ಮುಂಬೈ: ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆಯಾದ ಬೃಹನ್ ಮುಂಬೈ ಮಹಾನಗರ ಪಾಲಿಕೆ (BMC)ಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿದ್ದ ಆಡಳಿತಾಧಿಕಾರಿಗಳ ಆಡಳಿತಕ್ಕೆ ತೆರೆ ಬಿದ್ದಿದೆ. ಬಿಜೆಪಿ ಪಾಲಿಕೆ ಸದಸ್ಯರಾದ ರಿತು ತಾವ್ಡೆ ಅವರು ಮುಂಬೈನ ನೂತನ ಮೇಯರ್ ಆಗಿ ಮತ್ತು ಶಿವಸೇನೆಯ (ಶಿಂದೆ ಬಣ) ಸಂಜಯ ಘಾಡಿ ಅವರು ಉಪಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶಿವಸೇನೆ (ಯುಬಿಟಿ), ಕಾಂಗ್ರೆಸ್ ಸೇರಿದಂತೆ ಇತರ ವಿಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸದ ಕಾರಣ ಈ ಆಯ್ಕೆಯು ಸುಗಮವಾಗಿ ನಡೆದಿದೆ. ಸುಮಾರು 40 ವರ್ಷಗಳ ನಂತರ ಮುಂಬೈ ಮೇಯರ್ ಸ್ಥಾನವನ್ನು ಬಿಜೆಪಿ ಅಲಂಕರಿಸಿದೆ. ಈ ಮೂಲಕ ಬಿಎಂಸಿ ಮೇಲೆ ಶಿವಸೇನೆ (ಯುಬಿಟಿ) ಹೊಂದಿದ್ದ 25 ವರ್ಷಗಳ ಸುದೀರ್ಘ ಪ್ರಾಬಲ್ಯ ಅಧಿಕೃತವಾಗಿ ಅಂತ್ಯಗೊಂಡಿದೆ.
ಇತ್ತೀಚೆಗೆ ನಡೆದ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 89 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಮಿತ್ರಪಕ್ಷವಾದ ಏಕನಾಥ ಶಿಂದೆ ನೇತೃತ್ವದ ಶಿವಸೇನೆ 29 ಸ್ಥಾನಗಳನ್ನು ಗೆಲ್ಲುವ ಮೂಲಕ ಮೈತ್ರಿಕೂಟವು ಬಹುಮತದ ಗಡಿ (114) ದಾಟಿತ್ತು.
ಮುನ್ಸಿಪಲ್ ಕಮಿಷನರ್ ಭೂಷಣ್ ಗಗ್ರಾನಿ ಅವರಿಂದ ರಿತು ತಾವ್ಡೆ ಮತ್ತು ಸಂಜಯ ಘಾಡಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅಭಿನಂದನೆ ಸಲ್ಲಿಸಿದರು.
“ರಿತು ತಾವ್ಡೆ ಮತ್ತು ಸಂಜಯ ಘಾಡಿ ಅವರು ಮೈತ್ರಿಕೂಟದ ನಿಷ್ಠಾವಂತ ಸೈನಿಕರು. ಇವರ ನೇತೃತ್ವದಲ್ಲಿ ಮುಂಬೈ ಜನತೆಗೆ ಪಾರದರ್ಶಕ ಮತ್ತು ಜನಸ್ನೇಹಿ ಆಡಳಿತ ಸಿಗಲಿದೆ” ಎಂದು ದೇವೇಂದ್ರ ಫಡ್ನವೀಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯಾರು ಈ ರೀತು ತಾವ್ಡೆ?
ಘಾಟ್‌ಕೋಪರ್ (ವಾರ್ಡ್ 132) ನಿಂದ ಆಯ್ಕೆಯಾಗಿರುವ ರಿತು ತಾವ್ಡೆ ಅವರು ಹಿರಿಯ ಕಾರ್ಪೊರೇಟರ್ ಆಗಿದ್ದಾರೆ. ಈ ಹಿಂದೆ ಬಿಎಂಸಿಯ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಅವರಿಗಿದೆ. ಮರಾಠಿ ಅಸ್ಮಿತೆ ಮತ್ತು ನಾಗರಿಕ ಸಮಸ್ಯೆಗಳ ಕುರಿತು ಗಟ್ಟಿ ಧ್ವನಿ ಎತ್ತುವ ನಾಯಕಿಯಾಗಿ ಅವರು ಗುರುತಿಸಿಕೊಂಡಿದ್ದಾರೆ.
ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಮೇಯರ್ ತಾವ್ಡೆ, ತಾನು ಮುಂಬೈನ ‘ಸೇವಕಿ’ಯಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ.
ಮಳೆಗಾಲದ ಸಿದ್ಧತೆ, ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆಯ ಸುಧಾರಣೆ, ಅಕ್ರಮ ಒತ್ತುವರಿ ತೆರವುಗೊಳಿಸುವುದು ತಮ್ಮ ಮೊದಲ ಆದ್ಯತೆ ಎಂದು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ