ಪಿಸಿಬಿ ಅಧ್ಯಕ್ಷ ಒಬ್ಬ ‘ಅಸಮರ್ಥ, ಅಜ್ಞಾನಿ’: ಭಾರತದ ಎದುರಿಗೆ ಪಾಕ್‌ ತಂಡದ ಹೀನಾಯ ಸೋಲಿಗೆ ಶೋಯೆಬ್ ಅಖ್ತರ್ ಆಕ್ರೋಶ

ಟಿ20 ವಿಶ್ವಕಪ್‌ನ ಹೈವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಪಾಕಿಸ್ತಾನ ತಂಡ 61 ರನ್‌ಗಳ ಹೀನಾಯ ಸೋಲು ಅನುಭವಿಸಿದೆ. ಈ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧ್ಯಕ್ಷ ಮೊಹ್ಸಿನ್ ನಖ್ವಿ ವಿರುದ್ಧ ಕಿಡಿಕಾರಿದ್ದು, ಅವರನ್ನು ‘ಅನರ್ಹ’ ಮತ್ತು ‘ಜಾಹೀಲ್’ (ಅಜ್ಞಾನಿ) ಎಂದು ಕರೆದಿದ್ದಾರೆ.
ಭಾನುವಾರ (ಫೆಬ್ರವರಿ 15) ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 175 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಆದರೆ, ಗುರಿ ಬೆನ್ನಟ್ಟಿದ ಪಾಕಿಸ್ತಾನ ಕೇವಲ 114 ರನ್‌ಗಳಿಗೆ ಆಲ್-ಔಟ್ ಆಗುವ ಮೂಲಕ ಹೀನಾಯವಾಗಿ ಸೋಲನುಭವಿಸಿತು. ಈ ಗೆಲುವಿನೊಂದಿಗೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ 8-1 ಅಂತರದ ಭರ್ಜರಿ ಮುನ್ನಡೆ ಸಾಧಿಸಿದೆ.

“ನಖ್ವಿಗೆ ಕ್ರಿಕೆಟ್ ಬಗ್ಗೆ ಏನೂ ತಿಳಿದಿಲ್ಲ”
ಎಬಿಪಿ ನ್ಯೂಸ್ ಜೊತೆ ಮಾತನಾಡಿದ ಅಖ್ತರ್, ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರನ್ನು ಹೆಸರಿಸದೇ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
“ಕ್ರಿಕೆಟ್ ಬಗ್ಗೆ ಏನೂ ತಿಳಿಯದ ವ್ಯಕ್ತಿಯನ್ನು ನೀವು ಮಂಡಳಿಯ ಅಧ್ಯಕ್ಷರನ್ನಾಗಿ ಮಾಡಿದ್ದೀರಿ. ಅಂತಹವರಿಂದ ತಂಡವನ್ನು ಹೇಗೆ ನಡೆಸಲು ಸಾಧ್ಯ? ಇಂತಹ ಅನರ್ಹ ಮತ್ತು ಅಜ್ಞಾನಿ ವ್ಯಕ್ತಿಗೆ ಇಷ್ಟು ದೊಡ್ಡ ಜವಾಬ್ದಾರಿ ನೀಡಿರುವುದು ದೊಡ್ಡ ಅಪರಾಧ,” ಎಂದು ಅಖ್ತರ್ ಗುಡುಗಿದ್ದಾರೆ.
ಆಟಗಾರರ ಪ್ರದರ್ಶನದ ಬಗ್ಗೆ ಅಸಮಾಧಾನ
ತಂಡದ ಪ್ರಮುಖ ಆಟಗಾರರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಅವರು, “ಪಂದ್ಯ ಗೆಲ್ಲಿಸಿಕೊಡದ ಆಟಗಾರನನ್ನು (ಬಾಬರ್ ಆಜಂ) ನೀವು ಸೂಪರ್‌ಸ್ಟಾರ್ ಮಾಡಿದ್ದೀರಿ. ಶಾಹೀನ್ ಅಫ್ರಿದಿ 125 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಇಂದಿನ ಆಧುನಿಕ ಕ್ರಿಕೆಟ್‌ಗೆ ಇದು ಸಾಲದು. ಒತ್ತಡ ನಿಭಾಯಿಸುವ ತಾಕತ್ತು ಈ ತಂಡಕ್ಕಿಲ್ಲ,” ಎಂದು ಟೀಕಿಸಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

ಹದಗೆಟ್ಟ ಪಾಕ್ ಕ್ರಿಕೆಟ್ ಪರಿಸ್ಥಿತಿ
ಕಳೆದ 15-20 ವರ್ಷಗಳಿಂದ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಯಾವುದೇ ಹೂಡಿಕೆ ನಡೆದಿಲ್ಲ ಎಂದು ವಿಷಾದಿಸಿದ ಅಖ್ತರ್, “ಒಂದು ಕಾಲದಲ್ಲಿ ನಾವು ಮೈದಾನದಲ್ಲಿ ಭಾರತಕ್ಕೆ ಸಮಬಲದ ಪೈಪೋಟಿ ನೀಡುತ್ತಿದ್ದೆವು. ಆದರೆ ಇಂದು ಭಾರತವನ್ನು ಸೋಲಿಸುವ ಕನಸು ಕಾಣಲು ಕೂಡ ನಮಗೆ ಸಾಧ್ಯವಾಗುತ್ತಿಲ್ಲ,” ಎಂದು ಬೇಸರ ವ್ಯಕ್ತಪಡಿಸಿದರು.
ವಿಶೇಷವೆಂದರೆ, ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಪಂದ್ಯ ವೀಕ್ಷಿಸಲು ಕೊಲಂಬೊಗೆ ಆಗಮಿಸಿದ್ದರು. ಐಸಿಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲು ಮತ್ತು ಈ ಮೊದಲು ಸೃಷ್ಟಿಯಾಗಿದ್ದ ‘ಬಹಿಷ್ಕಾರ’ದ ವಿವಾದವನ್ನು ತಿಳಿಗೊಳಿಸಲು ಅವರು ಶ್ರೀಲಂಕಾ ಪ್ರವಾಸ ಕೈಗೊಂಡಿದ್ದರು. ಅವರೊಂದಿಗೆ ಪಿಎಸ್‌ಎಲ್ ಸಿಇಒ ಸಲ್ಮಾನ್ ನಸೀರ್ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡವೂ ಇತ್ತು. ಆದರೆ, ಮೈದಾನದಲ್ಲಿ ತಂಡದ ಕಳಪೆ ಪ್ರದರ್ಶನ ಮಂಡಳಿಯ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸಿದೆ ಎಂಬುದು ಅಖ್ತರ್ ವಾದವಾಗಿದೆ.

5 / 5. 1

ಪ್ರಮುಖ ಸುದ್ದಿ :-   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಯಾಮಿ ಗೌತಂ ಅತ್ಯುತ್ತಮ ನಟಿ, ಕಾರ್ತಿಕ್ ಆರ್ಯನ್–ಮಮ್ಮುಟ್ಟಿ ಅತ್ಯುತ್ತಮ ನಟರು ; ಪ್ರಶಸ್ತಿಗಳ ಪಟ್ಟಿ

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement