ಬೇಡ್ತಿ, ಅಘನಾಶಿ ನದಿ ಜೋಡಣೆ ವಿರೋಧಿಸಿ ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಉತ್ತರ ಕನ್ನಡ ಜಿಲ್ಲೆ ಸರ್ವಪಕ್ಷ ನಿಯೋಗ

ಶಿರಸಿ : ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದ  ಉತ್ತರ ಕನ್ನಡ ಜಿಲ್ಲೆಯ ಸರ್ವಪಕ್ಷ ನಿಯೋಗವು ಸೋಮವಾರ (ಫೆ.9) ನವದೆಹಲಿಯಲ್ಲಿ ಕೇಂದ್ರದ ಪ್ರಮುಖ ಸಚಿವರನ್ನು ಭೇಟಿ ಮಾಡಿ, ಬೇಡ್ತಿ-ಹಿರೇವಡ್ಡತ್ತಿ ಹಾಗೂ ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಗಳಿಂದ ಜಿಲ್ಲೆಯ ಪರಿಸರಕ್ಕಾಗುವ ಹಾನಿಯ ಕುರಿತು ಗಂಭೀರ ಚರ್ಚೆ ನಡೆಸಿತು. ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ, ಪರಿಸರ ಸಚಿವ ಭೂಪೇಂದ್ರ ಯಾದವ್, ಕೇಂದ್ರ ಸಚಿವರುಗಳಾದ ಪ್ರಹ್ಲಾದ ಜೋಶಿ,  ಎಚ್.ಡಿ. ಕುಮಾರಸ್ವಾಮಿ ಮತ್ತು   ವಿ. ಸೋಮಣ್ಣ ಅವರನ್ನು ಭೇಟಿ ಮಾಡಿದ ನಿಯೋಗವು, ಪಶ್ಚಿಮ ಘಟ್ಟಗಳ ರಕ್ಷಣೆ ಹಾಗೂ ಸ್ಥಳೀಯರ ನೀರಿನ ಭದ್ರತೆಯ ಬಗ್ಗೆ ವಿಸ್ತೃತ ಮನವಿ ಸಲ್ಲಿಸಿತು.
ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರೊಂದಿಗೆ ನಡೆದ ಸಭೆಯಲ್ಲಿ, ಜಿಲ್ಲೆಯ ಪರಿಸರ ಸೂಕ್ಷ್ಮತೆ ಮತ್ತು ಭಾರತೀಯ ವಿಜ್ಞಾನ ಮಂದಿರ ನೀಡಿರುವ ಜಿಲ್ಲೆಯ ಭಾರ ಧಾರಣಾ ಸಾಮರ್ಥ್ಯದ ವರದಿಯನ್ನು ನಿಯೋಗವು ಪ್ರಸ್ತಾಪಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನದಿ ಜಲಾನಯನ ಪ್ರದೇಶಗಳಲ್ಲಿ ನೀರಿನ ಕೊರತೆ ಉಂಟಾದಲ್ಲಿ ಕೇಂದ್ರ ಸರ್ಕಾರ ಈ ಯೋಜನೆಗಳಿಗೆ ಒಪ್ಪಿಗೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಯೋಜನೆಗಳು ರಾಜ್ಯದ ವ್ಯಾಪ್ತಿಯಲ್ಲಿ ಇರುವುದರಿಂದ ಅಂತಿಮ ನಿರ್ಧಾರ ರಾಜ್ಯ ಸರ್ಕಾರದ ಮೇಲಿದ್ದು, ಕೇಂದ್ರವು ಎಲ್ಲಾ ಸಂಶೋಧನಾ ವರದಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ನಂತರ ಪರಿಸರ ಸಚಿ  ಭೂಪೇಂದ್ರ ಯಾದವ್ ಅವರನ್ನು ನೀಯೋಗವು ಭೇಟಿ ಮಾಡಿದಾಗ, ಅವರು ಪಶ್ಚಿಮ ಘಟ್ಟಗಳ ರಕ್ಷಣೆಗೆ ತಮ್ಮ ಪೂರ್ಣ ಬದ್ಧತೆಯನ್ನು ವ್ಯಕ್ತಪಡಿಸಿದರು. ಪಶ್ಚಿಮ ಘಟ್ಟಗಳನ್ನು ಅತ್ಯುನ್ನತ ಆಧ್ಯಾತ್ಮಿಕ ಮತ್ತು ನೈಸರ್ಗಿಕ ತಾಣವೆಂದು ಬಣ್ಣಿಸಿದ ಸಚಿವರು, ಯಾವುದೇ ಅಭಿವೃದ್ಧಿ ಪರಿಹಾರಗಳು ಪ್ರಕೃತಿ ಆಧಾರಿತವಾಗಿರಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಪ್ರಸ್ತಾವನೆ ಇದುವರೆಗೆ ಇಲಾಖೆಗೆ ಬಂದಿಲ್ಲವೆಂದು ಸ್ಪಷ್ಟಪಡಿಸಿದರು.
ಪ್ರಸ್ತಾವನೆ ಬಂದ ಸಂದರ್ಭದಲ್ಲಿ ನಿಯೋಗ ಮಂಡಿಸಿದ ಅಂಶಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದರು. ಪಶ್ಚಿಮ ಘಟ್ಟದ ಭಾರ ಧಾರಣಾ ಸಾಮರ್ಥ್ಯದ ಅಧ್ಯಯನ ಪೂರ್ಣಗೊಳ್ಳುವವರೆಗೆ ಯಾವುದೇ ವಿಸ್ತೃತ ಯೋಜನಾ ವರದಿ (DPR) ಚಟುವಟಿಕೆಗಳಿಗೆ ತಡೆ ನೀಡಬೇಕೆಂದು ನಿಯೋಗವು ಒತ್ತಾಯಿಸಿತು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕರುಗಳಾದ ಶಿವರಾಮ ಹೆಬ್ಬಾರ,  ಭೀಮಣ್ಣ ನಾಯ್ಕ,  ಶಾಂತಾರಾಮ ಸಿದ್ಧಿ, ಪರಿಸರ ಹೋರಾಟಗಾರರಾದ ಅನಂತ ಹೆಗಡೆ ಅಶಿಸರ , ನರಸಿಂಹ ಹೆಗಡೆ, ವಿವೇಕ ಭಟ್ ಗಡಿಹಿತ್ಲು, ನಾರಾಯಣ ಹೆಗಡೆ ಗಡಿಕೈ, ವಿಜ್ಞಾನಿ ಬಾಲಚಂದ್ರ ಸಾಯಿಮನೆ ಮುಂತಾದವರು ಉಪಸ್ಥಿತರಿದ್ದರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement