ಯುವತಿಯ ಇನ್‌ಸ್ಟಾಗ್ರಾಮ್ ವೈರಲ್ ಆದ ನಂತ್ರ 6 ವರ್ಷಗಳಿಂದ ಕಿರುಕುಳ ನೀಡುತ್ತಿದ್ದ ವ್ಯಕ್ತಿ ಜೈಲು ಪಾಲು…!

ಸುಮಾರು ಆರು ವರ್ಷಗಳ ಕಾಲ ನಿರಂತರವಾಗಿ ಬೆನ್ನುಬಿದ್ದಿದ್ದ ವ್ಯಕ್ತಿಯ ಕಿರುಕುಳ ಮತ್ತು ಆನ್‌ಲೈನ್ ನಲ್ಲಿ ಆತನ ನಿಂದನೆಗಳ ವಿರುದ್ಧ ಹೋರಾಡುತ್ತಿದ್ದ ಅಮೂಲ್ಯ ಶರ್ಮಾ ಎಂಬ ಯುವತಿಗೆ ಅಂತಿಮವಾಗಿ ನ್ಯಾಯ ಸಿಕ್ಕಿದೆ. ಬೆದರಿಕೆ ಹಾಗೂ ಅವಹೇಳನಕಾರಿ ಇಮೇಲ್‌ಗಳನ್ನು ಕಳುಹಿಸುತ್ತಿದ್ದ ಅವರ ಹಳೆಯ ಸಹಪಾಠಿಯನ್ನು ಪೊಲೀಸರು ಬಂಧಿಸಿದ್ದಾರೆ. ಈಕೆಯ ನೋವಿನ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
ಅಮೂಲ್ಯ ಶರ್ಮಾ ಅವರ ಪ್ರಕಾರ, ಈ ಕಿರುಕುಳ ಕೇವಲ ಸಾಂದರ್ಭಿಕ ಸಂದೇಶಗಳಿಗೆ ಸೀಮಿತವಾಗಿರಲಿಲ್ಲ. ಇದೊಂದು ದೀರ್ಘಕಾಲದ ಮತ್ತು ಆತಂಕಕಾರಿ ಪ್ರವೃತ್ತಿಯಾಗಿತ್ತು. ನಿರಂತರವಾಗಿ ಬರುತ್ತಿದ್ದ ನಿಂದನಾತ್ಮಕ ಇಮೇಲ್‌ಗಳು, ಜೀವ ಬೆದರಿಕೆಗಳು ಮತ್ತು ಆಕ್ಷೇಪಾರ್ಹ ಕಾಮೆಂಟ್‌ಗಳು ಅವರನ್ನು ಮಾನಸಿಕವಾಗಿ ಕುಗ್ಗಿಸಿದ್ದವು ಮತ್ತು ಆರು ವರ್ಷಗಳ ಕಾಲ ಸದಾ ಭಯದಲ್ಲಿ ಬದುಕುವಂತೆ ಮಾಡಿದ್ದವು.
ನಿಧಾನಗತಿಯ ತನಿಖೆ ಮತ್ತು ದಾಖಲೆಗಳ ಸಂಗ್ರಹ
ಈ ಹಿಂದೆ ಅವರು ಅಧಿಕಾರಿಗಳ ಮೊರೆ ಹೋಗಿದ್ದರೂ, ಪ್ರಕರಣದ ತನಿಖೆ ಬಹಳ ನಿಧಾನಗತಿಯಲ್ಲಿ ಸಾಗಿತ್ತು. ನ್ಯಾಯ ಸಿಗುವುದು ವಿಳಂಬವಾದಾಗ ದೃತಿಗೆಡದ ಅಮೂಲ್ಯ, ತಮಗೆ ಬಂದ ಪ್ರತಿಯೊಂದು ಇಮೇಲ್, ಆಡಿಯೋ ರೆಕಾರ್ಡಿಂಗ್ ಮತ್ತು ಡಿಜಿಟಲ್ ಪುರಾವೆಗಳನ್ನು ಕಳೆದ ಆರು ವರ್ಷಗಳಿಂದ ಬಹಳ ಎಚ್ಚರಿಕೆಯಿಂದ ಸಂಗ್ರಹಿಸಿಟ್ಟುಕೊಂಡಿದ್ದರು.
ವೈರಲ್ ಆದ ಇನ್ಸ್ಟಾಗ್ರಾಮ್ ಪೋಸ್ಟ್
ವ್ಯವಸ್ಥೆಯ ವಿಳಂಬದಿಂದ ಬೇಸತ್ತ ಅಮೂಲ್ಯ, ಜನವರಿ ತಿಂಗಳಲ್ಲಿ ತಮ್ಮ ನೋವನ್ನು ಇನ್ಸ್ಟಾಗ್ರಾಮ್ ಮೂಲಕ ಜಗತ್ತಿನ ಮುಂದೆ ತೆರೆದಿಟ್ಟರು. ಕಿರುಕುಳದ ಸ್ಕ್ರೀನ್‌ಶಾಟ್‌ಗಳು ಮತ್ತು ವಿಡಿಯೋಗಳನ್ನು ಸಾಕ್ಷಿಯಾಗಿ ಹಂಚಿಕೊಂಡರು. ಈ ಪೋಸ್ಟ್ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿ, ಸಾವಿರಾರು ಜನರ ಬೆಂಬಲ ವ್ಯಕ್ತವಾಯಿತು. ಸೈಬರ್ ಸ್ಟಾಕಿಂಗ್ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ದೇಶಾದ್ಯಂತ ದೊಡ್ಡ ಅಭಿಯಾನವೇ ನಡೆಯಿತು.
ಬ್ರೋಸೆಫ್ ಫೌಂಡೇಶನ್ ನೆರವು ಮತ್ತು ಎಫ್‌ಐಆರ್‌ ದಾಖಲು
ಸಂಕಷ್ಟದಲ್ಲಿರುವವರಿಗೆ ನೆರವಾಗುವ ‘ಬ್ರೋಸೆಫ್ ಫೌಂಡೇಶನ್’ (Broseph Foundation) ಸ್ವಯಂಸೇವಕರು ಅಮೂಲ್ಯ ಅವರ ನೆರವಿಗೆ ಬಂದರು. ಅವರ ಮಾರ್ಗದರ್ಶನ ಮತ್ತು ಅಮೂಲ್ಯ ಸಂಗ್ರಹಿಸಿದ್ದ ಭದ್ರವಾದ ಸಾಕ್ಷ್ಯಗಳ ಆಧಾರದ ಮೇಲೆ, ಜನವರಿ 30, 2026 ರಂದು ಅಧಿಕೃತವಾಗಿ ಎಫ್‌ಐಆರ್‌ (FIR) ದಾಖಲಾಯಿತು. ದೂರಿನಲ್ಲಿ ಬರಹಗಳು ಮತ್ತು ಆಡಿಯೋ ರೆಕಾರ್ಡಿಂಗ್‌ಗಳು ಸೇರಿದಂತೆ ಒಟ್ಟು 55 ಪ್ರಬಲ ಸಾಕ್ಷ್ಯಗಳನ್ನು ಪೊಲೀಸರಿಗೆ ಸಲ್ಲಿಸಲಾಗಿತ್ತು.
ವ್ಯಾಲೆಂಟೈನ್ಸ್ ಡೇ ಮುನ್ನ ಬಂಧನ
ಎಫ್‌ಐಆರ್‌ ದಾಖಲಾದ ಎರಡು ವಾರಗಳೊಳಗೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ವಿಶೇಷವೆಂದರೆ, ಪ್ರೇಮಿಗಳ ದಿನದಂದೇ (Valentine’s Day) ಆರೋಪಿ ಜೈಲು ಪಾಲಾಗಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಅಮೂಲ್ಯ, “ಅವನು ಇರಬೇಕಾದ ಜಾಗಕ್ಕೇ ಹೋಗಿದ್ದಾನೆ” ಎಂದು ಬರೆದುಕೊಂಡಿದ್ದಾರೆ.
“ಇದು ಕೇವಲ ಆರಂಭವಷ್ಟೇ”
ತಮಗೆ ಬೆಂಬಲ ನೀಡಿದ ಮಹಿಳೆಯರಿಗೆ ಮತ್ತು ನೆಟ್ಟಿಗರಿಗೆ ಧನ್ಯವಾದ ಅರ್ಪಿಸಿರುವ ಅಮೂಲ್ಯ, “ಇದು ಒಂದು ಸುಂದರ ಕನಸಿನಂತಿದೆ. ಆದರೆ ಹೋರಾಟ ಇಲ್ಲಿಗೆ ಮುಗಿದಿಲ್ಲ,” ಎಂದು ಹೇಳಿದ್ದಾರೆ. ಆರೋಪಿ ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಮತ್ತು ನ್ಯಾಯಾಲಯದ ಪ್ರಕ್ರಿಯೆಗಳು ದೀರ್ಘವಾಗಿರಬಹುದು ಎಂಬ ಅರಿವು ನನಗಿದೆ, ಆದರೆ ಈ ಬಂಧನವು ನ್ಯಾಯದತ್ತ ಇಟ್ಟ ಮೊದಲ ಶಕ್ತಿಶಾಲಿ ಹೆಜ್ಜೆ ಎಂದು ಅವರು ಭಾವಿಸಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement