ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಬಾಂಧವ್ಯದಲ್ಲಿ ಉಭಯ ದೇಶಗಳು ಮಧ್ಯಂತರ ವ್ಯಾಪಾರ ಒಪ್ಪಂದವನ್ನು (Interim Trade Agreement) ಅಂತಿಮಗೊಳಿಸಿದ್ದು, ಇದರ ಅನ್ವಯ ಭಾರತೀಯ ಸರಕುಗಳ ಮೇಲೆ ಅಮೆರಿಕ ವಿಧಿಸುತ್ತಿದ್ದ ಸುಂಕವನ್ನು ಶೇ. 18ಕ್ಕೆ ಇಳಿಕೆ ಮಾಡಲಾಗಿದೆ. ಮುಖ್ಯವಾಗಿ, ಈ ಹಿಂದೆ ಭಾರತೀಯ ಆಮದುಗಳ ಮೇಲೆ ವಿಧಿಸಲಾಗಿದ್ದ ಹೆಚ್ಚುವರಿ ಶೇ. 25ರಷ್ಟು ಸುಂಕವನ್ನು ಅಮೆರಿಕ ಹಿಂಪಡೆದಿದೆ.
ಈ ಒಪ್ಪಂದದ ಪ್ರಮುಖ 10 ಮುಖ್ಯಾಂಶಗಳು ಇಲ್ಲಿವೆ:
1. ಅಮೆರಿಕದ ಕೃಷಿ ಮತ್ತು ಕೈಗಾರಿಕಾ ಉತ್ಪನ್ನಗಳಿಗೆ ಭಾರತ ಮುಕ್ತ
ಅಮೆರಿಕದ ಎಲ್ಲಾ ಕೈಗಾರಿಕಾ ಉತ್ಪನ್ನಗಳು ಹಾಗೂ ಪ್ರಮುಖ ಕೃಷಿ ಮತ್ತು ಆಹಾರ ಪದಾರ್ಥಗಳ ಮೇಲಿನ ಸುಂಕವನ್ನು ಭಾರತ ಕಡಿಮೆ ಮಾಡಲಿದೆ ಅಥವಾ ತೆಗೆದುಹಾಕಲಿದೆ. ಇದರಲ್ಲಿ ಪ್ರಾಣಿ ಆಹಾರಕ್ಕಾಗಿ ಬಳಸುವ ಕೆಂಪು ಜೋಳ (Red Sorghum), ಒಣಗಿದ ಡಿಸ್ಟಿಲರ್ಸ್ ಧಾನ್ಯಗಳು, ಒಣ ಹಣ್ಣುಗಳು (Tree nuts), ಸಂಸ್ಕರಿಸಿದ ಹಣ್ಣುಗಳು, ಸೋಯಾಬೀನ್ ಎಣ್ಣೆ, ವೈನ್ ಮತ್ತು ಸ್ಪಿರಿಟ್ಸ್ ಒಳಗೊಂಡಿವೆ.
2. ಭಾರತೀಯ ಉತ್ಪನ್ನಗಳ ಮೇಲೆ ಶೇ. 18ರಷ್ಟು ಸುಂಕ
ಜವಳಿ, ಸಿದ್ಧ ಉಡುಪುಗಳು, ಚರ್ಮ ಮತ್ತು ಪಾದರಕ್ಷೆಗಳು, ಪ್ಲಾಸ್ಟಿಕ್, ರಬ್ಬರ್, ಸಾವಯವ ರಾಸಾಯನಿಕಗಳು, ಗೃಹಾಲಂಕಾರಿಕ ವಸ್ತುಗಳು, ಕರಕುಶಲ ವಸ್ತುಗಳು ಮತ್ತು ಕೆಲವು ಯಂತ್ರೋಪಕರಣಗಳ ಮೇಲೆ ಅಮೆರಿಕ ಇನ್ನು ಮುಂದೆ ಶೇ. 18ರಷ್ಟು ಸುಂಕವನ್ನು ವಿಧಿಸಲಿದೆ.
3. ಪ್ರತಿ ಸುಂಕಗಳ ರದ್ದತಿ
ಈ ಮಧ್ಯಂತರ ಒಪ್ಪಂದವು ಪೂರ್ಣ ಪ್ರಮಾಣದಲ್ಲಿ ಜಾರಿಯಾದಲ್ಲಿ, ಭಾರತದ ಜೆನೆರಿಕ್ ಔಷಧಗಳು, ರತ್ನಗಳು ಮತ್ತು ವಜ್ರಗಳು ಹಾಗೂ ವಿಮಾನದ ಬಿಡಿಭಾಗಗಳ ಮೇಲೆ ವಿಧಿಸಲಾಗುತ್ತಿದ್ದ ಪ್ರತಿ ಸುಂಕಗಳನ್ನು ಅಮೆರಿಕ ರದ್ದುಗೊಳಿಸಲಿದೆ.
4. ವಿಮಾನಯಾನ ಕ್ಷೇತ್ರಕ್ಕೆ ವಿಶೇಷ ವಿನಾಯಿತಿ
ವಿಶೇಷ ಕ್ರಮವಾಗಿ, ಭಾರತದಿಂದ ರಫ್ತಾಗುವ ನಿರ್ದಿಷ್ಟ ವಿಮಾನಗಳು ಮತ್ತು ವಿಮಾನದ ಬಿಡಿಭಾಗಗಳ ಮೇಲಿನ ಸುಂಕಗಳನ್ನು ಅಮೆರಿಕ ತೆಗೆದುಹಾಕಲಿದೆ.
5. ತಾಂತ್ರಿಕ ಅಡೆತಡೆಗಳ ನಿವಾರಣೆ
ವ್ಯಾಪಾರಕ್ಕೆ ಅಡ್ಡಿಯಾಗುವ ‘ಸುಂಕ ರಹಿತ ತಾಂತ್ರಿಕ ಅಡೆತಡೆಗಳನ್ನು’ (Non-tariff barriers) ಉಭಯ ದೇಶಗಳು ನಿವಾರಿಸಲಿವೆ. ಭಾರತದಲ್ಲಿ ಅಮೆರಿಕದ ವೈದ್ಯಕೀಯ ಉಪಕರಣಗಳ ಮಾರುಕಟ್ಟೆ ಪ್ರವೇಶಕ್ಕೆ ಇದ್ದ ದೀರ್ಘಕಾಲದ ಅಡೆತಡೆಗಳನ್ನು ನಿವಾರಿಸಲು ಭಾರತ ಒಪ್ಪಿಕೊಂಡಿದೆ.
6. ಐಸಿಟಿ (ICT) ಉತ್ಪನ್ನಗಳ ಆಮದು ಸುಗಮ
ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ಉತ್ಪನ್ನಗಳ ಮೇಲೆ ಭಾರತ ವಿಧಿಸಿದ್ದ ಕಟ್ಟುನಿಟ್ಟಿನ ಪರವಾನಗಿ ನಿಯಮಗಳನ್ನು ಸಡಿಲಿಸಲಾಗುವುದು. ಇದರಿಂದ ಮಾರುಕಟ್ಟೆ ಪ್ರವೇಶಕ್ಕೆ ಆಗುತ್ತಿದ್ದ ವಿಳಂಬ ಮತ್ತು ಪ್ರಮಾಣದ ಮೇಲಿನ ಮಿತಿಗಳು ದೂರವಾಗಲಿವೆ.
7. ಆಹಾರ ಮತ್ತು ಕೃಷಿ ರಫ್ತು ಸುಧಾರಣೆ
ಅಮೆರಿಕದ ಆಹಾರ ಮತ್ತು ಕೃಷಿ ಉತ್ಪನ್ನಗಳ ಮಾರುಕಟ್ಟೆ ಪ್ರವೇಶಕ್ಕೆ ಅಡ್ಡಿಯಾಗಿದ್ದ ಹಳೆಯ ಸುಂಕ ರಹಿತ ನಿಯಮಗಳನ್ನು ಭಾರತ ಸರಿಪಡಿಸಲಿದೆ.
8. $500 ಬಿಲಿಯನ್ ಮೌಲ್ಯದ ಖರೀದಿಗೆ ಭಾರತದ ಯೋಜನೆ
ಮುಂದಿನ ಐದು ವರ್ಷಗಳಲ್ಲಿ ಭಾರತವು ಅಮೆರಿಕದಿಂದ ಸುಮಾರು 500 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ಖರೀದಿಸಲು ಯೋಜಿಸಿದೆ. ಇದರಲ್ಲಿ ಇಂಧನ, ವಿಮಾನ ಮತ್ತು ಬಿಡಿಭಾಗಗಳು, ಅಮೂಲ್ಯ ಲೋಹಗಳು, ತಂತ್ರಜ್ಞಾನ ಉತ್ಪನ್ನಗಳು ಮತ್ತು ಕೋಕಿಂಗ್ ಕೋಲ್ ಸೇರಿವೆ.
9. ಹೈ-ಟೆಕ್ ವ್ಯಾಪಾರ ಮತ್ತು ಜಿಪಿಯು (GPU) ಸಹಕಾರ
ಡೇಟಾ ಸೆಂಟರ್‌ಗಳಿಗೆ ಅಗತ್ಯವಿರುವ ಗ್ರಾಫಿಕ್ಸ್ ಪ್ರೊಸೆಸಿಂಗ್ ಯುನಿಟ್‌ಗಳಂತಹ (GPUs) ಉನ್ನತ ತಂತ್ರಜ್ಞಾನದ ಉತ್ಪನ್ನಗಳ ವ್ಯಾಪಾರವನ್ನು ಹೆಚ್ಚಿಸಲು ಮತ್ತು ಜಂಟಿ ತಾಂತ್ರಿಕ ಸಹಕಾರವನ್ನು ವಿಸ್ತರಿಸಲು ಎರಡೂ ದೇಶಗಳು ನಿರ್ಧರಿಸಿವೆ.
10. ಮುಂದಿನ ಮಾತುಕತೆಗಳು
ಭಾರತ ಮತ್ತು ಅಮೆರಿಕ ಮಾರುಕಟ್ಟೆಗಳನ್ನು ಮತ್ತಷ್ಟು ಮುಕ್ತಗೊಳಿಸಲು ‘ದ್ವಿಪಕ್ಷೀಯ ವ್ಯಾಪಾರ ಒಪ್ಪಂದ’ (BTA) ಮಾತುಕತೆಗಳನ್ನು ಮುಂದುವರಿಸಲಿವೆ. ಈ ಮಾತುಕತೆಗಳ ವೇಳೆ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಮತ್ತಷ್ಟು ಕಡಿಮೆ ಮಾಡುವ ಭಾರತದ ಮನವಿಯನ್ನು ಪರಿಗಣಿಸಲು ಅಮೆರಿಕ ಸಮ್ಮತಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ