ನವದೆಹಲಿ: ಭಾರತ ಮತ್ತು ಅಮೆರಿಕ ಸೇರಿದಂತೆ ವಿಶ್ವದಾದ್ಯಂತ ಮಂಗಳವಾರ ಲಕ್ಷಾಂತರ ಬಳಕೆದಾರರಿಗೆ ಯೂಟ್ಯೂಬ್ ಸೇವೆ ಸ್ಥಗಿತಗೊಂಡಿದೆ. ತಾಂತ್ರಿಕ ದೋಷಗಳಿಂದಾಗಿ ಜನರು ವೀಡಿಯೊ ವೀಕ್ಷಿಸಲು ಸಾಧ್ಯವಾಗದೆ ಪರದಾಡುವಂತಾಯಿತು.
ವೆಬ್ಸೈಟ್ ಸ್ಥಗಿತದ ಬಗ್ಗೆ ಮಾಹಿತಿ ನೀಡುವ ‘ಡೌನ್ಡಿಟೆಕ್ಟರ್’ (Downdetector) ಪ್ರಕಾರ, ಅಮೆರಿಕವೊಂದರಲ್ಲೇ ಸುಮಾರು 2,83,490ಕ್ಕೂ ಹೆಚ್ಚು ಬಳಕೆದಾರರು ಯೂಟ್ಯೂಬ್ ಲಾಗಿನ್ ಸಮಸ್ಯೆಗಳ ಬಗ್ಗೆ ವರದಿ ಮಾಡಿದ್ದಾರೆ. ಹೆಚ್ಚಿನವರು ಯೂಟ್ಯೂಬ್ ಆ್ಯಪ್ ಬಳಸುವಾಗ ಸಮಸ್ಯೆ ಎದುರಿಸಿದರೆ, ಇನ್ನು ಕೆಲವರು ವೆಬ್ಸೈಟ್ ಮತ್ತು ಯೂಟ್ಯೂಬ್ ಟಿವಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರಿದ್ದಾರೆ.
ಅಮೆರಿಕದ ಚಿಕಾಗೋ, ವಾಷಿಂಗ್ಟನ್, ನ್ಯೂಯಾರ್ಕ್ ಮತ್ತು ಬೋಸ್ಟನ್ನಂತಹ ಪ್ರಮುಖ ನಗರಗಳಲ್ಲಿ ಈ ಪರಿಣಾಮ ಹೆಚ್ಚಾಗಿ ಕಂಡುಬಂದಿದೆ. ಭಾರತದ ಬಳಕೆದಾರರೂ ಸಹ ವಿಡಿಯೋಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂದು ದೂರು ನೀಡಿದ್ದಾರೆ.
ಯೂಟ್ಯೂಬ್ ಪ್ರತಿಕ್ರಿಯೆ
ಸೇವೆ ಸ್ಥಗಿತಗೊಂಡ ಬೆನ್ನಲ್ಲೇ ಯೂಟ್ಯೂಬ್ ಸಂಸ್ಥೆಯು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. “ನಿಮ್ಮಲ್ಲಿ ಕೆಲವರಿಗೆ ಯೂಟ್ಯೂಬ್ ಬಳಸಲು ತೊಂದರೆಯಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ನಮ್ಮ ತಂಡವು ಈ ಬಗ್ಗೆ ಕೆಲಸ ಮಾಡುತ್ತಿದ್ದು, ಶೀಘ್ರದಲ್ಲೇ ಅಪ್ಡೇಟ್ ನೀಡಲಿದ್ದೇವೆ,” ಎಂದು ತಿಳಿಸಿದೆ.
ನಂತರ ನೀಡಿದ ಮತ್ತೊಂದು ಅಪ್ಡೇಟ್ನಲ್ಲಿ, “ನಮ್ಮ ರೆಕಮೆಂಡೇಶನ್ ಸಿಸ್ಟಮ್ನಲ್ಲಿನ (Recommendations system) ದೋಷದಿಂದಾಗಿ ಹೋಮ್ಪೇಜ್, ಆ್ಯಪ್, ಯೂಟ್ಯೂಬ್ ಮ್ಯೂಸಿಕ್ ಮತ್ತು ಯೂಟ್ಯೂಬ್ ಕಿಡ್ಸ್ನಲ್ಲಿ ವಿಡಿಯೋಗಳು ಕಾಣಿಸುತ್ತಿಲ್ಲ. ಸದ್ಯ ಹೋಮ್ಪೇಜ್ ಸರಿಯಾಗಿದ್ದು, ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸಲು ಪ್ರಯತ್ನ ಮುಂದುವರಿದಿದೆ,” ಎಂದು ಕಂಪನಿ ಸ್ಪಷ್ಟಪಡಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಆಕ್ರೋಶ
ಯೂಟ್ಯೂಬ್ ಸ್ಥಗಿತಗೊಂಡಿದ್ದರಿಂದ ಬೇಸತ್ತ ಬಳಕೆದಾರರು ಎಕ್ಸ್ (ಟ್ವಿಟ್ಟರ್) ಮತ್ತು ಇತರ ಜಾಲತಾಣಗಳಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವರು “ನಮ್ಮ ಸ್ಕ್ರೀನ್ ಸಂಪೂರ್ಣ ಬ್ಲಾಂಕ್ ಆಗಿದೆ” ಎಂದರೆ, ಇನ್ನು ಕೆಲವರು “ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ” ಎಂದು ಮೀಮ್ಗಳನ್ನು ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಈ ತಾಂತ್ರಿಕ ದೋಷಕ್ಕೆ ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ.


ನಿಮ್ಮ ಕಾಮೆಂಟ್ ಬರೆಯಿರಿ