ಕುಮಟಾ : ಪೆಟ್ರೋಲ್ ಬಂಕ್ ಕಳ್ಳತನ ; ಇಬ್ಬರನ್ನು ಬಂಧಿಸಿದ ಪೊಲೀಸರು

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಾಸೂರು ಕ್ರಾಸ್ ಬಳಿಯ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಕುಮಟಾ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಫೆಬ್ರವರಿ 1ರ ರಾತ್ರಿ ಪೆಟ್ರೋಲ್ ಬಂಕ್ ಕಚೇರಿಯ ಹಿಂಭಾಗದ ಕಿಟಕಿಯ ಸರಳುಗಳನ್ನು ಕತ್ತರಿಸಿ ಒಳನುಗ್ಗಿದ್ದ ಕಳ್ಳರು, ಲಾಕರ್ ಮೀಟಿ ತೆಗೆದು ಅದರಲ್ಲಿದ್ದ 25,000 ರೂ. ನಗದು ಹಣವನ್ನು ದೋಚಿದ್ದರು. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸ್ ನಿರೀಕ್ಷಕ ಯೋಗೇಶ ಕೆ.ಎಂ. ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡ ಪೊಲೀಸರು, ಈ ಸಂಬಂಧ ಫೆಬ್ರವರಿ 11 ರಂದು ಆರೋಪಿಗಳಾದ ಅಸ್ಲಂ ಮಹಮ್ಮದ್ ಹನೀಫ ದಂಡು (18) ಹಾಗೂ ಓರ್ವ ಅಪ್ರಾಪ್ತ ಬಾಲಕನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಕಳ್ಳತನಕ್ಕೆ ಬಳಸಿದ 3 ಲಕ್ಷ ರೂ. ಮೌಲ್ಯದ ಎರಡು ಸುಝುಕಿ ಬರ್ಗ್‌ಮನ್ ಸ್ಕೂಟರ್‌ಗಳು, ಕೃತ್ಯಕ್ಕೆ ಬಳಸುತ್ತಿದ್ದ ಆಯುಧಗಳು ಹಾಗೂ ಕಳ್ಳತನ ಮಾಡಿದ್ದ ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪಿ.ಎಸ್.ಐ ಗಳಾದ ರವಿ ಗುಡ್ಡಿ, ಮಯೂರ ಪಟ್ಟಣಶೆಟ್ಟಿ, ಸಾವಿತ್ರಿ ನಾಯಕ ಮತ್ತು ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ. ಎನ್. ಶ್ಲಾಘಿಸಿದ್ದಾರೆ.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement