಾಗಿದ್ದಾರೆ. ಈತನ ಪುತ್ರರು ಉನ್ನತ ಹುದ್ದೆಯಲ್ಲಿದ್ದಾರೆ. ಈತನ ಕುಟುಂಬದವರು ವಿದೇಶದಲ್ಲಿದ್ದಾರೆ.  ಆದರೂ, ಈತ ಆನ್‌ಲೈನ್ ಕ್ಯಾಸಿನೊ ಮತ್ತು ಜೂಜಿನ ಚಟಕ್ಕೆ ನಂತರ ಈತ ಭಾರಿ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ಮತ್ತೆ ಅಪರಾಧ ಲೋಕಕ್ಕೆ ಇಳಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಗೆ ತಿರುವು ನೀಡಿದ ಸಿಯಾನ್ ಘಟನೆ
ಜನವರಿ 25ರಂದು ಸಿಯಾನ್‌ನಲ್ಲಿ ನಡೆದ ಸರಗಳ್ಳತನ ಪ್ರಕರಣ ಈತನ ಪತ್ತೆಗೆ ನಾಂದಿ ಹಾಡಿತು. ಕಳ್ಳತನವಾದ ಸರ ನಕಲಿಯಾಗಿದ್ದರಿಂದ ಸಂತ್ರಸ್ತೆ ದೂರು ನೀಡಲು ಹಿಂಜರಿದಿದ್ದರು. ಆದರೆ ಪೊಲೀಸರು ಒತ್ತಾಯಿಸಿ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ಅಸಲಿ ಸತ್ಯ ಹೊರಬಂದಿದೆ. ಪೊಲೀಸರು ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು.
ಈ ವ್ಯಕ್ತಿ ಅಪರಾಧಗಳನ್ನು ಮಾಡಲು ಕದ್ದ ದ್ವಿಚಕ್ರ ವಾಹನವನ್ನು ಬಳಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಈತ ನೆರೂಲ್‌ನಿಂದ ಮೋಟಾರ್‌ಸೈಕಲ್ ಅನ್ನು ಕದ್ದಿದ್ದ ಮತ್ತು ಪ್ರತಿ ಘಟನೆಯ ನಂತರ ಅದನ್ನು ಥಾಣೆಯ ಟೀನ್ ಹಾತ್ ನಾಕಾ ಬಳಿ ಬಿಟ್ಟು, ಪತ್ತೆಹಚ್ಚುವುದರಿಂದ ಪಾರಾಗಲು ಮನೆಗೆ ನಡೆದುಕೊಂಡು ಹೋಗುತ್ತಿದ್ದ.
ಈತ ಪ್ರತಿ ಬಾರಿಯೂ ಬಟ್ಟೆ ಬದಲಾಯಿಸುತ್ತಿದ್ದ, ಆದರೆ ಎಂದಿಗೂ ತನ್ನ ಶೂಗಳನ್ನು ಬದಲಾಯಿಸಲಿಲ್ಲ ಎಂದು ಪೊಲೀಸರು ಗಮನಿಸಿದರು. ವಿವಿಧ ಸ್ಥಳಗಳಲ್ಲಿ ಸುಮಾರು 80 ಸಿಸಿಟಿವಿ ಕ್ಲಿಪ್‌ಗಳಲ್ಲಿ ಒಂದೇ ರೀತಿಯ ಪಾದರಕ್ಷೆಗಳು ಕಾಣಿಸಿಕೊಂಡವು. ಈ ಸುಳಿವು ಆಧರಿಸಿ, ವಾಹನವನ್ನು ಮರಳಿ ಪಡೆಯಲು ಬಂದಾಗ ಪೊಲೀಸರು ಆತನನ್ನು ಟೀನ್ ಹಾತ್ ನಾಕಾ ಬಳಿ ಬಂಧಿಸಿದರು. ನಂತರ ಅವನು ಹಲವಾರು ಅಪರಾಧಗಳನ್ನು ಒಪ್ಪಿಕೊಂಡಿದ್ದಾನೆ.
ಈತ 2011ರಲ್ಲಿ ಜೈಲು ಪಾಲಾಗಿದ್ದ. ಹೊರಬಂದ ಮೇಲೆ ಸುಧಾರಿಸಿಕೊಳ್ಳುವುದಾಗಿ ಕುಟುಂಬಕ್ಕೆ ಭರವಸೆ ನೀಡಿದ್ದರೂ, ಹಣದ ದಾಹಕ್ಕಾಗಿ ಮತ್ತೆ ಕಳ್ಳತನ ಆರಂಭಿಸಿದ್ದ. ಜನವರಿಯಲ್ಲಿ ತಿಂಗಳಲ್ಲಿಯೇ ಈತನ ವಿರುದ್ಧ ಐದು ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಬೈನಲ್ಲಿ ತನ್ನ ವಿರುದ್ಧ ಈಗಾಗಲೇ 20 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಆರೋಪಿ ಹೇಳಿಕೊಂಡಿದ್ದಾನೆ, ಈ ಹೇಳಿಕೆಯನ್ನು ಪ್ರಸ್ತುತ ಪರಿಶೀಲಿಸಲಾಗುತ್ತಿದೆ. ಈತ ವೃದ್ಧ ಮಹಿಳೆಯರನ್ನು ಗುರಿಯಾಗಿಸಿಕೊಂಡು ಏಕಾಂಗಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದನೆಂದು ಆರೋಪಿಸಲಾಗಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement