ಹಲ್ಲಿಲ್ಲದ ಹಾವಿನಿಂದ ಬಯಲಾದ ಗಂಡನ ಕೊಲೆ ಕೃತ್ಯ ; ಪತ್ನಿ-ಪ್ರಿಯಕರನಿಗೆ ಮರಣದಂಡನೆ ಶಿಕ್ಷೆ

ಮೀರತ್: ಗಂಡನನ್ನು ಕೊಲೆ ಮಾಡಿ, ಅದು ಹಾವು ಕಡಿತದಿಂದ ಸಂಭವಿಸಿದ ಸಾವು ಎಂಬಂತೆ ಬಿಂಬಿಸಲು ಮೃತದೇಹದ ಪಕ್ಕದಲ್ಲಿ ಜೀವಂತ ಹಾವನ್ನು ಇರಿಸಿದ್ದ ಮಹಿಳೆ ಹಾಗೂ ಆಕೆಯ ಪ್ರಿಯಕರನಿಗೆ ಉತ್ತರ ಪ್ರದೇಶದ ಮೀರತ್‌ ನ್ಯಾಯಾಲಯ ಶುಕ್ರವಾರ ಮರಣದಂಡನೆ ವಿಧಿಸಿದೆ.
ಮೀರತ್‌ನ ಅಕ್ಬರಪುರದ ಸಾದತ್ ಗ್ರಾಮದ ನಿವಾಸಿ ಅಮಿತ್ ಕಶ್ಯಪ್ ಅಲಿಯಾಸ್ ಮಿಕ್ಕಿ ಕಶ್ಯಪ್ ಅವರ ಕೊಲೆ ಪ್ರಕರಣದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜೈವೀರ ಸಿಂಗ್ ನಾಗರ್ ಅವರು ಶುಕ್ರವಾರ ರವಿತಾ ಹಾಗೂ ಆಕೆಯ ಪ್ರಿಯಕರ ಅಮರದೀಪಗೆ ಮರಣದಂಡನೆ ವಿಧಿಸಿದ್ದಾರೆ.
ಕಳೆದ ವರ್ಷದ ಏಪ್ರಿಲ್‌ 13ರಂದು ಅಮಿತ್ ತಮ್ಮ ಮನೆಯಲ್ಲಿನ ಮಂಚದ ಮೇಲೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಮೃತದೇಹದ ಪಕ್ಕದಲ್ಲಿ ಜೀವಂತ ಹಾವೊಂದು ಕಂಡುಬಂದಿತ್ತು. ಹಾವು ಕಡಿತದಿಂದಲೇ ಅಮಿತ್ ಮೃತಪಟ್ಟಿರಬಹುದು ಎಂದು ಆರಂಭದಲ್ಲಿ ಕುಟುಂಬದವರು ಶಂಕಿಸಿದ್ದರು.ಆ ಹಾವಿನ ವಿಷದ ಹಲ್ಲುಗಳನ್ನು ತೆಗೆದುಹಾಕಲಾಗಿತ್ತು ಮತ್ತು ಅದು ವಿಷಪೂರಿತವಾಗಿರಲಿಲ್ಲ ಎಂಬುದು ಪೊಲೀಸರಿಗೆ ತಿಳಿದುಬಂದ ನಂತರ, ಅವರ ಅಪರಾಧ ಬೆಳಕಿಗೆ ಬಂದಿತು.
ಅಲ್ಲದೆ, ಮರಣೋತ್ತರ ಪರೀಕ್ಷೆಯಲ್ಲಿ ಅಮಿತ್ ಅವರ ಕುತ್ತಿಗೆ ಹಾಗೂ ಮೂಗಿನ ಭಾಗದಲ್ಲಿ ಗಾಯದ ಗುರುತುಗಳು ಪತ್ತೆಯಾಗಿದ್ದವು. ಅವರನ್ನು ಉಸಿರುಗಟ್ಟಿಸಿದ ಪರಿಣಾಮ ಅವರು ಮೃತಪಟ್ಟಿದ್ದಾರೆ ಎಂಬುದು ಪರೀಕ್ಷೆಯಿಂದ ತಿಳಿದುಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಅಮಿತ್ ಅವರ ಸಹೋದರ ಮೋನು ಅವರು 2025ರ ಏಪ್ರಿಲ್‌ 16ರಂದು ರವಿತಾ ಹಾಗೂ ಅಮರದೀಪ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದರು.

ಪ್ರಮುಖ ಸುದ್ದಿ :-   ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌, ಏಕದಿನ ಸರಣಿಗೆ ಭಾರತದ ಕ್ರಿಕೆಟ್‌ ತಂಡ ಪ್ರಕಟ

ಅಕ್ರಮ ಸಂಬಂಧವೇ ಕೊಲೆಗೆ ಕಾರಣ
ರವಿತಾ ಹಾಗೂ ಅಮಿತ್ ಕಶ್ಯಪ್‌ ಸುಮಾರು ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಮೂವರು ಮಕ್ಕಳಿದ್ದಾರೆ. ಅಮಿತ್ ಮತ್ತು ಅಮರದೀಪ ಸ್ನೇಹಿತರಾಗಿದ್ದು, ಒಟ್ಟಿಗೆ ಕೆಲಸ ಮಾಡುತ್ತಿದ್ದರು ಎಂದು ಪ್ರಾಸಿಕ್ಯೂಷನ್ ತಿಳಿಸಿದೆ.
ತನಿಖಾಧಿಕಾರಿಗಳ ಪ್ರಕಾರ, ಕೊಲೆಗೆ ಎಂಟರಿಂದ ಒಂಬತ್ತು ತಿಂಗಳ ಮೊದಲು ರವಿತಾ ಮತ್ತು ಅಮರದೀಪ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು ಎನ್ನಲಾಗಿದೆ. ಈ ವಿಚಾರ ಅಮಿತ್‌ಗೆ ತಿಳಿದ ಬಳಿಕ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು.
ಪ್ರಾಸಿಕ್ಯೂಷನ್ ವಾದದ ಪ್ರಕಾರ, 2025ರ ಏಪ್ರಿಲ್‌ 12ರಂದು ಅಮರದೀಪ ಜೀವಂತ ಹಾವೊಂದನ್ನು ವ್ಯವಸ್ಥೆ ಮಾಡಿದ್ದ. ಅದೇ ರಾತ್ರಿ ಅಮಿತ್ ನಿದ್ರೆಗೆ ಜಾರಿದ ಬಳಿಕ ರವಿತಾ ಆತನನ್ನು ಮನೆಗೆ ಕರೆಸಿಕೊಂಡಿದ್ದಳು. ಬಳಿಕ ಇಬ್ಬರೂ ಸೇರಿ ಅಮಿತನನ್ನು ಉಸಿರುಗಟ್ಟಿಸಿ ಕೊಂದು, ಹಾವು ಕಡಿತದಿಂದ ಮೃತಪಟ್ಟಿದ್ದಾರೆ ಎಂಬಂತೆ ಬಿಂಬಿಸಲು ಸಂಚು ರೂಪಿಸಿದ್ದರು.
ಯೋಜನೆಯಂತೆ ರವಿತಾ ಅಮಿತ್‌ನ ಬಾಯಿಯನ್ನು ಬಿಗಿಯಾಗಿ ಮುಚ್ಚಿಹಿಡಿದಿದ್ದಳು. ಈ ವೇಳೆ ಅಮರದೀಪ ಆತನ ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಿದ್ದ. ಬಳಿಕ ತನಿಖಾಧಿಕಾರಿಗಳನ್ನು ದಾರಿ ತಪ್ಪಿಸುವ ಉದ್ದೇಶದಿಂದ ಮೃತದೇಹದ ಪಕ್ಕದಲ್ಲಿ ಜೀವಂತ ಹಾವನ್ನು ಇರಿಸಿದ್ದರು ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿದೆ.

ಪ್ರಮುಖ ಸುದ್ದಿ :-   2027ರ ಉತ್ತರ ಪ್ರದೇಶ ಚುನಾವಣೆ | ಯೋಗಿ-ಅಖಿಲೇಶ ಜನಪ್ರಿಯತೆ-ಕಾರ್ಯಕ್ಷಮತೆ ; ನ್ಯೂಸ್18 ಸಮೀಕ್ಷೆಯಲ್ಲಿ ಕಂಡುಬಂದಿದ್ದೇನು ?

ರವಿತಾ ಮತ್ತು ಅಮರದೀಪ ವಿರುದ್ಧದ ಕೊಲೆ ಆರೋಪಗಳು ಅಕ್ಟೋಬರ್‌ 7ರಂದು ನ್ಯಾಯಾಲಯದಲ್ಲಿ ಸಾಬೀತಾಗಿದ್ದವು. ಶಿಕ್ಷೆಯ ಪ್ರಮಾಣ ಪ್ರಕಟಿಸುವ ಮೊದಲು ರವಿತಾ ತನ್ನ ಮೂವರು ಎಳೆಯ ಮಕ್ಕಳ ಭವಿಷ್ಯವನ್ನು ಪರಿಗಣಿಸಿ ಶಿಕ್ಷೆಯಲ್ಲಿ ವಿನಾಯಿತಿ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಳು. ಅಮರದೀಪ ಕೂಡ ತನ್ನ ವಯಸ್ಸಾದ ತಂದೆ-ತಾಯಿಯನ್ನು ಉಲ್ಲೇಖಿಸಿ ಶಿಕ್ಷೆಯಲ್ಲಿ ಕರುಣೆ ತೋರುವಂತೆ ಕೋರಿದ್ದ ಎಂದು ನ್ಯಾಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಅಮಿತ ಅವರ ತಾಯಿ ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕೆಂದು ನ್ಯಾಯಾಲಯವನ್ನು ಒತ್ತಾಯಿಸಿದ್ದರು. ಮಗನ ಸಾವಿನ ಆಘಾತವನ್ನು ತಾಳಲಾರದೆ ಅಮಿತ ಅವರ ತಂದೆ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಪ್ರಕರಣದಲ್ಲಿ ಹಾವು ಹಿಡಿಯುವ ಕೆಲಸ ಮಾಡುತ್ತಿದ್ದ ಪ್ರೀತಮನಾಥ ನೀಡಿದ ಸಾಕ್ಷ್ಯ ಹಾಗೂ ಆರೋಪಿಗಳ ಕಾಲ್‌ಗಳ ವಿವರ ದಾಖಲೆಗಳು (ಕಾಲ್ ಡಿಟೇಲ್ ರೆಕಾರ್ಡ್ಸ್‌) ಪ್ರಮುಖ ಸಾಕ್ಷ್ಯಗಳಾಗಿ ಪರಿಣಮಿಸಿದ್ದವು ಎಂದು ಪ್ರಾಸಿಕ್ಯೂಷನ್ ತಿಳಿಸಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement