ಕೇವಲ 20 ರೂಪಾಯಿ ಲಂಚದ ಆರೋಪದ ಪ್ರಕರಣದಲ್ಲಿ ಸುಮಾರು 30 ವರ್ಷಗಳ ಕಾಲ ಜೈಲಿನಲ್ಲಿದ್ದ ವ್ಯಕ್ತಿಯೊಬ್ಬರು ಸುದೀರ್ಘ ಕಾನೂನು ಹೋರಾಟ ನಡೆಸಿ, ಅಂತಿಮವಾಗಿ ನ್ಯಾಯಾಲಯದಿಂದ ‘ನಿರಪರಾಧಿ’ ಎಂದು ತೀರ್ಪು ಬಂದು ಬಿಡುಗಡೆಯಾದ ಮರುದಿನವೇ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
“ನನ್ನ ಜೀವನದ ಮೇಲಿದ್ದ ಕಳಂಕ ಅಳಿಸಿಹೋಗಿದೆ. ಈಗ ದೇವರು ನನ್ನನ್ನು ಕರೆದುಕೊಂಡರೂ ನನಗೆ ಯಾವುದೇ ದುಃಖವಿಲ್ಲ,” ಎಂದು ಫೆಬ್ರವರಿ 4 ರಂದು ಗುಜರಾತ್ ಹೈಕೋರ್ಟ್ ತೀರ್ಪು ನೀಡಿದ ಬಳಿಕ ಅವರು ನುಡಿದಿದ್ದರು.
ಬಾಬುಭಾಯಿ ಪ್ರಜಾಪತಿ ಎಂಬವರು ಅಹಮದಾಬಾದ್‌ನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ, ಅವರು 20 ರೂಪಾಯಿ ಲಂಚ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
1997ರಲ್ಲಿ ಸೆಷನ್ಸ್ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿತ್ತು. 2002ರಲ್ಲಿ ದೋಷಾರೋಪಣೆ ಪಟ್ಟಿ ಸಿದ್ಧವಾಗಿತ್ತು, ಹಾಗೂ 2003ರಲ್ಲಿ ಸಾಕ್ಷಿಗಳ ವಿಚಾರಣೆ ಆರಂಭವಾಗಿತ್ತು. 2004ರಲ್ಲಿ ಸೆಷನ್ಸ್ ನ್ಯಾಯಾಲಯದಿಂದ 4 ವರ್ಷ ಜೈಲು ಮತ್ತು 3,000 ರೂಪಾಯಿ ದಂಡದ ಶಿಕ್ಷೆ ಪ್ರಕಟವಾಗಿತ್ತು.
ಈ ತೀರ್ಪನ್ನು ಪ್ರಶ್ನಿಸಿ ಪ್ರಜಾಪತಿ ಅವರು ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿಂದ ಅವರ ಮೇಲ್ಮನವಿ ಬರೋಬ್ಬರಿ 22 ವರ್ಷಗಳ ಕಾಲ ಬಾಕಿ ಉಳಿದಿತ್ತು. ಅಂತಿಮವಾಗಿ ಈ ವರ್ಷದ ಫೆಬ್ರವರಿ 4 ರಂದು ಅವರು ನಿರಪರಾಧಿ ಎಂಬ ತೀರ್ಪು ಹೊರಬಂತು ಎಂದು ಎನ್‌ಡಿಟಿವಿ ವರದಿ ಮಾಡಿದೆ.
ವಿಚಾರಣೆಯ ಸಂದರ್ಭದಲ್ಲಿ ಸಾಕ್ಷಿಗಳ ಹೇಳಿಕೆಗಳಲ್ಲಿ ಗಂಭೀರ ವಿರೋಧಾಭಾಸಗಳಿರುವುದು ಕಂಡುಬಂದಿದೆ. ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಪ್ರಜಾಪತಿ ಪರ ವಾದ ಮಂಡಿಸಿದ್ದ ವಕೀಲ ನಿತಿನ್ ಗಾಂಧಿ, ಇಡೀ ಪ್ರಕರಣವು ಕೇವಲ ಸಂಶಯದ ಆಧಾರದ ಮೇಲೆ ನಿಂತಿತ್ತು ಎಂದು ವಾದಿಸಿದ್ದರು.
ವಿಧಿಯ ಆಟ:
ತೀರ್ಪು ಬಂದ ನಂತರ ವಕೀಲರ ಕಚೇರಿಯಲ್ಲಿ ಭಾವುಕರಾಗಿ ಮಾತನಾಡಿದ್ದ ಪ್ರಜಾಪತಿ, ನಿರಾಳವಾಗಿ ಮನೆಗೆ ಮರಳಿದ್ದರು. ಆದರೆ ಮರುದಿನವೇ ಅವರು ನೈಸರ್ಗಿಕ ಕಾರಣಗಳಿಂದ ನಿಧನರಾದರು.
“ಅವರು ನಿನ್ನೆ ಕಚೇರಿಗೆ ಬಂದಾಗ ಬಹಳ ಸಂತೋಷವಾಗಿದ್ದರು. ಸರ್ಕಾರದಿಂದ ತಮಗೆ ಸಿಗಬೇಕಾದ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸುವಂತೆ ನಾನು ಅವರಿಗೆ ತಿಳಿಸಿದ್ದೆ. ಆದರೆ ಮರುದಿನ ನಾನು ಕರೆ ಮಾಡಿದಾಗ, ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ವಿಷಯ ತಿಳಿಯಿತು,” ಎಂದು ವಕೀಲರು ಬೇಸರ ವ್ಯಕ್ತಪಡಿಸಿದ್ದಾರೆ.
ಗೌರವಯುತವಾಗಿ ಬದುಕಬೇಕೆಂಬ ಅವರ ಆಸೆ ಈಡೇರಿದರೂ, ಆ ನೆಮ್ಮದಿಯನ್ನು ಅನುಭವಿಸಲು ವಿಧಿ ಅವರಿಗೆ ಕಾಲಾವಕಾಶ ನೀಡಲಿಲ್ಲ ಎಂಬುದು ಅವರ ಹಿತೈಷಿಗಳ ನೋವಿನ ನುಡಿಯಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ