ಮುಂಬೈ: ಮುಂಬೈನಲ್ಲಿ ನಡೆದ ವ್ಯಾಪಕ ದ್ವಿಪಕ್ಷೀಯ ಮಾತುಕತೆಗಳ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮಂಗಳವಾರ ರಕ್ಷಣೆ, ಕೌಶಲ್ಯ, ತಂತ್ರಜ್ಞಾನ ಸಹಕಾರ, ವ್ಯಾಪಾರ ಮತ್ತು ಆರೋಗ್ಯ ಸೇರಿದಂತೆ 20ಕ್ಕೂ ಹೆಚ್ಚು ಒಪ್ಪಂದಗಳನ್ನು ಘೋಷಿಸಿದರು.
ಅಧ್ಯಕ್ಷ ಮ್ಯಾಕ್ರನ್ ನವದೆಹಲಿಯಲ್ಲಿ ನಡೆಯಲಿರುವ 2026 ರ AI ಶೃಂಗಸಭೆಯಲ್ಲಿ ಭಾಗವಹಿಸಲು ಮತ್ತು ಪ್ರಧಾನಿ ಮೋದಿ ಜೊತೆ ಉನ್ನತ ಮಟ್ಟದ ಚರ್ಚೆಗಳನ್ನು ನಡೆಸಲು ಮೂರು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ.
ವ್ಯಾಪಾರ, ರಕ್ಷಣೆ, ಇಂಧನ ಮತ್ತು ನಿರ್ಣಾಯಕ ತಂತ್ರಜ್ಞಾನಗಳಲ್ಲಿ ಸಂಬಂಧಗಳನ್ನು ಹೆಚ್ಚಿಸುವತ್ತ ಮಾತುಕತೆಗಳು ಗಮನಹರಿಸಿದ್ದು, ಎರಡೂ ಕಡೆಯವರು ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲು ತಮ್ಮ ಬದ್ಧತೆಯನ್ನು ಒತ್ತಿಹೇಳಿದ್ದಾರೆ.
ಮುಂಬೈನಲ್ಲಿ ಮಂಗಳವಾರ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಇಂದು ಜಗತ್ತು ಅನಿಶ್ಚಿತತೆಯ ಅವಧಿಯನ್ನು ಎದುರಿಸುತ್ತಿದೆ. ಅಂತಹ ವಾತಾವರಣದಲ್ಲಿ, ಭಾರತ-ಫ್ರಾನ್ಸ್ ಪಾಲುದಾರಿಕೆ ಜಾಗತಿಕ ಸ್ಥಿರತೆಗೆ ಒಂದು ಶಕ್ತಿಯಾಗಿದೆ” ಎಂದು ಬಣ್ಣಿಸಿದರು..
ಫ್ರಾನ್ಸ್ ಭಾರತದ ಅತ್ಯಂತ ಹಳೆಯ ಕಾರ್ಯತಂತ್ರದ ಪಾಲುದಾರರಲ್ಲಿ ಒಬ್ಬರು ಎಂದು ಬಣ್ಣಿಸಿದ ಅವರು, ಅಧ್ಯಕ್ಷ ಮ್ಯಾಕ್ರನ್ ಅವರ ಜೊತೆ, ಉಭಯ ರಾಷ್ಟ್ರಗಳು ರಾಷ್ಟ್ರಗಳು ತಮ್ಮ ಸಂಬಂಧವನ್ನು “ಇನ್ನಷ್ಟು ಬಲಗೊಳಿಸಿವೆ. ಇಂದು ನಾವು ನಮ್ಮ ಸಂಬಂಧಗಳನ್ನು ವಿಶೇಷ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯಾಗಿ ಸ್ಥಾಪಿಸುತ್ತಿದ್ದೇವೆ” ಎಂದು ಪ್ರಧಾನಿ ಹೇಳಿದರು.
ಭಾರತ-ಫ್ರಾನ್ಸ್ ನಾವೀನ್ಯತೆ ವರ್ಷವನ್ನು ಉದ್ಘಾಟಿಸುವುದಾಗಿ ಪ್ರಧಾನಿ ಮೋದಿ ಘೋಷಿಸಿದರು, ಇದು ಕಾರ್ಯತಂತ್ರದ ಪಾಲುದಾರಿಕೆಯನ್ನು ಜನ-ಕೇಂದ್ರಿತ ಸಹಯೋಗವನ್ನಾಗಿ ಪರಿವರ್ತಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದರು.”ಭಾರತ-ಫ್ರಾನ್ಸ್ ನಾವೀನ್ಯತೆ ವರ್ಷವನ್ನು ಪ್ರಾರಂಭಿಸುವುದರೊಂದಿಗೆ, ನಾವು ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಜನರ ಪಾಲುದಾರಿಕೆಯಾಗಿ ಪರಿವರ್ತಿಸುತ್ತಿದ್ದೇವೆ. ಏಕೆಂದರೆ ನಾವೀನ್ಯತೆ ಪ್ರತ್ಯೇಕವಾಗಿ ನಡೆಯುವುದಿಲ್ಲ, ಆದರೆ ಸಹಯೋಗದ ಮೂಲಕ ನಡೆಯುತ್ತದೆ” ಎಂದು ಅವರು ಹೇಳಿದರು.
ಈ ಉಪಕ್ರಮವು ಜನರಿಂದ ಜನರಿಗೆ ಸಂಪರ್ಕಗಳನ್ನು ಬಲಪಡಿಸುವ ನಿಟ್ಟಿನಲ್ಲಿ ರಕ್ಷಣೆ, ಶುದ್ಧ ಇಂಧನ, ಬಾಹ್ಯಾಕಾಶ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಕೈಗಾರಿಕೆಗಳು, ನವೋದ್ಯಮಗಳು, ಎಂಎಸ್‌ಎಂಇ(MSME)ಗಳು, ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ಬೆಸೆಯುವ ಗುರಿಯನ್ನು ಹೊಂದಿದೆ ಎಂದು ಮೋದಿ ಹೇಳಿದರು.
ಇದಕ್ಕೆ ಒತ್ತು ನೀಡುವ ಭಾಗವಾಗಿ, “ನಾವು ಇಂಡೋ-ಫ್ರೆಂಚ್ ಸೆಂಟರ್ ಫಾರ್ ಎಐ ಇನ್ ಹೆಲ್ತ್, ಇಂಡೋ-ಫ್ರೆಂಚ್ ಸೆಂಟರ್ ಫಾರ್ ಡಿಜಿಟಲ್ ಸೈನ್ಸ್ ಅಂಡ್ ಟೆಕ್ನಾಲಜಿ ಮತ್ತು ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಸ್ಕಿಲ್ಲಿಂಗ್ ಇನ್ ಏರೋನಾಟಿಕ್ಸ್ ಅನ್ನು ಪ್ರಾರಂಭಿಸಲಿದ್ದೇವೆ. ಮತ್ತು ಇವು ಕೇವಲ ಸಂಸ್ಥೆಗಳಲ್ಲ. ಇವು ಭವಿಷ್ಯವನ್ನು ನಿರ್ಮಿಸುವ ವೇದಿಕೆಗಳು” ಎಂದು ಪ್ರಧಾನಿ ಮೋದಿ ಹೇಳಿದರು.
ಕರ್ನಾಟಕದಲ್ಲಿ H125 ಹೆಲಿಕಾಪ್ಟರ್ ಅಂತಿಮ ಅಸೆಂಬ್ಲಿ ಲೈನ್ ತಯಾರಿಕೆ…
ಪ್ರಮುಖ ರಕ್ಷಣಾ-ಕೈಗಾರಿಕಾ ಅಭಿವೃದ್ಧಿಯಲ್ಲಿ, ಕರ್ನಾಟಕದಲ್ಲಿ H125 ಹೆಲಿಕಾಪ್ಟರ್ ಫೈನಲ್ ಅಸೆಂಬ್ಲಿ ಲೈನ್ ಅನ್ನು ತಯಾರಿಸಲು ಏರ್‌ಬಸ್ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಜಂಟಿ ಉದ್ಯಮವನ್ನು ಇಬ್ಬರು ನಾಯಕರು ವರ್ಚುವಲ್‌ನಲ್ಲಿ ಉದ್ಘಾಟಿಸಿದರು. ಭಾರತ ಮತ್ತು ಫ್ರಾನ್ಸ್ ಜಂಟಿಯಾಗಿ ಭಾರತದಲ್ಲಿ ಮೌಂಟ್ ಎವರೆಸ್ಟ್ ಶಿಖರದ ಎತ್ತರಕ್ಕೆ ಹಾರುವ ಸಾಮರ್ಥ್ಯವಿರುವ ವಿಶ್ವದ ಏಕೈಕ ಹೆಲಿಕಾಪ್ಟರ್ ಅನ್ನು ತಯಾರಿಸಿ ಜಾಗತಿಕವಾಗಿ ರಫ್ತು ಮಾಡಲಿವೆ ಎಂದು ಪ್ರಧಾನಿ ಹೇಳಿದರು.
ಭಾರತಕ್ಕೆ ತಮ್ಮ ನಾಲ್ಕನೇ ಅಧಿಕೃತ ಭೇಟಿಯಲ್ಲಿ ಪ್ರಧಾನಿ ಮೋದಿ ಅವರಿಗೆ ನೀಡಿದ ಆತ್ಮೀಯ ಸ್ವಾಗತಕ್ಕಾಗಿ ಧನ್ಯವಾದ ಹೇಳಿದ ಮ್ಯಾಕ್ರನ್, “ಭಾರತ ಮತ್ತು ಫ್ರಾನ್ಸ್ ನಡುವಿನ ದ್ವಿಪಕ್ಷೀಯ ಸಂಬಂಧವು ನಿಜವಾಗಿಯೂ ಗಮನಾರ್ಹವಾಗಿದೆ ಮತ್ತು ವಿಶಿಷ್ಟವಾಗಿದೆ. ಈ ಸಂಬಂಧವು ನಂಬಿಕೆ, ಮುಕ್ತತೆ ಮತ್ತು ಮಹತ್ವಾಕಾಂಕ್ಷೆಯದ್ದಾಗಿದೆ” ಎಂದು ಹೇಳಿದರು.
“ಈ ಸಂಬಂಧದಲ್ಲಿ ಸಂಪೂರ್ಣ ನಂಬಿಕೆ”ಯನ್ನು ಪ್ರತಿಬಿಂಬಿಸುವ ಮೂಲಕ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಗೆ ಸಂಬಂಧಗಳನ್ನು ಉನ್ನತೀಕರಿಸಲು ಎರಡೂ ಕಡೆಯವರು ನಿರ್ಧರಿಸಿದ್ದಾರೆ ಎಂದು ಅವರು ಹೇಳಿದರು.
ಸಾಂಸ್ಕೃತಿಕ ಸಂಬಂಧಗಳನ್ನು ಮಾತನಾಡಿದ ಮೋದಿ, ಭಾರತವು ಶೀಘ್ರದಲ್ಲೇ ಫ್ರಾನ್ಸ್‌ನಲ್ಲಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರವನ್ನು ತೆರೆಯಲಿದೆ ಮತ್ತು ಲೋಥಾಲ್‌ನಲ್ಲಿ ರಾಷ್ಟ್ರೀಯ ಕಡಲ ಪರಂಪರೆಯ ಸಂಕೀರ್ಣದಂತಹ ಯೋಜನೆಗಳಲ್ಲಿ ಸಹಕರಿಸಲಿದೆ. ಇದು ಜಾಗತಿಕ ಸ್ಥಿರತೆ ಮತ್ತು ಸಮೃದ್ಧಿಯ ಮೇಲೆ ಕೇಂದ್ರೀಕರಿಸಿದ ಭಾರತ-ಫ್ರಾನ್ಸ್ ಪಾಲುದಾರಿಕೆಯಲ್ಲಿ ಹೊಸ ಅಧ್ಯಾಯವಾಗಲಿದೆ ಎಂದು ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ಅತಿದೊಡ್ಡ ಮಿಲಿಟರಿ ಖರೀದಿ ಕಾರ್ಯಕ್ರಮಗಳಲ್ಲಿ ಒಂದಾದ ಸರ್ಕಾರದಿಂದ ಸರ್ಕಾರಕ್ಕೆ ಚೌಕಟ್ಟಿನಡಿಯಲ್ಲಿ ಫ್ರಾನ್ಸ್‌ನಿಂದ 114 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಪ್ರಸ್ತಾಪವನ್ನು ಭಾರತ ಅಂಗೀಕರಿಸಿದ ಕೆಲವು ದಿನಗಳ ನಂತರ ಶೃಂಗಸಭೆ ಬಂದಿದೆ.
ಭಾರತವು ಫ್ರಾನ್ಸ್‌ನ ಅತ್ಯಂತ ವಿಶ್ವಾಸಾರ್ಹ ಪಾಲುದಾರರಲ್ಲಿ ಒಂದಾಗಿದೆ. ರಫೇಲ್ ಜೆಟ್‌ಗಳಿಂದ ಹಿಡಿದು ಜಲಾಂತರ್ಗಾಮಿ ನೌಕೆಗಳವರೆಗೆ, ನಾವು ರಕ್ಷಣಾ ಸಹಕಾರವನ್ನು ವಿಸ್ತರಿಸುತ್ತಿದ್ದೇವೆ” ಎಂದು ಮ್ಯಾಕ್ರನ್ ಹೇಳಿದರು. ಇಂಡೋ-ಪೆಸಿಫಿಕ್, ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ ಸಹಕಾರವನ್ನು ಮ್ಯಾಕ್ರನ್ ಎತ್ತಿ ತೋರಿಸಿದ ಅವರು, ಎರಡೂ ರಾಷ್ಟ್ರಗಳು ಕಾನೂನಿನ ನಿಯಮ ಮತ್ತು ಪ್ರಾಬಲ್ಯವಿಲ್ಲದ ಜಗತ್ತಿನಲ್ಲಿ ನಂಬಿಕೆ ಇಡುತ್ತವೆ ಎಂದು ಹೇಳಿದರು.
ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಮತ್ತು ಅಂತಾರಾಷ್ಟ್ರೀಯ ಸೌರ ಒಕ್ಕೂಟದಂತಹ ಜಂಟಿ ಉಪಕ್ರಮಗಳನ್ನು ಉಲ್ಲೇಖಿಸಿ, ಕಳೆದ ಎಂಟು ವರ್ಷಗಳಲ್ಲಿ ಎರಡೂ ದೇಶಗಳು ಒಟ್ಟಾಗಿ ಹಲವಾರು ಮಹತ್ವಾಕಾಂಕ್ಷೆಯ ಉಪಕ್ರಮಗಳನ್ನು ಪ್ರಾರಂಭಿಸಿವೆ ಎಂದು ಅವರು ಹೇಳಿದರು.
ಮ್ಯಾಕ್ರನ್ ಸೋಮವಾರ ರಾತ್ರಿ ಫ್ರೆಂಚ್ ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರನ್ ಅವರೊಂದಿಗೆ ಭಾರತಕ್ಕೆ ಮೂರು ದಿನಗಳ ಅಧಿಕೃತ ಭೇಟಿಗಾಗಿ (ಫೆಬ್ರವರಿ 17-19) ಮುಂಬೈಗೆ ಬಂದಿಳಿದರು.


ನಿಮ್ಮ ಕಾಮೆಂಟ್ ಬರೆಯಿರಿ