1993ರಲ್ಲಿ, ಕೇವಲ 300 ರೂ.ಗೆ AI.com ಡೊಮೇನ್ ಖರೀದಿಸಿದ್ದ ವ್ಯಕ್ತಿ ; ಈಗ ಅದು 634 ಕೋಟಿ ರೂ.ಗಳಿಗೆ ಮಾರಾಟ..!

ಕೌಲಾಲಂಪುರ: ದೀರ್ಘಕಾಲದ ಡಿಜಿಟಲ್ ಆಸ್ತಿ ಹೂಡಿಕೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿರುವ ಮಲೇಷ್ಯಾದ ತಂತ್ರಜ್ಞಾನ ಉದ್ಯಮಿ ಅರ್ಸ್ಯನ್ ಇಸ್ಮಾಯಿಲ್, ತಮ್ಮ ಬಳಿಯಿದ್ದ ‘AI.com’ ಎಂಬ ಪ್ರೀಮಿಯಂ ಡೊಮೇನ್ ಹೆಸರನ್ನು ಬರೋಬ್ಬರಿ 70 ಮಿಲಿಯನ್ ಡಾಲರ್ (ಸುಮಾರು 634 ಕೋಟಿ ರೂಪಾಯಿ) ಮೊತ್ತಕ್ಕೆ ಮಾರಾಟ ಮಾಡಿದ್ದಾರೆ. ವಿಶೇಷವೆಂದರೆ, ಅವರು ಈ ಡೊಮೇನ್ ಅನ್ನು 1993ರಲ್ಲಿ ಕೇವಲ 100 ಡಾಲರ್ (ಆ ಕಾಲದ ಅಂದಾಜು 300 ರೂಪಾಯಿ) ನೀಡಿ ನೋಂದಾಯಿಸಿದ್ದರು. ಇಂಟರ್ನೆಟ್ ಇತಿಹಾಸದಲ್ಲಿ ಸಾರ್ವಜನಿಕವಾಗಿ ಬಹಿರಂಗಗೊಂಡ ಅತಿ ದೊಡ್ಡ ಡೊಮೇನ್ ವ್ಯವಹಾರಗಳಲ್ಲಿ ಇದು ಒಂದೆಂದು ‘ದಿ ಇಂಡಿಪೆಂಡೆಂಟ್ ಸಿಂಗಾಪುರ’ ವರದಿ ಮಾಡಿದೆ.
ಖರೀದಿ ಮತ್ತು ಮಾರಾಟದ ಕುತೂಹಲಕಾರಿ ಹಾದಿ
ಅರ್ಸ್ಯನ್ ಇಸ್ಮಾಯಿಲ್ ಅವರು ತಮ್ಮ 10ನೇ ವಯಸ್ಸಿನಲ್ಲಿ ತಾಯಿಯ ಕ್ರೆಡಿಟ್ ಕಾರ್ಡ್ ಬಳಸಿ ಈ ಡೊಮೇನ್ ಖರೀದಿಸಿದ್ದರು. ಆಗ ಅವರಿಗೆ ಕೃತಕ ಬುದ್ಧಿಮತ್ತೆಯ (Artificial Intelligence) ಭವಿಷ್ಯದ ಅರಿವಿರಲಿಲ್ಲ; ಬದಲಾಗಿ ತಮ್ಮ ಹೆಸರಿನ ಮೊದಲ ಅಕ್ಷರಗಳಿಗೆ (Arsyan Ismail – AI) ಹೊಂದುವಂತಿದೆ ಎಂಬ ಕಾರಣಕ್ಕೆ ಇದನ್ನು ಆಯ್ಕೆ ಮಾಡಿಕೊಂಡಿದ್ದರು. ಮಗನ ಈ ವಿಚಿತ್ರ ಖರೀದಿಯ ಬಗ್ಗೆ ಅಂದು ಅವರ ತಾಯಿಗೂ ಅಚ್ಚರಿಯಾಗಿತ್ತು.
ಏಪ್ರಿಲ್ 2025ರಲ್ಲಿ, ಅರ್ಸ್ಯನ್ ಈ ಡೊಮೇನ್ ಅನ್ನು ‘Crypto.com’ ಸಂಸ್ಥೆಯ ಸಿಇಒ ಕ್ರಿಸ್ ಮಾರ್ಸಲೆಕ್ ಅವರಿಗೆ ಮಾರಾಟ ಮಾಡಿದರು. ಈ ಸಂಪೂರ್ಣ ವ್ಯವಹಾರವು ಕ್ರಿಪ್ಟೋಕರೆನ್ಸಿ ಮೂಲಕವೇ ನಡೆದಿದೆ ಎಂದು ವರದಿಗಳು ತಿಳಿಸಿವೆ.
‘ಸೂಪರ್ ಬೌಲ್ LX’ ಕ್ರೀಡಾಕೂಟದ ಸಂದರ್ಭದಲ್ಲಿ Crypto.com ಈ ಡೊಮೇನ್ ಅನ್ನು ತನ್ನ ಹೊಸ ‘ಏಜೆಂಟಿಕ್ ಎಐ’ ಪ್ಲಾಟ್‌ಫಾರ್ಮ್‌ಗಾಗಿ ಮರುಚಾಲನೆಗೊಳಿಸಿತು. “ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಪೈಪೋಟಿ ಹೆಚ್ಚುತ್ತಿರುವಾಗ, ನಮ್ಮ ಸಂಸ್ಥೆಯು ಮಾರುಕಟ್ಟೆಯಲ್ಲಿ ಸಾಮಾನ್ಯವಾಗದಂತೆ ತಡೆಯಲು ಇಂತಹ ಪ್ರೀಮಿಯಂ ಹೆಸರು ಅತ್ಯಗತ್ಯವಾಗಿತ್ತು,” ಎಂದು ಮಾರ್ಸಲೆಕ್ ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ಅರ್ಸ್ಯನ್ ಅವರಿಗೆ 100 ಮಿಲಿಯನ್ ಡಾಲರ್‌ವರೆಗೆ ಆಫರ್‌ಗಳು ಬಂದಿದ್ದವು. ಆದರೆ ಅವರು 70 ಮಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದರು. ಈ ಬಗ್ಗೆ ಮಾತನಾಡುತ್ತಾ, “ಶತಕೋಟ್ಯಾಧಿಪತಿಗಳ ಜೊತೆ ಅತಿಯಾದ ಚೌಕಾಸಿ ಮಾಡಬಾರದು,” ಎಂದು ಅವರು ಸಲಹೆ ನೀಡಿದ್ದಾರೆ.
ಯಾರು ಈ ಅರ್ಸ್ಯನ್ ಇಸ್ಮಾಯಿಲ್?
ಅರ್ಸ್ಯನ್ ಇಸ್ಮಾಯಿಲ್ ಮಲೇಷ್ಯಾದ ತಂತ್ರಜ್ಞಾನ ಕ್ಷೇತ್ರದಲ್ಲಿ ದಶಕಗಳಿಂದ ಸಕ್ರಿಯರಾಗಿದ್ದಾರೆ. ಸಾಮಾಜಿಕ ಜಾಲತಾಣಗಳ ಆರಂಭಿಕ ಕಾಲದಲ್ಲಿ ‘Nuffnang’ ಮತ್ತು ‘Friendster’ ನಂತಹ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದ ಅವರು, ನಂತರ ‘1337 ಟೆಕ್‌’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಬಿಟ್‌ಕಾಯಿನ್ ಸೇರಿದಂತೆ ಡಿಜಿಟಲ್ ಆಸ್ತಿಗಳಲ್ಲಿ ಇವರು ಆರಂಭಿಕ ಹೂಡಿಕೆದಾರರಾಗಿದ್ದಾರೆ.
 ಇವರು ಅನೇಕ ಸಂಸ್ಥೆಗಳಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ. ಜನವರಿ 2025ರಿಂದ ‘OpenAI’ ಸಂಸ್ಥೆಯೊಂದಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರು ನಾಟಿಂಗ್‌ಹ್ಯಾಮ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಪಡೆದಿದ್ದಾರೆ. ಅವರ ಶಾಲಾ ಶಿಕ್ಷಣವು ಕೋಲೆಜ್ ಯಯಾಸನ್ ಸಾದ್ ಮೆಲಕಾ ಮತ್ತು ಎ-ಲೆವೆಲ್ ಶಿಕ್ಷಣವನ್ನು ಕೋಲೆಜ್ ಯಯಾಸನ್ ಯುಇಎಂ(UEM)ನಲ್ಲಿ ಮುಗಿಸಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement