ಎಂಆರ್‌ಐ ಸ್ಕ್ಯಾನ್ ವೇಳೆ ಅವಾಂತರ: 6 ವರ್ಷದ ಬಾಲಕ ಸಾವು

ಗ್ರೇಟರ್ ನೋಯ್ಡಾ: ಉತ್ತರ ಪ್ರದೇಶದ ಗ್ರೇಟರ್‌ ನೊಯ್ಡಾದ ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ಎಂಆರ್‌ಐ (MRI) ಸ್ಕ್ಯಾನ್‌ಗೆ ಒಳಗಾಗಿದ್ದ ಆರು ವರ್ಷದ ಬಾಲಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ವೈದ್ಯರು ನೀಡಿದ ಅತಿಯಾದ ಪ್ರಮಾಣದ ಇಂಜೆಕ್ಷನ್‌ನಿಂದಲೇ ಸಾವು ಸಂಭವಿಸಿದೆ ಎಂದು ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ.
ದನ್ಕೌರ್‌ನ ರೀಲ್ಖಾ ನಿವಾಸಿಯಾದ ಪ್ರಶಾಂತ ಕಸಾನಾ ಎಂಬುವವರು ತಮ್ಮ ಆರು ವರ್ಷದ ಮಗನನ್ನು ಎಂಆರ್‌ಐ ಸ್ಕ್ಯಾನ್‌ಗಾಗಿ ಸೆಕ್ಟರ್ P3 ನಲ್ಲಿರುವ ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ಗೆ ಬೆಳಿಗ್ಗೆ 10:30ರ ಸುಮಾರಿಗೆ ಕರೆತಂದಿದ್ದರು. ಸ್ಕ್ಯಾನ್ ಪ್ರಕ್ರಿಯೆಗೂ ಮುನ್ನ ಮಗುವಿಗೆ ಅರಿವಳಿಕೆ (Anaesthesia) ಇಂಜೆಕ್ಷನ್‌ ನೀಡಲಾಗಿತ್ತು. ಚುಚ್ಚುಮದ್ದು ನೀಡಿದ ಕೆಲವೇ ಕ್ಷಣಗಳಲ್ಲಿ ಮಗುವಿನ ಆರೋಗ್ಯ ಹದಗೆಟ್ಟು, ಪ್ರಜ್ಞೆ ತಪ್ಪಿದ್ದಾನೆ ಎಂದು ಆರೋಪಿಸಲಾಗಿದೆ.

ಪೋಷಕರು ಮತ್ತು ಸಂಘಟನೆಗಳ ಆರೋಪ:
ಮಗುವಿನ ತಂದೆ ಪ್ರಶಾಂತ ಕಸಾನಾ ಮಾತನಾಡಿ, “ಎಂಆರ್‌ಐ ಮೊದಲು ಮಗುವಿಗೆ ಭಾರೀ ಪ್ರಮಾಣದ ಡೋಸ್ ನೀಡಲಾಗಿದೆ. ಮಗುವಿನ ಸ್ಥಿತಿ ಬಗ್ಗೆ ವಿಚಾರಿಸಿದರೆ ಸಿಬ್ಬಂದಿ ಸರಿಯಾದ ಪ್ರತಿಕ್ರಿಯೆ ನೀಡಲಿಲ್ಲ, ಬದಲಾಗಿ ಮತ್ತೊಂದು ಡೋಸ್ ನೀಡುವ ಬಗ್ಗೆ ಮಾತನಾಡುತ್ತಿದ್ದರು,” ಎಂದು ದೂರಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್‌ನ ರಾಜ್ಯ ವಕ್ತಾರ ಪವನ್ ಖಟಾನಾ ಅವರು ಸ್ಥಳಕ್ಕೆ ಭೇಟಿ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದು, “ಮಗುವನ್ನು ಕರೆತಂದಾಗ ಆತ ಆರೋಗ್ಯವಾಗಿದ್ದ. ಇಂಜೆಕ್ಷನ್ ನೀಡಿದ ಅರ್ಧ ಗಂಟೆಯಾದರೂ ಮಗು ಎಚ್ಚರಗೊಳ್ಳಲಿಲ್ಲ. ವೈದ್ಯರು ಮಗುವನ್ನು ಪರೀಕ್ಷಿಸಿದಾಗ ದೇಹ ತಣ್ಣಗಾಗಿತ್ತು. ಗ್ರೇಟರ್ ನೋಯ್ಡಾದಲ್ಲಿ ಇಂತಹ ಹಲವಾರು ಅನಧಿಕೃತ ಕೇಂದ್ರಗಳು ಕಾರ್ಯಾಚರಿಸುತ್ತಿವೆ,” ಎಂದು ಆರೋಪಿಸಿ ಸಮಗ್ರ ತನಿಖೆಗೆ ಒತ್ತಾಯಿಸಿದರು.

ಪ್ರಮುಖ ಸುದ್ದಿ :-   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಯಾಮಿ ಗೌತಂ ಅತ್ಯುತ್ತಮ ನಟಿ, ಕಾರ್ತಿಕ್ ಆರ್ಯನ್–ಮಮ್ಮುಟ್ಟಿ ಅತ್ಯುತ್ತಮ ನಟರು ; ಪ್ರಶಸ್ತಿಗಳ ಪಟ್ಟಿ

ಪ್ರತಿಭಟನೆ ಮತ್ತು ಪೊಲೀಸ್ ಕ್ರಮ:
ಮಗುವಿನ ಸ್ಥಿತಿ ಹದಗೆಟ್ಟ ಕೂಡಲೇ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಲ್ಲಿನ ವೈದ್ಯರು ಮಗು ಅದಾಗಲೇ ಮೃತಪಟ್ಟಿದೆ ಎಂದು ಘೋಷಿಸಿದರು. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಡಯಾಗ್ನೋಸ್ಟಿಕ್ ಸೆಂಟರ್‌ಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
“ಪ್ರಾಥಮಿಕ ತನಿಖೆಯ ಪ್ರಕಾರ, ಎಂಆರ್‌ಐ ಸ್ಕ್ಯಾನ್‌ಗಾಗಿ ಅರಿವಳಿಕೆ ನೀಡಿದ ನಂತರ ಬಾಲಕನ ಆರೋಗ್ಯ ಕ್ಷೀಣಿಸಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ. ಸದ್ಯ ಸ್ಥಳದಲ್ಲಿ ಶಾಂತಿ ನೆಲೆಸಿದ್ದು, ಕಾನೂನು ಪ್ರಕ್ರಿಯೆಗಳು ಮುಂದುವರಿದಿವೆ,” ಎಂದು ತಿಳಿಸಿದರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement